Advertisement

ಹಾಸ್ಯದ ಹೊನಲು…ನಟ ಮುಸುರಿಯ “ಆ ನಗುವಿನ” ಶೈಲಿ ಮರೆಯಲು ಸಾಧ್ಯವೇ?

01:17 PM Oct 04, 2018 | Sharanya Alva |

ಕನ್ನಡ ಚಿತ್ರರಂಗದ ಮರೆಯಲಾರದ ಹಾಸ್ಯ ನಟರಲ್ಲಿ “ಮುಸುರಿ ಕೃಷ್ಣಮೂರ್ತಿ” ಕೂಡಾ ಒಬ್ಬರು. ಮುಸುರಿಯ ನಗು, ಕುಹಕದ ಧ್ವನಿ, ನಟನೆಯನ್ನು ಇಷ್ಟಪಡದವರು ಯಾರು. ಇಂದಿಗೂ ಅವರ ಸಿನಿಮಾ ನೋಡಿದರೆ ಮುಸುರಿ, ಬಾಲಣ್ಣ, ದಿನೇಶ್, ನರಸಿಂಹರಾಜು, ಧೀರೇಂದ್ರ ಗೋಪಾಲ್,ಉಮೇಶ್ ನಟನೆ ಕಣ್ಣ ಮುಂದೆ ಹಾದು ಹೋಗುತ್ತದೆ. ಕೃಷ್ಣಮೂರ್ತಿ ಅವರು ಬಾಲಕನಾಗಿದ್ದಾಗಲೇ ಹಾಡು ಮತ್ತು ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು.

Advertisement

ಕೃಷ್ಣ ಮೂರ್ತಿ ಅವರು ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಗಲೇ ಇವರ ಅದ್ಭುತ ನಟನೆಯನ್ನು ಕಂಡ ಅಂದಿನ ಕನ್ನಡ ಚಿತ್ರರಂಗದ ಹೆಸರಾಂತ ಗೀತರಚನೆಕಾರರಾಗಿದ್ದ ಕಣಗಾಲ್ ಪ್ರಭಾಕರ್ ಶಾಸ್ತ್ರಿ (ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಹೋದರ) ಅವರು ತಮ್ಮ ಚಾಮುಂಡೇಶ್ವರಿ ನಾಟಕ ಸಂಸ್ಥೆಯಲ್ಲಿ ನಟನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದರಂತೆ.

ಹೀಗೆ ಗುಬ್ಬಿ ವೀರಣ್ಣ ನಾಟಕ ಕಂಪನಿ, ನಂತರ ಮಾಸ್ಟರ್ ಹಿರಣ್ಣಯ್ಯ ತಂದೆ ಕೆ.ಹಿರಣ್ಣನ್ಯನವರ ನಾಟಕ ಮಂಡಳಿ ಸೇರಿದಂತೆ ಹಲವಾರು ನಾಟಕ ಕಂಪನಿಗಳಲ್ಲಿ ರಂಗಕರ್ಮಿಯಾಗಿ ನಟಿಸಿ ಬೇಷ್ ಎನ್ನಿಸಿಕೊಂಡಿದ್ದರು ಕೃಷ್ಣಮೂರ್ತಿ. 1943ರಲ್ಲಿ ಪಿಟೀಲು ಚೌಡಯ್ಯನವರು ನಿರ್ಮಿಸಿದ್ದ ವಾಣಿ ಸಿನಿಮಾದ ಮೂಲಕ ಕೃಷ್ಣಮೂರ್ತಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಆಗ ಅವರು 13 ವರ್ಷದ ಹುಡುಗ! ವಾಣಿ ಸಿನಿಮಾದ ನಂತರ ಬರೋಬ್ಬರಿ ಹತ್ತು ವರ್ಷಗಳ ಕಾಲ ಕೃಷ್ಣಮೂರ್ತಿಯವರಿಗೆ ಯಾವ ಅವಕಾಶವೂ ಒದಗಿ ಬಂದಿಲ್ಲವಾಗಿತ್ತಂತೆ. ಈ ಸಂದರ್ಭದಲ್ಲಿ ಅವರು ತಮ್ಮದೇ “ಅಂಬಾ ಪ್ರಸಾದ ನಾಟಕ ಮಂಡಳಿ ಸಂಸ್ಥೆ ಕಟ್ಟಿ ನಾಟಕಗಳನ್ನು ಪ್ರದರ್ಶಿಸಿ ಜೀವನ ಸಾಗಿಸಿದ್ದರಂತೆ. ಆದರೆ ಅಲ್ಲಿನ ಭಾರೀ ಖರ್ಚು, ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗದೇ 1966ರಲ್ಲಿ ನಾಟಕ ಕಂಪನಿಯನ್ನು ಮುಚ್ಚಿ ಮತ್ತೆ ಸಿನಿಮಾರಂಗವನ್ನು ಪ್ರವೇಶಿಸಿದ್ದರಂತೆ.

