ಒಂದು ಕಾಲಕ್ಕೆ ಜನಮನ ಗೆದ್ದ ನಟ, ಯಾವುದೇ ಗಾಡ್ ಫಾದರ್ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಸ್ಟಂಟ್ ಮಾಸ್ಟರ್ ಆಗಿ, ಖಳನಟನಾಗಿ, ನಾಯಕನಾಗಿ, ಛಾಯಾಗ್ರಾಹಕನಾಗಿ, ನಿರ್ಮಾಪಕ, ನಿರ್ದೇಶಕನಾಗುವ ಮೂಲಕ ಆಲ್ ರೌಂಡರ್ ಆಗಿದ್ದವರು. ಫ್ರೇಜರ್ ಟೌನ್ ನ ಆ್ಯಂಥೋನಿ ಎಂಬ ಕಟ್ಟುಮಸ್ತಾದ ಯುವಕ ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಆಗಿದ್ದರ ಹಿಂದೆ ಅಗಾದ ನೋವು, ನಲಿವು, ಸೋಲು, ಗೆಲುವು ಎಲ್ಲವೂ ಇದೆ.
ಪ್ರಭಾಕರ್ ಹುಟ್ಟು ಫೈಟರ್ ಆಗಿಯೇ ಬೆಳೆದವರು..ಸ್ಟಂಟ್ ಮ್ಯಾನ್ ಆಗಿದ್ದ ಪ್ರಭಾಕರ್ ಹೀರೋ ಆಗಲು ದೀರ್ಘಕಾಲದ ಶ್ರಮ ಇತ್ತು. ಫೈಟ್ ಅನ್ನು ಇಷ್ಟ ಪಡುವ ಪ್ರಭಾಕರ್ ಅದ್ಭುತವಾಗಿ ಫೈಟ್ ಮಾಡೋದು ಇನ್ನೊಂದು ವಿಶೇಷ. ತನಗೂ ಸೇರಿದಂತೆ ಹಲವಾರು ಸ್ಟಾರ್ ಗಳಿಗೂ ಫೈಟ್ ಅನ್ನು ಕಂಪೋಸ್ ಮಾಡುತ್ತಿದ್ದರು. ತನ್ನ 14ನೇ ವಯಸ್ಸಿನಲ್ಲಿಯೇ ಬಾಕ್ಸರ್ ಅನ್ನು ಎರಡು ಬಾರಿ ನೆಲಕ್ಕೆ ಕೆಡುವಿಹಿದ ಬಲಿಷ್ಠ ದೇಹಿ ಅವರಾಗಿದ್ದರು.
ಸುಮಾರು ನಾಲ್ಕು ದಶಕಗಳ ಹಿಂದೆ ಪ್ರಭಾಕರ್ ಕನ್ನಡ ಸಿನಿಮಾ ರಂಗದಲ್ಲಿ ಸ್ಟಂಟ್ ಮ್ಯಾನ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಹೀಗೆ ಸ್ಟಂಟ್ ಮಾಸ್ಟರ್ ಆಗಿ ಖ್ಯಾತರಾಗಿದ್ದರು. ತನ್ನ ಫೈಟ್ಸ್ ನೋಡಲಿಕ್ಕಾಗಿಯೇ ಪ್ರೇಕ್ಷಕರು ತನ್ನ ಸಿನಿಮಾ ನೋಡಲು ಬರುತ್ತಾರೆ ಎಂಬ ಹೆಮ್ಮೆ ಪ್ರಭಾಕರ್ ಅವರಿಗೆ ಇತ್ತಂತೆ. ಅವೆಲ್ಲಕ್ಕಿಂತ ಹೆಚ್ಚಾಗಿ ಪ್ರಭಾಕರ್ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಎಲ್ಲಾ ಫೈಟ್ ದೃಶ್ಯಗಳನ್ನು ತಾನೇ ಖುದ್ದಾಗಿ ಮಾಡುತ್ತಿದ್ದರು. ಇದರಿಂದಾಗಿಯೇ ತಾನು ಇಂದು ಸೋತು ಹೋದ ವ್ಯಕ್ತಿಯಾಗಿದ್ದೇನೆ. ನನ್ನೆಲ್ಲಾ ಮುರಿದ ಮೂಳೆಗಳು ಸರ್ಜರಿಯಲ್ಲಿ ನಿಂತಿವೆ ಎಂದು ಸಂದರ್ಶನವೊಂದರಲ್ಲಿ ಪ್ರಭಾಕರ್ ಹೇಳಿದ್ದರು.
