Advertisement

ಗೋವಾದಲ್ಲಿ ಕನ್ನಡಿಗರ 14 ನೇ ಸಾಂಸ್ಕೃತಿಕ ಸಮ್ಮೇಳನ ಉದ್ಘಾಟನೆ

05:50 PM Nov 13, 2022 | Team Udayavani |

ಪಣಜಿ: ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಗೋವಾದ ಕನ್ನಡಿಗರ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಕನ್ನಡಿಗರ ಬೇಡಿಕೆಯಾಗಿದೆ. ಇದು ನಮಗೆ ತಿಳಿದಿದೆ. ಆದರೆ ಇಲ್ಲಿ ಸರ್ಕಾರದ ವತಿಯಿಂದ ಜಾಗ ನೀಡಲು ಇಲ್ಲಿ ಸರ್ಕಾರದ ಬಳಿ ಅಷ್ಟೊಂದು ಪ್ರಮಾಣದಲ್ಲಿ ಜಾಗವಿಲ್ಲ. ಇದರಿಂದಾಗಿ ನೀವು ಖುದ್ದಾಗಿ ಇಲ್ಲಿ ಜಾಗ ಖರೀದಿಸಿದರೆ, ಅಲ್ಲಿ ಕನ್ನಡ ಭವನ ನಿರ್ಮಾಣ ಮಾಡಬಹುದು. ಅದು ನಿಮ್ಮ ಭವನವಾಗಿ ಉಳಿಯಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

Advertisement

ಗೋವಾದ ಬಿಚೋಲಿಯ ಹೀರಾಬಾಯಿ ಸಭಾಗೃಹದಲ್ಲಿ ಕರ್ಮಭೂಮಿ ಕನ್ನಡ ಸಂಘ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಕನ್ನಡಿಗರ 14 ನೇಯ ಸಾಂಸ್ಕೃತಿಕ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಗೋವಾದ ಜನತೆ ಇಲ್ಲಿ ಕನ್ನಡಿಗರಿಗೆ ಪ್ರೀತಿ ಮತ್ತು ಸಮ್ಮಾನ ಲಭಿಸಿದೆ. ಅಂತೆಯೇ ಗೋವಾದಲ್ಲಿರುವ ಕನ್ನಡಿಗರು ಕೂಡ ಇಲ್ಲಿ ಗೋವಾದ ಜನತೆಗೂ ಪ್ರೀತಿ ಮತ್ತು ಸಮ್ಮಾನ ನೀಡಬೇಕು. ಗೋವಾದಲ್ಲಿ 15 ವರ್ಷಗಳಿಂದ ಇಲ್ಲಿ ವಾಸ್ತವ್ಯದ ದಾಖಲಾತಿ ಹೊಂದಿರುವ ಕನ್ನಡಿಗರಿಗೆ ಗೋವಾ ಸರ್ಕಾರದ ಎಲ್ಲ ಸರ್ಕಾರಿ ಯೋಜನೆಗಳ ಲಾಭ ಲಭಿಸುತ್ತಿದೆ. ಈ ಸೌಲಭ್ಯ ಪಡೆಯದವರು ಕೂಡಲೇ ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ಸಾವಂತ್ ಕರೆ ನೀಡಿದರು.

ಈ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿದ್ದ ಬೆಳಗಾವಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ- ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಗೋವಾ ಸರ್ಕಾರದಿಂದ ಎರಡು ಎಕರೆ ಜಾಗ ಕೊಡುವುದಾಗಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕಳೆದ ಬಾರಿ ಇದೇ ವೇದಿಕೆಯಲ್ಲಿ ಭರವಸೆ ನೀಡಿದ್ದರು. ಆದರೆ ಅದು ಈಡೇರಿಲ್ಲ.

ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ 10 ಕೋಟಿ ರೂ ನೀಡಲು ಸಿದ್ಧವಿದೆ. ಇದರಿಂದಾಗಿ ಗೋವಾ ಸರ್ಕಾರವು ಕನ್ನಡ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಕಲ್ಪಿಸಿಕೊಡಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕಲಂಗುಟ್ ಕ್ಷೇತ್ರದ ಶಾಸಕ ಮೈಕಲ್ ಲೋಬೊ ಮಾತನಾಡಿ- ಗೋವಾ ರಾಜ್ಯಕ್ಕೆ ಕನ್ನಡಿಗರಿಂದ ಹೆಚ್ಚಿನ ಲಾಭವಾಗಿದೆ. ಉದ್ಯಮ ಕ್ಷೇತ್ರದಲ್ಲಿ, ಹಾಗೂ ವಿವಿಧ ಅಭಿವೃದ್ಧಿಗಳಲ್ಲಿ ಕನ್ನಡಿಗರ ಪಾಲಿದೆ. ಗೋವಾ ಅಭಿವೃದ್ಧಿಯಾಗಲು ನಿಮ್ಮೆಲ್ಲರ ಪಾತ್ರ ಬಹುಮುಖ್ಯವಾದದ್ದು ಎಂದರು.

ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷ ಹಾಗೂ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ವೇದಿಕೆಯ ಮೇಲೆ ಸಮ್ಮೇಳನಾಧ್ಯಕ್ಷ ಹಾಗೂ ಸಾರ್ವಜನಿಕ ಗೃಂಥಾಲಯ ಇಲಾಖೆ ನಿರ್ದೇಶಕ ಸುರೇಶಕುಮಾರ್ ಹೊಸ್ಮನಿ, ಶಾಸಕ ನರೇಶ್ ಸಾವಳ, ಮಾಜಿ ಸಭಾಪತಿ ರಾಜೇಶ್ ಪಾಟ್ನೇಕರ್, ಸಮ್ಮೇಳನದ ಸಂಚಾಲಕ ಮಹೇಶಬಾಬು ಸುರ್ವೆ ಮತ್ತಿತರರು ಉಪಸ್ಥಿತರಿದ್ದರು. ಸಾಧನೆಗೈದ ಕನ್ನಡಿಗರನ್ನು ಸನ್ಮಾನಿಸಲಾಯಿತು. ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಗೋವಾದ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮ ಆರಮಭಕ್ಕೂ ಮುನ್ನ 300 ಕ್ಕೂ ಹೆಚ್ಚು ಪೂರ್ಣಕುಂಭ ಮೆರವಣಿಗೆಯ ಮೂಲಕ ಹುಕ್ಕೇರಿ ಶ್ರೀಗಳನ್ನು ಹಾಗೂ ಸಮ್ಮೇಳನಾಧ್ಯಕ್ಷರನ್ಮು ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಸಮ್ಮೇಳನದಲ್ಲಿ ಕರ್ನಾಟಕ ಮತ್ತು ಗೋವಾದ ವಿವಿಧ ಭಾಗಗಳಿಂದ ಆಗಮಿಸಿದ್ದ 3000 ಕ್ಕೂ ಹೆಚ್ಚು ಕನ್ನಡಿಗರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next