ಪಣಜಿ: ಗೋವಾದ ವಾಸ್ಕೊದಲ್ಲಿ ಬಿರ್ಲಾ ಗ್ರೂಪ್ ನಲ್ಲಿ ಜಾಗವಿದೆ, ಅಲ್ಲಿ ಗೋವಾ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಕೊಡಿಸುವ ಮೂಲಕ ಗೋವಾ ಕನ್ನಡಿಗರ ಕನಸು ನನಸು ಮಾಡುತ್ತೇವೆ. ಕರ್ನಾಟಕದ ಮುಖ್ಯಮಂತ್ರಿಗಳು ಗೋವಾ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂ ನಿಧಿಯನ್ನು ಮಂಜೂರು ಮಾಡಿದ್ದಾರೆ. ಗೋವಾ ಬಿಜೆಪಿ ಪ್ರಭಾರಿ ದೇವೇಂದ್ರ ಫಡ್ನವೀಸ್ ರವರ ಮೂಲಕ ಬಿರ್ಲಾ ಗ್ರೂಪ್ ನ ಜಾಗ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಗೋವಾ ಬಿಜೆಪಿ ಪ್ರಭಾರಿ ಸಿ.ಟಿ.ರವಿ ಭರವಸೆ ನೀಡಿದರು.
ಪಣಜಿಯಲ್ಲಿ ಕರೆದಿದ್ದ ಕನ್ನಡ ಸಂಘಗಳ ಸಭೆಯಲ್ಲಿ ಮಾತನಾಡಿದ ಅವರು – ಗೋವಾದಲ್ಲಿ ಸರ್ಕಾರದ ಜಾಗ ಕೊಡಿಸಿದರೆ ಗೊಂದಲ ನಿರ್ಮಾಣವಾಗಲಿದೆ. ಇದರಿಂದಾಗಿ ಖಾಸಗಿ ಕಂಪನಿಗಳ ಜಾಗ ಲಭಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ಬಿರ್ಲಾ ಗ್ರೂಪ್ ನಲ್ಲಿ ಜಾಗವಿದೆ ಎಂದು ಮಾಹಿತಿ ಲಭ್ಯವಾಗಿದ್ದು, ಅಲ್ಲಿ ಜಾಗ ಪಡೆದು ಕನ್ನಡ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಕೆಲಸ ಮಾಡುತ್ತೇವೆ. ಈ ಮೂಲಕ ಗೋವಾದಲ್ಲಿ ಸುಮಾರು 25 ಕೋಟಿ ರೂ ವೆಚ್ಛದಲ್ಲಿ ಸುಂದರ ಕನ್ನಡ ಭವನ ನಿರ್ಮಾಣ ಮಾಡೋಣ ಎಂದು ಸಿ.ಟಿ ರವಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗೋವಾ ಬಿಜೆಪಿ ಚುನಾವಣಾ ಪ್ರಭಾರಿ ದೇವೇಂದ್ರ ಫಡ್ನವೀಸ್ ಮಾತನಾಡಿ- ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗಕ್ಕಾಗಿ ಬಿರ್ಲಾ ಗ್ರೂಪ್ ನೊಂದಿಗೆ ಮಾತುಕತೆ ನಡೆಸಲಾಗುವುದು. ಪ್ರಸಕ್ತ ಚುನಾವಣೆಯಲ್ಲಿ ಗೋವಾದಲ್ಲಿ ಸಿ.ಟಿ ರವಿ ಯವರ ನೇತೃತ್ವದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರಕ್ಕೆ ಬರಲು ಆಶೀರ್ವದಿಸಿ ಎಂದು ಕನ್ನಡಿಗರ ಬಳಿ ಮನವಿ ಮಾಡಿದರು.
ಇದನ್ನೂ ಓದಿ : ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕೋವಿಡ್ ತಡೆಗಟ್ಟಿ: ಸಿಎಂಗಳ ಸಂವಾದದಲ್ಲಿ ಪ್ರಧಾನಿ
ಈ ಸಂದರ್ಭದಲ್ಲಿ ಅಖಿಲ ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ, ಅಧ್ಯಕ್ಷ ಹನುಮಂತಪ್ಪ ಶಿರೂರ್, ಮಾಪ್ಸಾ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಜುನಾರಿನಗರ ಕನ್ನಡ ಸಂಘದ ಶಿನಾನಂದ ಬಿಂಗಿ, ಪಣಜಿ ಕನ್ನಡ ಸಂಘದ ಕಾರ್ಯದರ್ಶಿ ಅರುಣಕುಮಾರ್, ಪ್ರಹ್ಲಾದ್ ಗುಡಿ ಸೇರಿದಂತೆ ವಿವಿಧ ಕನ್ನಡ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.