ಟೈಗರ್ ಆಗಿದ್ದು..
ಸ್ಟಂಟ್ ಮ್ಯಾನ್ ಆಗಿದ್ದ ಪ್ರಭಾಕರ್ ಅವರು 1967ರಲ್ಲಿ ಕಾಡಿನ ರಹಸ್ಯ ಚಿತ್ರದ ಮೂಲಕ ಚಿತ್ರ ಜೀವನ ಆರಂಭಿಸಿದ್ದರು. ಆಗ ಪ್ರಭಾಕರ್ ವಯಸ್ಸು ಕೇವಲ 14! ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದರು. ಚೆಲ್ಲಿದಾ ರಕ್ತ ಕನ್ನಡ ಸಿನಿಮಾದಲ್ಲಿನ ನಟನೆಯಲ್ಲಿ ಪ್ರಭಾಕರ್ ಎಲ್ಲರ ಗಮನ ಸೆಳೆದಿದ್ದರು. ಆದರೂ ಹೀರೋ ಆಗಿದ್ದು ತನ್ನ 100 ನೇ ಚಿತ್ರವಾದ ಮುತ್ತೈದೆ ಭಾಗ್ಯದ ಚಿತ್ರದಲ್ಲಿ.
ಬರೋಬ್ಬರಿ 12 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಪ್ರಭಾಕರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯರಾಗಿದ್ದರು. ತೆಲುಗಿನಲ್ಲಿ ಕನ್ನಡ ಪ್ರಭಾಕರ್ ಎಂದೇ ಖ್ಯಾತರಾಗಿದ್ದರು. 1984ರಲ್ಲಿ ಹುಲಿ ಹೆಜ್ಜೆ ಸಿನಿಮಾದಲ್ಲಿ ಪ್ರಭಾಕರ್ ಅವರು ಹುಲಿ ಜೊತೆ ಫೈಟ್ ಮಾಡುವ ದೃಶ್ಯವೊಂದು ಇತ್ತು. ಅಲ್ಲಿಂದ ಟೈಗರ್ ಎಂಬ ಹೆಸರಿನಿಂದಲೇ ಜನಪ್ರಿಯರಾಗಿದ್ದರು. ಏತನ್ಮಧ್ಯೆ ಪ್ರಭಾಕರ್ ಅವರಿಗೆ ಇದಕ್ಕೂ ಮೊದಲೇ ಟೈಗರ್ ಎಂಬ ಬಿರುದು ಬಂದಿತ್ತು ಎಂಬುದು ಕೆಲವು ಮೂಲಗಳ ಅಭಿಪ್ರಾಯವಾಗಿದೆ.