ಕೃಷ್ಣಮೂರ್ತಿ ಅವರು “ಮುಸುರಿ” ಆಗಿದ್ದೇಗೆ ಗೊತ್ತಾ?

Advertisement

ಕನ್ನಡ ಚಿತ್ರರಂಗದಲ್ಲಿ ಒಬ್ಬೊಬ್ಬ ನಟನ ಹೆಸರಿನ ಹಿಂದೆ ಒಂದೊಂದು ಕಥೆ ಇರುತ್ತೆ. ಚಿತ್ರರಂಗಕ್ಕೆ ಬರುವ ಮೊದಲು ಇರುವ ಹೆಸರು ಚಿತ್ರರಂಗದಲ್ಲಿ ಖ್ಯಾತರಾಗುತ್ತಿದ್ದಂತೆಯೇ ಹೊಸ ಹೆಸರು ಅಂಟಿಕೊಳ್ಳುತ್ತದೆ. ಆದರೆ ಕೃಷ್ಣಮೂರ್ತಿ ಅವರು ಚಿತ್ರರಂಗಕ್ಕೆ ಕಾಲಿಡುವ ಮೊದಲೇ ತಮ್ಮ ಪ್ರತಿಭೆಯಿಂದಲೇ “ಮುಸುರಿ” ಹೆಸರನ್ನು ಸಂಪಾದಿಸಿಕೊಂಡಿದ್ದರು. ಪ್ರಸಿದ್ಧ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಅಂದಿನ ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜ ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಮತ್ತು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಮ್ಮುಖದಲ್ಲಿ ಕೃಷ್ಣಮೂರ್ತಿ ಅವರು ಹಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಈ ಹಾಡನ್ನ ಮಹಾರಾಜ ನಾಲ್ವಡಿ ಅವರು ತುಂಬಾ ಮೆಚ್ಚಿಕೊಂಡು ಮುಸುರಿ ಸುಬ್ರಹ್ಮಣ್ಯ ಅವರ ಜೊತೆ ಹೋಲಿಕೆ ಮಾಡಿ ಬಹುಪರಾಕ್ ಹೇಳಿದ್ದರಂತೆ. ಬಳಿಕ ಎಲ್ಲರೂ ಅವರನ್ನು ಮುಸುರಿ ಕೃಷ್ಣಮೂರ್ತಿ ಎಂದೇ ಕರೆಯತೊಡಗಿದ್ದರಂತೆ.!

