Advertisement

ಒಂದೂವರೆ ತಿಂಗಳಾದರೂ ಸಮಿತಿ ಸದಸ್ಯರಿಗೇ ಗೊತ್ತಿರಲಿಲ್ಲ!

05:50 AM Jul 20, 2017 | |

ಬೆಂಗಳೂರು: ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜವನ್ನು ರೂಪಿಸಿ, ಅದಕ್ಕೆ ಕಾನೂನು ಚೌಕಟ್ಟು ನೀಡಲು ಸರ್ಕಾರ ಸಮಿತಿ ರಚಿಸಿರುವುದು ಆ ಸಮಿತಿಯ ಹಲವು ಸದಸ್ಯರಿಗೇ ಒಂದೂವರೆ ತಿಂಗಳಾದರೂ ಈ ವಿಚಾರವೇ ಗೊತ್ತಿರಲಿಲ್ಲ! ಬಹುತೇಕ ಸದಸ್ಯರಿಗೆ ಈ ವಿಷಯ ತಿಳಿದದ್ದು  ಮಂಗಳವಾರ ಮಾಧ್ಯಮಗಳ ಮೂಲಕವಷ್ಟೇ!

Advertisement

ಹಿರಿಯ ಸಾಹಿತಿ ಡಾ.ಪಾಟೀಲ ಪುಟ್ಟಪ್ಪ ಹಾಗೂ ಸಮಾಜ ಸೇವಕ ಭೀಮಪ್ಪ ಗುಂಡಪ್ಪ ಗಡಾದ ಅವರು 2014ರಲ್ಲಿ ಸರ್ಕಾರಕ್ಕೆ ಪತ್ರ ಬರೆದು, ಕನ್ನಡ ನಾಡಿಗೆ ಪ್ರತ್ಯೇಕ ಧ್ವಜದ ವಿನ್ಯಾಸ ಸಿದ್ದಪಡಿಸಿ, ಅದಕ್ಕೆ ಕಾನೂನಿನ ಸ್ವರೂಪ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಂಡು 2017 ಜೂನ್‌ 6ರಂದು ಆದೇಶ ಹೊರಡಿಸಿತ್ತು. ಕನ್ನಡ ನಾಡಿಗೆ ಪ್ರತ್ಯೇಕ ಧ್ವಜ ವಿನ್ಯಾಸ ಸಿದ್ದಪಡಿಸಿ ಕಾನೂನಿನ ಸ್ವರೂಪ ನೀಡುವ ಕುರಿತು ವರದಿ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಿ ಆದೇಶಿಸಿತ್ತು.

ಜು.18ರಂದು ಈ ವಿಷಯ ಮಾಧ್ಯಮಗಳಲ್ಲಿ ಪ್ರಕಟಗೊಂಡು, ವಿವಾದ ಸ್ವರೂಪ ಪಡೆದುಕೊಳ್ಳುವವರೆಗೂ ಈ ಸಮಿತಿಯಲ್ಲಿದ್ದ ಬಹುತೇಕ ಸದಸ್ಯರಿಗೆ ತಾವು ಸರ್ಕಾರ ರಚಿಸಿರುವ ಇಂಥಹದ್ದೊಂದು ಸಮಿತಿಯಲ್ಲಿ ಸದಸ್ಯರಾಗಿದ್ದೇವೆ ಎನ್ನುವ ವಿಚಾರವೇ ಗೊತ್ತಿರಲಿಲ್ಲ ಎನ್ನುವುದೇ ವಿಶೇಷ.

ಸರ್ಕಾರದ ಆದೇಶದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಅಧ್ಯಕ್ಷ), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗೃಹ ಇಲಾಖೆ, ಕಾನೂನು ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆಗಳ ಸರ್ಕಾರದ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಪತಿ (ಸದಸ್ಯರು) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು (ಸದಸ್ಯ ಕಾರ್ಯದರ್ಶಿ) ನೇಮಿಸಿದೆ.

ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ರೂಪಿಸಿ, ಕಾನೂನಿನ ಸ್ವರೂಪ ನೀಡುವ ಕುರಿತು ವರದಿ ಸಲ್ಲಿಸಲು ಒಂದೂವರೆ ತಿಂಗಳ ಹಿಂದೆಯೇ ಸಮಿತಿ ರಚಿಸಿದ್ದರೂ, ಇದುವರೆಗೂ ಒಂದು ಸಭೆಯೂ ನಡೆದಿಲ್ಲ. ಸಮಿತಿಯ ಸದಸ್ಯರ ಪೈಕಿ ಕೆಲವರು ಹೇಳುವಂತೆ ಸದಸ್ಯರೆಂದು ನಮಗೇ ಗೊತ್ತಿಲ್ಲದ್ದಿದ್ದ ಮೇಲೆ ಇನ್ನೂ ಸಭೆ ನಡೆಯುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.

