Advertisement

ಸಮಾಜದ ಹಿತಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು:ಮುದ್ರಾಡಿ ದಿವಾಕರ ಶೆಟ್ಟಿ

04:33 PM Mar 21, 2017 | |

ಮುಂಬಯಿ: ನಾವೆಲ್ಲರೂ ಸಮಾಜದ ಅಂಗವೇ ಆಗಿದ್ದೇವೆ. ಸಮಾಜದ ಸುತ್ತಮುತ್ತಲಿನ ಕಷ್ಟ ಸುಖಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಸಮಾಜ ಸೇವೆ ಅದು ಪ್ರಚಾರದ ವಸ್ತುವಲ್ಲ ಎಂದು ಹಿರಿಯ ಉದ್ಯಮಿ, ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

Advertisement

ಅವರು ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ ಡಾ| ವಿಶ್ವನಾಥ ಕಾರ್ನಾಡ್‌ ಅಭಿನಂದನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂಗ್ಲೀಷ್‌ ವ್ಯಾಮೋಹದಿಂದ ಇವತ್ತು ಕನ್ನಡ ಮೂಲೆ ಪಾಲಾಗುತ್ತಿದೆ. ಗ್ರಾಮೀಣ ಭಾಗದಲ್ಲೂ ಪಾಲಕರು ಇಂಗ್ಲಿಷ್‌ ಮಾಧ್ಯಮ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ನನ್ನ ಊರಿನಲ್ಲೂ ಇಂತಹ ಪರಿಸ್ಥಿತಿ ಉಂಟಾಗಿ ಕನ್ನಡ ಶಾಲೆ ಮುಚ್ಚುವ ಹಂತಕ್ಕೆ ಬಂದಾಗ ನಾನೇ ಮುಂದೆ ಹೋಗಿ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಬಹುಮಾನವನ್ನು ಪ್ರಾಯೋಜಿಸಿದೆ. ಪರಿಣಾಮವಾಗಿ ಮುದ್ರಾಡಿಯಲ್ಲಿ ಕನ್ನಡ ಶಾಲೆ ಚೆನ್ನಾಗಿ ನಡೆಯುತ್ತಿದೆ. ಯಾವುದೇ ಪ್ರಚಾರಕ್ಕಾಗಿ ನಾನು ಈ ಕಾರ್ಯವನ್ನು ಮಾಡಿದ್ದಲ್ಲ. ನನ್ನ ಕರ್ತವ್ಯವೆಂದು ಮಾಡಿದ್ದೇನೆ ಎಂದು ನುಡಿದು ಡಾ| ಕಾರ್ನಾಡರಿಗೆ ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ಕವಿ, ಸಂಘಟಕ ಪೇತ್ರಿ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ, ನಾನು ಕಾರ್ನಾಡರ ಕಥೆಗಳಿಗೆ ಮಾರು ಹೋಗಿದ್ದೇನೆ. ಕಾರ್ನಾಡರ ಕಥೆಗಳಲ್ಲಿ ಬರುವ ಪಾತ್ರಗಳು ನನ್ನನ್ನೇ ಉದ್ದೇಶಿಸಿ ಬರೆದಂತೆ ಭಾಸವಾಗುತ್ತಿತ್ತು. ಅವರ ಕಥೆಗಳು ನನ್ನನ್ನು ಬಹುವಾಗಿ ಕಾಡಿವೆ. ಇನ್ನಷ್ಟು ಸಾಹಿತ್ಯ ಕೃಷಿ ಅವರಿಂದ ಮೂಡಿಬರಲಿ ಎಂದು ಅವರು ಹಾರೈಸಿದರು.

ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಮಾತನಾಡಿ, ಇಂದಿನ ಈ ವೇದಿಕೆ ನನ್ನ ಪಾಲಿಗೆ ತುಂಬಾ ವಿಶೇಷವಾದುದು. ಯಾಕೆಂದರೆ  ಡಾ| ಜಿ. ಎನ್‌. ಉಪಾಧ್ಯ ಅವರು ನನ್ನ ಗುರುಗಳೂ, ಮಾರ್ಗದರ್ಶಕರಾದರೆ ಡಾ| ವಿಶ್ವನಾಥ ಕಾರ್ನಾಡ್‌ ಜೊತೆಯಲ್ಲಿ ಮುದ್ರಾಡಿ ದಿವಾಕರ ಶೆಟ್ಟಿ, ಪೇತ್ರಿ ವಿಶ್ವನಾಥ ಶೆಟ್ಟಿ ಇವರೆಲ್ಲರೂ ನನಗೆ ಗುರುಸಮಾನರು. ನನ್ನನ್ನು ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ ಬೆಳೆಸಿದವರು. ಡಾ| ವಿಶ್ವನಾಥ ಕಾರ್ನಾಡರು ಮುಂಬಯಿಯಲ್ಲಿ ಸಾಹಿತ್ಯಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು. ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಅಭಿನಂದಿಸಿ ಶುಭಾಶಯವನ್ನು ಕೋರಿದರು.

