Advertisement
ಕರ್ನಾಟಕದ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಅವರು ಕರ್ನಾಟಕ ರಾಜ್ಯ ಸರಕಾರದ ಮರಾಠ ಅಭಿವೃದ್ಧಿ ನಿಗಮ ರಚನೆಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಹಾರಾಷ್ಟ್ರ ಸರಕಾರವೂ ಬೊರಿವಲಿಯಲ್ಲಿ ಮುಂಬಯಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು, ಅದಕ್ಕೆ ಪ್ರತೀ ವರ್ಷ 10 ಕೋ. ರೂ.ಗಳನ್ನು ನೀಡುತ್ತಿದೆ ಎಂದಿದ್ದರು.
Related Articles
Advertisement
ಕಳೆದ ಹಲವು ವರ್ಷಗಳಿಂದ ರಾಜಕೀಯ ಕಾರಣಗಳಿಗೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ವಿವಾದ ಉದ್ಭವಿಸಿದರೂ ಮಹಾರಾಷ್ಟ್ರದಲ್ಲಿನ ಕನ್ನಡಿಗರು ಸಾಮರಸ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಜನ್ಮಭೂಮಿ ಎಷ್ಟು ಮುಖ್ಯವೋ ಕರ್ಮಭೂಮಿಯೂ ಅಷ್ಟೇ ಮುಖ್ಯ ಎನ್ನುತ್ತಾ ಕ್ರಿಯಾಶೀಲರಾಗಿದ್ದಾರೆ. ಈ ಮಧ್ಯೆ ಶಾಸಕರ ಇಂತಹ ಹೇಳಿಕೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಿದೆ. ಇಂಥ ಪ್ರಯತ್ನ ಸಲ್ಲದು ಎಂಬುದು ಇಲ್ಲಿನ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳ ಅಭಿಪ್ರಾಯ.
ಮುಂಬಯಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ ಎಂಬ ಹೇಳಿಕೆ ಆಶ್ಚರ್ಯಕರ. 20 ಲಕ್ಷ ತುಳು-ಕನ್ನಡಿಗರು ಮುಂಬಯಿಯಲ್ಲಿದ್ದು, ಈವರೆಗೆ ಕರ್ನಾಟಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಇಲ್ಲಿನ ಕನ್ನಡದ ಕೆಲಸಗಳಿಗೆ ನೇರವಾಗಿ ನೆರವು ಸಿಕ್ಕಿಲ್ಲ. ಪ್ರಾಧಿಕಾರದಿಂದ ಇಲ್ಲಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಲಭಿಸುತ್ತಿದೆಯಷ್ಟೇ. ಹೀಗಿದ್ದೂ ಇಂಥದೊಂದು ಸುಳ್ಳು ಹೇಳಿದ್ದು ಖೇದಕರ.-ಡಾ| ಜಿ. ಎನ್. ಉಪಾಧ್ಯ ಮುಖ್ಯಸ್ಥರು, ಕನ್ನಡ ವಿಭಾಗ ಮುಂಬಯಿ ವಿವಿ
ನಾನು 1955ರಿಂದ ಮುಂಬಯಿಯಲ್ಲಿ ನೆಲೆಸಿದ್ದು, ಇಲ್ಲಿನ ಬಹತೇಕ ಕನ್ನಡ ಸಂಘ, ಕರ್ನಾಟಕ ಸಂಘಗಳ ಬಗ್ಗೆ ಮಾಹಿತಿ ಇದೆ. ಆದರೆ ಬೊರಿವಿಲಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ ಎಂದು ತಿಳಿದು ಆಶ್ಚರ್ಯವಾಯಿತು. ಇಂತಹ ಹೇಳಿಕೆ ಬದಲು ಈಗಾಗಲೇ ಮುಂಬಯಿ ಆಕಾಶವಾಣಿಯಲ್ಲಿ ಕನ್ನಡ ಭಾಷಾ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದ್ದು, ಮತ್ತೆ ಪ್ರಾರಂಭಿಸುವಂತೆ ಜನಪ್ರತಿನಿಧಿಗಳು ಹೋರಾಟ ನಡೆಸಲಿ. -ಡಾ| ಸುನೀತಾ ಎಂ. ಶೆಟ್ಟಿ, ಹಿರಿಯ ಸಾಹಿತಿ
ಇಲ್ಲದ್ದನ್ನು ಇದೆ ಎಂದು ಹೇಳಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ರಾಜಕಾರಣಿಗಳು ಒಂದೋ ಅದನ್ನು ತೋರಿಸಲಿ, ಇಲ್ಲವೆ ಅವರು ಹೇಳಿಕೆಯನ್ನು ವಾಪಸು ಪಡೆಯಬೇಕು. ನಮ್ಮ ಮುಂಬಯಿ ಕನ್ನಡಿಗರು ಮೊದಲಿಗೆ ಅವರನ್ನು ಕರೆದು ಮೆರವಣಿಗೆ ಮಾಡುವುದನ್ನು ನಿಲ್ಲಿಸಬೇಕು. -ಡಾ| ಕೆ. ರಘುನಾಥ್, ನಿವೃತ್ತ ಮುಖ್ಯಸ್ಥರು: ಕನ್ನಡ ವಿಭಾಗ ಆರ್‌ಜೆ ಕಾಲೇಜು ಘಾಟ್‌ಕೋಪರ್
