Advertisement
ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಂದ ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಾಶಿನಾಥ್ ಅವರು ಚಿತ್ರರಂಗಕ್ಕೆ ಬಂದಿದ್ದು 1976ರಲ್ಲಿ ಬಿಡುಗಡೆಯಾದ “ಅಪರೂಪದ ಅತಿಥಿಗಳು’ ಚಿತ್ರದ ಮೂಲಕ. ಈ ಚಿತ್ರದಲ್ಲಿ ನಟ-ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡ ಅವರು, ನಂತರ “ಅಪರಿಚಿತ’ ಎಂಬ ಚಿತ್ರದಲ್ಲಿ ನಟಿಸಿದರು. ಈ ಚಿತ್ರ ಯಶಸ್ವಿಯಾದ ಬೆನ್ನಲ್ಲೇ, ಹಿಂದಿಯಲ್ಲೂ “ಬೇಶಕ್’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದರು. ಈ ಚಿತ್ರದ ಸೋಲಿನ ನಂತರ ಕನ್ನಡಕ್ಕೆ ಮರಳಿದ ಕಾಶಿನಾಥ್, “ಅನುಭವ’ ಚಿತ್ರವನ್ನು ನಿರ್ದೇಶಿಸಿ, ನಟಿಸಿದರು. ಆ ಕಾಲಕ್ಕೆ ಕ್ರಾಂತಿಕಾರಕ ಚಿತ್ರ ಎನಿಸಿಕೊಂಡಿತು.
Related Articles
ಹೌದು, ಸ್ಯಾಂಡಲ್‌ವುಡ್‌ನ ಅದೆಷ್ಟೋ ಕಲಾವಿದರಿಗೆ ಕಾಶಿನಾಥ್ ನಂದಾದೀಪ. ಹಲವು ಪ್ರತಿಭಾವಂತರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆ ಅವರಿಗಿದೆ. ಉಪೇಂದ್ರ, ವಿ. ಮನೋಹರ್, ಸುನೀಲ್ ಕುಮಾರ್ ದೇಸಾಯಿ, ಸುಂದರನಾಥ ಸುವರ್ಣ ಮುಂತಾದ ಹಲವು ಪ್ರತಿಭಾವಂತರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರೇ ಕಾಶಿನಾಥ್.
Advertisement
ಕಾಡಿದ ಅನಾರೋಗ್ಯ:ಕಾಶಿನಾಥ್ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು, ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ನಗರದ ಶಂಕರ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಸಾರ್ವಜನಿಕ ದರ್ಶನಕ್ಕಾಗಿ ಅವರ ದೇಹವನ್ನು ನರಸಿಂಹರಾಜ ಕಾಲೋನಿಯ ಎ.ಪಿ.ಎಸ್. ಮೈದಾನದಲ್ಲಿ ಇಡಲಾಗಿತ್ತು. ನಂತರ ಚಾಮರಾಜಪೇಟೆಯ ಟಿ.ಆರ್.ಮಿಲ್ ರುದ್ರಭೂಮಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಚಿತ್ರೀಕರಣ ಸ್ಥಗಿತ:
ಕಾಶಿನಾಥ್ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆಯೇ “ದಿ ವಿಲನ್’ ಸೇರಿದಂತೆ ಇತರೆ ಚಿತ್ರತಂಡಗಳು ಚಿತ್ರೀಕರಣ ಚಟುವಟಿಕೆಗಳನ್ನು ನಿಲ್ಲಿಸಿದವು. ಕಲಾವಿದರಾದ ಶಿವರಾಜಕುಮಾರ್, ಸುದೀಪ್, ದರ್ಶನ್, ಲೀಲಾವತಿ, ವಿನೋದ್ ರಾಜ್, ಸಾ.ರಾ. ಗೋವಿಂದು, ಅಭಿನಯ, ತಾರಾ, ಚಿರಂಜೀವಿ ಸರ್ಜಾ, ಶ್ರೀನಗರ ಕಿಟ್ಟಿ, ಸುಂದರ್‌ರಾಜ್ ಸೇರಿದಂತೆ ಹಲವಾರು ಗಣ್ಯರು ಕಾಶಿನಾಥ್ ಅವರ ಅಂತಿಮ ದರ್ಶನ ಪಡೆದರು. ಹಲವು ಕಲಾವಿದರು ಮತ್ತು ತಂತ್ರಜ್ಞರು ಸಾಮಾಜಿಕ ಜಾಲತಾಣಗಳ ಮೂಲಕ ಕಾಶಿನಾಥ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಪ್ರತಿಭಾವಂತ ಕಲಾವಿದರಾಗಿದ್ದ ಹಿರಿಯ ನಟ ಕಾಶಿನಾಥ್ ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇನ್ನೂ ಚಿಕ್ಕ ವಯಸ್ಸು, ಇಷ್ಟು ಬೇಗ ಅವರು ಸಾವನ್ನಪ್ಪಬಾರದಿತ್ತು. ಹಾಸ್ಯನಟರಾಗಿದ್ದರು. ನಾನೂ ಕೂಡ ಅವರ ಎರಡು ಚಿತ್ರಗಳನ್ನು ನೋಡಿದ್ದೇನೆ. ಕಾಶಿನಾಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ.
– ಸಿದ್ದರಾಮಯ್ಯ, ಮುಖ್ಯಮಂತ್ರಿ