ಇಂದು ವಿಶೇಷ ತರಗತಿಗಾಗಿ ವಿಭಾಗಕ್ಕೆ ಬಂದಿದ್ದೆ. ಇಲ್ಲಿ ವಿದ್ಯಾರ್ಥಿಗಳು ಹುಟ್ಟುಹಬ್ಬವನ್ನು ಆಚರಿಸಿದ್ದು ನನ್ನ ಪಾಲಿನ ಅವಿಸ್ಮರಣೀಯ ಗಳಿಗೆ. ನಾನು ನನ್ನ  ಶ್ರೀಮತಿಯ ಅಗಲುವಿಕೆಯ ನಂತರ ಹುಟ್ಟುಹಬ್ಬವನ್ನು ಆಚರಿಸಿರಲಿಲ್ಲ. 

Advertisement

ಆದರೆ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಹಾಗೂ ನನ್ನ ವಿದ್ಯಾರ್ಥಿಗಳು ಮತ್ತೆ ಆ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಇಂದು ಮುಂಬಯಿಯ ಉದ್ಯಮಿ, ಸಮಾಜಸೇವಕ, ಸಾಹಿತ್ಯ ಪ್ರೇಮಿ ಮುದ್ರಾಡಿ ದಿವಾಕರ ಶೆಟ್ಟಿ, ಕವಿ, ಸಂಘಟಕ ಪೇತ್ರಿ ವಿಶ್ವನಾಥ ಶೆಟ್ಟಿ ಇವರು ಅಕಸ್ಮಿಕವಾಗಿ ವಿಭಾಗಕ್ಕೆ ಭೇಟಿಕೊಟ್ಟು ನನ್ನನ್ನು ಅಭಿನಂದಿಸಿರುವುದು ನನ್ನ ಭಾಗ್ಯ ಎಂದು ನುಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ 
ಅವರು ಮುಂಬಯಿಯಲ್ಲಿ ಕನ್ನಡವನ್ನು ಮುನ್ನಡೆಸುವ ಮಹನೀಯರಲ್ಲಿ ಕಾರ್ನಾಡರೂ ಒಬ್ಬರು. ಕಥೆ ಗಾರರಾಗಿ, ಅನುವಾದಕರಾಗಿ, ಸಂಶೋ ಧಕರಾಗಿ ಅವರು ಹೆಸರು ಮಾಡಿದ್ದಾರೆ. ಮುಂಬಯಿ ವಿಶ್ವ ವಿದ್ಯಾಲಯದಲ್ಲಿ ಕಳೆದ 4 ದಶಕಗಳಿಂದ ಸಂಪರ್ಕದಲ್ಲಿದ್ದುಕೊಂಡು ಮಾರ್ಗ ದರ್ಶನವನ್ನು ಮಾಡುತ್ತಾ ಬಂದಿದ್ದಾರೆ. ಕಾರ್ನಾಡರು ಕರ್ನಾಟಕ ಮಹಾರಾಷ್ಟ್ರದಲ್ಲಿನ ಸಾಂಸ್ಕೃತಿಕ ಕೊಂಡಿಯಾಗಿಯೂ ಮುಖ್ಯ ರಾಗುತ್ತಾರೆ. ಎಲ್ಲವನ್ನೂ ಸರಕಾರವೇ ಮಾಡಬೇಕು ಎಂದು ಭಾವಿಸುವುದು ತರವಲ್ಲ. 

ಪ್ರತಿಯೊಬ್ಬರು ತಮ್ಮ ಕೈಲಾದ ಸೇವೆ ಮಾಡಿದಾಗ ದೇಶದ ಅಭಿವೃದ್ಧಿ ಸಾಧ್ಯ. ಮುದ್ರಾಡಿಯವರು ಎಲೆ ಮರೆಯ ಕಾಯಿಯಂತೆ ಮಾಡುವ ಕಾರ್ಯ, ಅವರ ಸಮಾಜ ಸೇವೆ, ಪೇತ್ರಿ ವಿಶ್ವನಾಥ ಶೆಟ್ಟಿಯವರ ಕನ್ನಡ ಪ್ರೀತಿ ನಮಗೆಲ್ಲ ಮಾದರಿ ಎಂದು ನುಡಿದು ಡಾ|  ವಿಶ್ವನಾಥ  ಕಾರ್ನಾಡರಿಗೆ ಶುಭ ಹಾರೈಸಿದರು.

ಕನ್ನಡ ವಿಭಾಗದ ಎಂ.ಎ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಕುಮುದಾ ಆಳ್ವ, ಗೀತಾ ಆರ್‌.ಎಸ್‌, ಸುರೇಖಾ ದೇವಾಡಿಗ, ಅನಿತಾ ಶೆಟ್ಟಿ, ಹೇಮಾ ಸದಾನಂದ ಅಮೀನ್‌, ಸಂಶೋಧನ ಸಹಾಯಕರಾದ ಪರಸಪ್ಪ ಹರಿಜನ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next