1980ರ ದಶಕದಲ್ಲಿ ಎಲ್ಲಾ ನಿರ್ಮಾಪಕರ ಪಾಲಿಗೆ ಪ್ರಭಾಕರ್ ಅತೀ ಜನಪ್ರಿಯ ಹಾಗೂ ಬೇಡಿಕೆ ನಟರಾಗಿದ್ದರು. ಆ್ಯಕ್ಷನ್ ಸಿನಿಮಾಗಳು ಸೇರಿದಂತೆ ಕುಟುಂಬ ಸಹಿತ ನೋಡಬಹುದಾದ ಮನಮಿಡಿಯುವ ಕಥೆಗಳಲ್ಲಿಯೂ ಅಭಿನಯಿಸುವ ಮೂಲಕ ಪ್ರಭಾಕರ್ ಅತೀ ಹೆಚ್ಚಿನ ಅಭಿಮಾನಿಗಳನ್ನು ಪಡೆದ ನಟರಾಗಿದ್ದರು. ಆರತಿ, ಮಂಜುಳಾ, ಭವ್ಯ, ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಮಮ್ಮುಟ್ಟಿ, ಸುರೇಶ್ ಗೋಪಿ, ಚಿರಂಜೀವಿ ಸೇರಿದಂತೆ ಘಟಾನುಘಟಿ ಹೀರೋ, ಹೀರೋಯಿನ್ ಗಳ ಜೊತೆ ನಟಿಸಿದ್ದರು. ಮಲಯಾಳಂನ ಧ್ರುವಂ ಚಿತ್ರದಲ್ಲಿ ಹೈದರ್ ಮರಕ್ಕರ್ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದು ಟೈಗರ್ ಅಭಿನಯಕ್ಕೆ ಸಾಕ್ಷಿಯಾಗಿತ್ತು.
ಹಿರಿಯ ನಿರ್ದೇಶಕ ಕೆಎಸ್ ಆರ್ ದಾಸ್ ಅವರನ್ನು ಗುರು ಎಂದೇ ಭಾವಿಸಿದ್ದ ಪ್ರಭಾಕರ್, ಚಿತ್ರ ನಿರ್ಮಾಣ, ಛಾಯಾಗ್ರಹಣ, ನಿರ್ದೇಶನದ ಪಟ್ಟುಗಳನ್ನು ಕಲಿತು ತಾರೆ ಜಯಮಾಲಾ ಜೊತೆಗೂಡಿ ಮಹೇಂದ್ರ ವರ್ಮಾ, ಮಿಸ್ಟರ್ ಮಹೇಶ್ ಕುಮಾರ್, ಮುಂಬಯಿ ದಾದಾ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದರು.
ನಟ ಅಷ್ಟೇ ಅಲ್ಲ ಸ್ನೇಹಜೀವಿ, ಕೊಡುಗೈ ದಾನಿ:
ಟೈಗರ್ ಪ್ರಭಾಕರ್ ಖಳನಟ, ನಿರ್ದೇಶಕ, ನಿರ್ಮಾಪಕ, ಹೀರೋ ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಹೃದಯವಂತ ವ್ಯಕ್ತಿ. ಕನ್ನಡ, ತೆಲುಗು, ತಮಿಳು ಸೇರಿ 450 ಸಿನಿಮಾಗಳಲ್ಲಿ ನಟಿಸಿದ್ದ ಅವರು ಬಹುತೇಕರಿಂದ ಮೋಸಕ್ಕೊಳಗಾಗಿದ್ದ ವ್ಯಕ್ತಿ ಟೈಗರ್. ಸಾಮಾಜಿಕ ಕಳಕಳಿ ಹೊಂದಿದ್ದ ಅವರು ಅನೇಕ ಕಲಾವಿದರಿಗೆ, ಅನಾಥಾಶ್ರಮಗಳಿಗೆ, ಸಂಘ, ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು. ಬೈಕ್ ಅಪಘಾತದ ಬಳಿಕ ಪ್ರಭಾಕರ್ ಆರೋಗ್ಯ ಹದಗೆಡ ತೊಡಗಿತ್ತು..ನಿಧಾನಕ್ಕೆ ಸ್ಟಾರ್ ವ್ಯಾಲ್ಯೂ ಕೂಡಾ ಕಡಿಮೆಯಾಗತೊಡಗಿತ್ತು.