ಡೊಂಬಿವಲಿ ಕರ್ನಾಟಕ ಸಂಘವು ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಈವರೆಗೆ ಮುಂಬಯಿಯಲ್ಲಿರುವ ಪ್ರಾಧಿಕಾರದ ಬಗ್ಗೆ ಗೊತ್ತಿಲ್ಲ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದಲ್ಲಿ ನೂರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕರ್ನಾಟಕ ಸರಕಾರದಿಂದಲೂ ನಮಗೆ ಅನುದಾನ ಸಿಕ್ಕಿಲ್ಲ. ಇಂತಹ ಹೇಳಿಕೆಗಳನ್ನು ನೀಡುವಾಗ ಶಾಸಕರು ಎಚ್ಚರಿಕೆ ವಹಿಸಬೇಕು. -ಇಂದ್ರಾಳಿ ದಿವಾಕರ ಶೆಟ್ಟಿ ಅಧ್ಯಕ್ಷರು, ಡೊಂಬಿವಲಿ ಕರ್ನಾಟಕ ಸಂಘ
ಮಹಾರಾಷ್ಟ್ರ ಸರಕಾರ ಬೊರಿವಲಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಪ್ರತೀವರ್ಷ ಹತ್ತು ಕೋಟಿ ರೂ. ಅನುದಾನವನ್ನು ನೀಡುತ್ತಿದೆ ಎಂಬುದು ಬರೇ ಅಜ್ಞಾನವಲ್ಲ, ಶಾಸಕರೊಬ್ಬರ ಬೇಜವಾಬ್ದಾರಿಯ ಹೇಳಿಕೆ. ಮಹಾರಾಷ್ಟ್ರ ಸರಕಾರದ ಕಡತದಲ್ಲಿ ಬೊರಿವಲಿಯಲ್ಲಿ (ಇಲ್ಲದ) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆ ಆಗಿದ್ದು, ಅದಕ್ಕೆ ವರ್ಷಂಪ್ರತಿ ಹತ್ತು ಕೋಟಿ ರೂ. ಅನುದಾನ ಬಿಡುಗಡೆ ಆಗುತ್ತಿದ್ದರೆ ಶೀಘ್ರ ತನಿಖೆ ಆಗಬೇಕು. -ಗೋಪಾಲ ತ್ರಾಸಿ, ಕವಿ, ಸಾಹಿತಿ
ಮೊಗವೀರ ವ್ಯವಸ್ಥಾಪಕ ಮಂಡಳಿಯು ಮುಂಬಯಿಯ ಹಿರಿಯ ಸಮುದಾಯ ಸಂಘಟನೆಯಾಗಿದ್ದು, ಕರ್ನಾಟಕ ರಾಜ್ಯ ಸರಕಾರ ಯಾವುದೇ ಪ್ರಾಧಿಕಾರವನ್ನು ಮುಂಬಯಿಯಲ್ಲಿ ರಚಿಸಿದ ಬಗ್ಗೆ ತಿಳಿದಿಲ್ಲ. ಶಾಸಕರ ಇಂತಹ ಹೇಳಿಕೆಗಳು ಮುಂಬಯಿ ಕನ್ನಡಿಗರನ್ನು ಗಲಿಬಿಲಿಗೊಳ್ಳುವಂತೆ ಮಾಡಿದೆ. -ಅಶೋಕ್ ಸುವರ್ಣ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ
ಕರ್ನಾಟಕ ಸಂಘ ಮುಂಬಯಿ ಎಂಟೂವರೆ ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಆದರೆ ಬೊರಿವಲಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇರುವುದು ನಮ್ಮ ಗಮನಕ್ಕೆ ಬಂದಿಲ್ಲ. ಕರ್ನಾಟಕ ಸರಕಾರವು ಮುಂಬಯಿಯಲ್ಲಿ ಅಭಿವೃದ್ಧಿ ಪ್ರಾಧಿಕಾರದ ಶಾಖೆ ತೆರೆದರೆ ಸ್ವಾಗತಾರ್ಹ. -ಓಂದಾಸ್ ಕಣ್ಣಂಗಾರ್, ಗೌರವ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಂಘ ಮುಂಬಯಿ
95 ವರ್ಷಗಳಿಂದ ಮೈಸೂರು ಅಸೋಸಿಯೇಶನ್ ಮುಂಬಯಿ ಕನ್ನಡದ ಚಟುವಟಿ ಗಳನ್ನು ಮಾಡುತ್ತಿದೆ. ಆದರೆ ಬೊರಿವಲಿಯಲ್ಲಿ ಮುಂಬಯಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ ಎಂಬ ಬಗ್ಗೆ ಮಾಹಿತಿ ನಮಗಿಲ್ಲ. ಒಂದು ಹೊಸದಾಗಿ ಸ್ಥಾಪನೆಯಾದರೆ ಕನ್ನಡಿಗರಿಗೆ ಸಹಕಾರಿಯಾಗುತ್ತದೆ. -ಡಾ| ಮಂಜುನಾಥ್, ಟ್ರಸ್ಟಿ, ಮೈಸೂರು ಅಸೋಸಿಯೇಶನ್ ಮುಂಬಯಿ