Advertisement

ಸಮಿತಿ ಕುರಿತು ಮಾಹಿತಿ ನೀಡುವ ಜವಾಬ್ದಾರಿಯನ್ನು ಸರ್ಕಾರ ಸರಿಯಾಗಿ ನಿರ್ವಹಿಸಬೇಕಿತ್ತು. ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಧ್ಯಕ್ಷರಾಗಿದ್ದು, ಈ ವಿಚಾರ ಅವರ ಗಮನಕ್ಕೆ ಬಂದಿರುತ್ತದೆ. ಅವರಾದರೂ ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಆಹ್ವಾನಿಸಬೇಕಿತ್ತು. ಕೇವಲ ನಾಮಕಾವಸ್ಥೆಗೆ ಸಮಿತಿ ರಚಿಸಿ, ವಿವಾದ ಎಬ್ಬಿಸುವ ಅಗತ್ಯವಿರಲಿಲ್ಲ ಎಂಬ ಆರೋಪ ಕನ್ನಡ ಪರ ಸಂಘಟನೆಗಳಿಂದ ಕೇಳಿಬಂದಿದೆ.

ಸರ್ಕಾರದ ಆದೇಶ ಯಾವಾಗ ಬಂದಿತ್ತೋ ಗೊತ್ತಿಲ್ಲ. ಆದರೆ ನನಗೆ ಮಾಹಿತಿ ಕಳೆದ ಎರಡೂ¾ರು ದಿನಗಳ ಹಿಂದೆಯಷ್ಟೇ ಬಂದಿದೆ. ಇನ್ನೂ ಸಮಿತಿ ಸಭೆ ಸೇರಿಲ್ಲ. ಮೊದಲ ಸಭೆ ನಡೆದ ನಂತರ ಏನು ಮಾಡಬೇಕು ಎಂಬಿತ್ಯಾದಿ ವಿಚಾರಗಳು ಗೊತ್ತಾಗಲಿವೆ. ಇಷ್ಟೇ ದಿನದಲ್ಲಿ ವರದಿ ನೀಡಬೇಕು ಎಂಬ ಯಾವುದೇ ಗಡುವನ್ನು ಸರ್ಕಾರ ನೀಡಿಲ್ಲ.
– ಎಸ್‌.ಜಿ.ಸಿದ್ದರಾಮಯ್ಯ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ.

ಇದುವರೆಗೂ ಆದೇಶ ಪ್ರತಿ ನನ್ನ ಕೈಸೇರಿಲ್ಲ. ನಾನು ಕೂಡ ಆ ಸಮಿತಿಯಲ್ಲಿ ಸದಸ್ಯನಿದ್ದೇನೆ ಅನ್ನೋದು ಸಹ ಮಾಧ್ಯಮಗಳ ಮೂಲಕ ಗೊತ್ತಾಯೆ¤à ಹೊರತು, ಅಧಿಕೃತವಾಗಿ ಯಾವುದೇ ಆದೇಶ ಸಿಕ್ಕಿಲ್ಲ.
– ಡಾ.ಮನುಬಳಿಗಾರ್‌, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು.

ಸಮಿತಿ ರಚನೆ ಕುರಿತು ಆದೇಶ ಬಂದ ಕೂಡಲೇ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಹಾಗೂ ಇತರರಿಗೆ ಟಪಾಲನ್ನು ಅಧಿಕೃತವಾಗಿಯೇ ತಲುಪಿಸಿದ್ದೇವೆ. ಆಗಾಗ ಇಲಾಖೆಯಲ್ಲಿ ಅಧಿಕಾರಿಗಳು ಬದಲಾಗುವ ಪ್ರಕ್ರಿಯೆ ಸಾಮಾನ್ಯವಾಗಿದ್ದು, ಈ ಕಾರಣದಿಂದ ಈಗಿರುವವರಿಗೆ ಮಾಹಿತಿ ಸಿಕ್ಕದಿರಬಹುದು. ಮೊದಲ ಸಭೆ ಯಾವಾಗ ಎಂದು ನಿರ್ಧಾರವಾದಾಗ ವಿಷಯ ತನ್ನಿಂತಾನೆ ಗೊತ್ತಾಗುತ್ತಿತ್ತು.
– ರಘುಸ್ವಾಮಿ, ಉಪಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

– ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next