ಅಧಿಕೃತವಾಗಿ ಮೂರು ಮದುವೆಯಾಗಿದ್ದ ಟೈಗರ್ ಗೆ ಇಬ್ಬರು ಪುತ್ರಿಯರು ಭಾರತಿ ಮತ್ತು ಗೀತಾ ಹಾಗೂ ಪುತ್ರ ವಿನೋದ್(ಮೊದಲ ಹೆಂಡತಿ ಮಕ್ಕಳು), 2ನೇ ವಿವಾಹವಾಗಿದ್ದು ನಟಿ ಜಯಮಾಲಾ ಜೊತೆ. ಇವರಿಗೆ ಸೌಂದರ್ಯ ಎಂಬ ಮಗಳು ಹುಟ್ಟಿದ್ದಳು. ಮೂರನೆಯ ಮದುವೆ ಅಂಜು ಜೊತೆ..ಈಕೆಗೆ ಅರ್ಜುನ್ ಎಂಬ ಮಗ ಜನಿಸಿದ್ದ. 2 ಮದುವೆಗಳು ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ತಾನೇನಿದ್ದರೂ ನೇರವಾಗಿ ಮಾತನಾಡುವ ಮನುಷ್ಯ ಎಂದೇ ಹೇಳಿಕೊಳ್ಳುತ್ತಿದ್ದ ಪ್ರಭಾಕರ್ ಅದೇ ರೀತಿ ಬದುಕಿದ್ದರು. ತನ್ನ ವೈಯಕ್ತಿಕ ಸೇರಿದಂತೆ ಎಲ್ಲಾ ವಿಚಾರವನ್ನು ಮುಚ್ಚಿಡದೇ ಹೇಳುತ್ತಿದ್ದ ನಟ ಅವರಾಗಿದ್ದರು. ವಿಪರ್ಯಾಸ ಎಂಬಂತೆ ಟೈಗರ್ ಕೊನೆಗಾಲದಲ್ಲಿ ಅವರ ಜೊತೆ ಮಗ ವಿನೋದ್ ಬಿಟ್ಟರೆ ಬೇರೆ ಯಾರೂ ಇರಲಿಲ್ಲವಾಗಿತ್ತು. ತನಗೆ ಎಲ್ಲಾ ಮೋಸ ಮಾಡಿಬಿಟ್ಟರು ಎಂಬುದಾಗಿ ಕೊನೆಯ ದಿನಗಳಲ್ಲಿ ಮಗನ ಜೊತೆ ಟೈಗರ್ ಹೇಳಿಕೊಂಡಿದ್ದರಂತೆ. ಕೊನೆಗೆ 1948ರಲ್ಲಿ ಜನಿಸಿದ್ದ ಟೈಗರ್ ಬಹುಅಂಗಾಂಗ ವೈಫಲ್ಯದಿಂದ ತನ್ನ 52ನೇ ವಯಸ್ಸಿನಲ್ಲಿ (2001ರ ಮಾರ್ಚ್ 25ರಂದು ) ವಿಧಿವಶರಾಗಿದ್ದರು. ಸುಮಾರು ನಾಲ್ಕು ವರ್ಷಗಳ ಬಳಿಕ ಟೈಗರ್ ನಿರ್ದೇಶಿಸಿದ್ದ ಗುಡ್ ಬ್ಯಾಡ್ ಅಂಡ್ ಅಗ್ಲಿ ಸಿನಿಮಾ ತೆರೆಕಂಡಿತ್ತು..ಅದು ಪ್ರಭಾಕರ್ ಅವರ ಬದುಕು ಮತ್ತು ಅಂತ್ಯಕ್ಕೆ ಮುನ್ನುಡಿ ಬರೆದಂತೆ ಇತ್ತು..ಇವೆಲ್ಲದರ ನಡುವೆ ಟೈಗರ್ ಇನ್ನೂ ಚಿತ್ರರಸಿಕರ ಮನದಲ್ಲಿ ಉಳಿದಿದ್ದಾರೆ.