ಹ್ಯಾಂಡ್‌ಸಮ್ ಲುಕ್, ಖಡಕ್ ಮಾತು, ಕ್ಲಾಸ್ ಮತ್ತು ಮಾಸ್ ಎರಡೂ ಥರದ ಪಾತ್ರಗಳಿಗೂ ಒಪ್ಪುವಂಥ ಮ್ಯಾನರಿಸಂ. ರಂಗಭೂಮಿ, ಕಿರುತೆರೆ, ಹಿರಿತೆರೆ ಎಲ್ಲದಕ್ಕೂ ಸಲ್ಲವಂಥ ನಟ, ಅವರೇ ಮಂಡ್ಯ ಜಿಲ್ಲೆ ಮದ್ದೂರಿನ ಅಪ್ಪಟ ಕನ್ನಡ ಪ್ರತಿಭೆ ಪ್ರಮೋದ್.
“ಲಕುಮಿ’ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ಪ್ರಮೋದ್, “ಗೀತಾ ಬ್ಯಾಂಗಲ್ ಸ್ಟೋರ್’, “ಪ್ರೀಮಿಯರ್ ಪದ್ಮಿನಿ’, “ರತ್ನನ್ ಪ್ರಪಂಚ’ ಸಿನಿಮಾಗಳ ಮೂಲಕ ಹಿರಿತೆರೆಯಲ್ಲೂ ಸೈ ಎನಿಸಿಕೊಂಡ ನಟ. ಸದ್ಯ ಕನ್ನಡದಲ್ಲಿ “ಬಾಂಡ್ ರವಿ’, “ಇಂಗ್ಲಿಷ್ ಮಂಜ’, “ಅಲಂಕಾರ್ ವಿದ್ಯಾರ್ಥಿ’, “ಭುವನಂ ಗಗನಂ’ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
ಸದ್ಯ ಪ್ರಮೋದ್ ನಾಯಕ ನಟನಾಗಿ ಅಭಿನಯಿಸುತ್ತಿರುವ “ಇಂಗ್ಲಿಷ್ ಮಂಜ’, “ಅಲಂಕಾರ್ ವಿದ್ಯಾರ್ಥಿ’, “ಬಾಂಡ್ ರವಿ’ ಮತ್ತು “ಭುವನಂ ಗಗನಂ’ ಈ ನಾಲ್ಕೂ ಸಿನಿಮಾಗಳು ಕೂಡ ಒಂದಕ್ಕಿಂತ ಒಂದು ವಿಭಿನ್ನವಾದ ಸಿನಿಮಾಗಳು ಎಂಬುದು ಪ್ರಮೋದ್ ಮಾತು.
ಪ್ರಮೋದ್ ಅವರೇ ಹೇಳುವಂತೆ, “”ಇಂಗ್ಲಿಷ್ ಮಂಜ’ ಪಕ್ಕಾ ರೌಡಿಸಂ ಜೊತೆಗೆ ಎಮೋಶನ್ ಇರುವಂಥ ಸಿನಿಮಾ. ಇನ್ನು “ಅಲಂಕಾರ್ ವಿದ್ಯಾರ್ಥಿ’ ಕಾಲೇಜ್ ಸ್ಟೋರಿಯ ಕಾಮಿಡಿ ಸಿನಿಮಾ. ಈ ಎರಡೂ ಸಿನಿಮಾಗಳೂ ಶುರುವಾದ ನಂತರ ಸುಮಾರು 60-70 ಕಥೆಗಳನ್ನು ಕೇಳಿದ ಬಳಿಕ ಒಪ್ಪಿಕೊಂಡ ಸಿನಿಮಾ “ಬಾಂಡ್ ರವಿ’. ಇದೊಂದು ಲವ್, ಆ್ಯಕ್ಷನ್, ಸಸ್ಪೆನ್ಸ್ ಎಲ್ಲವೂ ಇರುವಂಥ ಸಬ್ಜೆಕ್ಟ್. ಕಥೆ ಕೇಳಿದ ಕೂಡಲೇ ತುಂಬ ಇಷ್ಟವಾಯ್ತು. ಹಾಗಾಗಿ, ತಕ್ಷಣ ಈ ಸಿನಿಮಾ ಒಪ್ಪಿಕೊಂಡೆ. ಮೂರೇ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್, ಡಬ್ಬಿಂಗ್ ಎಲ್ಲವೂ ಮುಗಿದು ಹೋಯ್ತು. ಇನ್ನೇನು ಇದೇ ಸೆಪ್ಟೆಂಬರ್‌ನಲ್ಲಿ ಸಿನಿಮಾ ರಿಲೀಸ್ ಆಗೋದಕ್ಕೂ ರೆಡಿಯಾಗ್ತಿದೆ. “ಬಾಂಡ್ ರವಿ’ ಸಿನಿಮಾದ ನಂತರ “ಭುವನಂ ಗಗನಂ’ ಸಿನಿಮಾ ಮಾಡುತ್ತಿದ್ದೇನೆ. ಇದೊಂದು ರೊಮ್ಯಾಂಟಿಕ್ ಸಬ್ಜೆಕ್ಟ್ ಸಿನಿಮಾ. ಇಡೀ ಸಿನಿಮಾ ಕಾಲೇಜ್‌ನಿಂದ ಶುರುವಾಗಿ ಇಂಟೆನ್ಸ್ ಲವ್ ಸ್ಟೋರಿಯಲ್ಲಿ ಟ್ರಾವೆಲಿಂಗ್ ಆಗುತ್ತದೆ. ಒಟ್ಟಾರೆ ಹೇಳಬೇಕು ಅಂದ್ರೆ, ಕೈಯಲ್ಲಿರುವ ನಾಲ್ಕೂ ಸಿನಿಮಾಗಳೂ ಅದರ ಪಾತ್ರಗಳು ಕೂಡ ಒಂದಕ್ಕಿಂತ ಡಿಫರೆಂಟ್ ಆಗಿವೆ’ ಎನ್ನುತ್ತಾರೆ ಪ್ರಮೋದ್.
ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ನಟನಾಗಬೇಕು ಎಂದುಕೊಂಡು ಬಂದವನು. ಹಾಗಾಗಿ ಪ್ರತಿ ಸಿನಿಮಾದಲ್ಲೂ ನನ್ನ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು. ಒಂದೇ ಥರದ ಪಾತ್ರಗಳಿಗೆ ಅಂಟಿಕೊಳ್ಳಬಾರದು. ಅದಕ್ಕಾಗಿಯೇ ಹೊಸಥರದ ಪಾತ್ರಗಳನ್ನು ಹುಡುಕಿ, ಒಪ್ಪಿಕೊಳ್ಳುತ್ತಿದ್ದೇನೆ. ಇಂಥ ಪಾತ್ರಗಳ ಹುಡುಕಾಟ ನನಗೆ ಖುಷಿ ಕೊಡುತ್ತದೆ. ಒಮ್ಮೆ ನನ್ನ ಸಾಮರ್ಥ್ಯ ಗೊತ್ತಾದರೆ, ನನಗೂ ಎಲ್ಲ ಥರದ ಪಾತ್ರಗಳನ್ನು ಮಾಡುವ ತಾಕತ್ತಿದೆ ಅಂಥ ಗೊತ್ತಾದರೆ, ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎಂಬುದು ನನ್ನ ನಂಬಿಕೆ ಎನ್ನುತ್ತಾರೆ.