ಹೀಗೆ ಹಾಡು, ನಾಟಕ, ಸಿನಿಮಾದಲ್ಲಿ ವಿಶಿಷ್ಟ ಅಭಿನಯದ ಮೂಲಕ ಗಮನ ಸೆಳೆದಿದ್ದ ಕೃಷ್ಣಮೂರ್ತಿ 1953ರಲ್ಲಿ ಮಂಗಳಾ ಗೌರಿ, ಕನ್ಯಾದಾನ ಸಿನಿಮಾಗಳಲ್ಲಿ ಪ್ರಮುಖ ನಟರಾಗಿ ನಟಿಸಿ ಜನಪ್ರಿಯರಾಗತೊಡಗಿದ್ದರು. ಆ ಕಾಲದ ಪ್ರಸಿದ್ಧ ನಿರ್ದೇಶಕರಾದ ಶಂಕರ್ ಸಿಂಗ್, ಬಿ.ವಿಠಲಾಚಾರ್ಯ, ಬಿಆರ್ ಪಂತುಲು ಅವರ ಬಳಿ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದರು. ಅಷ್ಟೇ ಅಲ್ಲ ಖ್ಯಾತ ಗೀತರಚನೆಕಾರ, ನಿರ್ದೇಶಕ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ ಬಳಿ ಪದ್ಯ ಬರೆಯುವುದನ್ನು ಕಲಿತಿದ್ದರು. ನಾಟಕ, ಸಿನಿಮಾ, ನಾಟಕ ಬಳಿಕ ಮತ್ತೆ ಸಿನಿಮಾ ಕ್ಷೇತ್ರದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ್ದ ಮುಸುರಿ ಕೃಷ್ಣಮೂರ್ತಿ ಅವರು ಹಾಸ್ಯ ನಟನಾಗಿ, ವಿಲನ್ ಹಾಗೂ ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು.

1978ರಲ್ಲಿ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪಡುವಾರಳ್ಳಿ ಪಾಂಡವರು ಸಿನಿಮಾದಲ್ಲಿನ ಕನೆಕ್ಷನ್ ಕಾಳಪ್ಪ ಪಾತ್ರ ಮುಸುರಿ ಕೃಷ್ಣಮೂರ್ತಿ ಅವರು ಹೆಚ್ಚು ಜನಪ್ರಿಯರಾಗಿದ್ದರು. ಅದೇ ರೀತಿ 1980ರಲ್ಲಿ ಬಿಡುಗಡೆ ಕಂಡಿದ್ದ ಧರ್ಮ ಸೆರೆಯಲ್ಲಿ ಮುಸುರಿ ಅವರ ಅಭಿನಯ ಈಗಲೂ ನಿಮ್ಮಲ್ಲಿ ನಗು, ಸಿಟ್ಟು ತರಿಸುತ್ತೆ. ಗುರುಶಿಷ್ಯರು, ಅಂತ, ನನ್ನ ದೇವರು, ಹಾಲು ಜೇನು, ಕವಿರತ್ನ ಕಾಳಿದಾಸ ಸೇರಿದಂತೆ 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರಿಯರ ಮನದಲ್ಲಿ ತಮ್ಮ ನಟನೆಯ ಛಾಪನ್ನು ಅಚ್ಚೊತ್ತಿಬಿಟ್ಟಿರುವುದು ಸುಳ್ಳಲ್ಲ.

1981ರಲ್ಲಿ ಯಶಸ್ವಿನಿ ಎಂಟರ್ ಪ್ರೈಸಸ್ ಎಂಬ ಸಿನಿಮಾ ನಿರ್ಮಾಣ ಕಂಪನಿಯನ್ನು ಕೃಷ್ಣಮೂರ್ತಿ ಅವರು ಆರಂಭಿಸಿದ್ದರು. ನಂಬರ್ 5 ಎಕ್ಕಾ ಎಂಬ ಸಿನಿಮಾವನ್ನು ನಿರ್ಮಿಸಿದ್ದರು. ಈ ಚಿತ್ರದಲ್ಲಿ ಶ್ರೀನಾಥ್, ಜಯಮಾಲಾ ಅಭಿನಯಿಸಿದ್ದರು. ಸಿನಿಮಾ ನಿರ್ಮಾಪಕರಾದ ನಂತರವೂ ಮುಸುರಿ ಅವರು ಸಿನಿಮಾಗಳಲ್ಲಿ ನಟಿಸಿದ್ದರು. 1985ರಲ್ಲಿನ ವೀರಾಧಿ ವೀರ ಮುಸುರಿ ಅವರ ಕೊನೆಯ ಚಿತ್ರ. 55ನೇ(1985) ವಯಸ್ಸಿನಲ್ಲಿಯೇ  ಮುಸುರಿ ಅವರು ಇಹಲೋಕ ತ್ಯಜಿಸಿದ್ದರು. ಮಕ್ಕಳಾದ ಗುರುದತ್ ಮುಸುರಿ, ಜಯಸಿಂಹ ಮುಸುರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next