ನೀವೇನಾದರೂ ಬೆಂಗಳೂರಿಗರಾಗಿದ್ದರೆ, ಅಥವಾ ಬೆಂಗಳೂರಿನಲ್ಲಿ ಒಂದು ರೌಂಡ್ ಹಾಕಿ ಬಂದಿದ್ದರೆ, “ಕನ್ನಡ್ ಗೊತ್ತಿಲ್ಲ’ ಎಂಬ ಈ ಪದವನ್ನು ಖಂಡಿತಾ ಒಮ್ಮೆಯಾದರೂ, ಕೇಳಿರುತ್ತೀರಿ. ಬೆಂಗಳೂರಿನಲ್ಲಿ ಬಂದು ನೆಲೆಸಿರುವ ಅನ್ಯಭಾಷಿಕರು ಮೊದಲು ಕಲಿಯುವ ಪದ “ಕನ್ನಡ್ ಗೊತ್ತಿಲ್ಲ’ ಈ ವಾರ ಕನ್ನಡದ ಚಿತ್ರದ ಶೀರ್ಷಿಕೆಯಾಗಿ ತೆರೆಮೇಲೆ ಬಂದಿದೆ. “ಕನ್ನಡ್ ಗೊತ್ತಿಲ್ಲ’ ಚಿತ್ರದ ಹೆಸರೇ ಹೇಳುವಂತೆ ಇದು ಕನ್ನಡ ವಿಷಯವನ್ನು ಇಟ್ಟುಕೊಂಡು ಬಂದಿರುವ ಚಿತ್ರ.
ಹಾಗಂತ ಚಿತ್ರದಲ್ಲಿ ಭಾಷಾ ಹೋರಾಟ, ಕನ್ನಡ ಜಾಗೃತಿಯಂತಹ ಅಂಶಗಳೇನಾದರೂ ಇದೆಯಾ ಅಂಥ ಹುಡುಕಲು ಹೊರಟರೆ ಉತ್ತರ ಸಿಗೋದು ಕಷ್ಟ. “ಕನ್ನಡ್ ಗೊತ್ತಿಲ್ಲ’ ಅಂಥ ಹೆಸರಿದ್ದರೂ, ಇದೊಂದು ಸಸ್ಪೆನ್ಸ್-ಕ್ರೈಂ ಅಂಶಗಳನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ. ಬೆಂಗಳೂರಿನಲ್ಲಿರುವ “ಕನ್ನಡ್ ಗೊತ್ತಿಲ್ಲ’ ಅನ್ನುವ ಅನ್ಯಭಾಷಿಕರು ಒಂದು ಏರಿಯಾದಿಂದ ಒಬ್ಬೊಬ್ಬರಾಗಿ ನಿಗೂಢವಾಗಿ ಕಣ್ಮರೆಯಾಗುತ್ತಾರೆ.
ಹಾಗಾದರೆ, ಕಣ್ಮರೆಯಾದ “ಕನ್ನಡ್ ಗೊತ್ತಿಲ್ಲ’ದವರು ಏನಾದರೂ, ಅದರ ಹಿಂದಿರುವ ಕಾರಣಗಳೇನು? ಅನ್ನೋದೆ “ಕನ್ನಡ್ ಗೊತ್ತಿಲ್ಲ’ ಚಿತ್ರದ ಕಥಾಹಂದರ. ಇಂಥದ್ದೊಂದು ಸಸ್ಪೆನ್ಸ್-ಕ್ರೈಂ ಸ್ಟೋರಿಗೆ ಅಲ್ಲಲ್ಲಿ ಕನ್ನಡದ ನಂಟು ಬೆಸೆದುಕೊಳ್ಳುತ್ತದೆ. ಅದನ್ನ ತಿಳಿಯುವ ಕುತೂಹಲವಿದ್ದರೆ ಚಿತ್ರದ ಕ್ಲೈಮ್ಯಾಕ್ಸ್‌ವರೆಗೂ ಕೂರಬೇಕಾಗುತ್ತದೆ. ಕನ್ನಡದ ವಿಷಯವನ್ನು ಇಟ್ಟುಕೊಂಡು, ಅದರ ಹಿಂದೆ ಒಂದು ಸಸ್ಪೆನ್ಸ್-ಕ್ರೈಂ ಸ್ಟೋರಿಯನ್ನು ಬೆರೆಸಿ ಪ್ರೇಕ್ಷಕರ ಮುಂದಿರುವ ನಿರ್ದೇಶಕರ ಪ್ರಯತ್ನ ಚೆನ್ನಾಗಿದ್ದರೂ, ಅದು ತೆರೆಮೇಲೆ ಅಂದುಕೊಂಡ ಮಟ್ಟಕ್ಕೆ ಫಲಿತಾಂಶ ನೀಡಿಲ್ಲ.
ಚಿತ್ರದ ಮೊದಲರ್ಧ ನೋಡುಗರಿಗೆ ತುಂಬಾ ಕಡೆ ಬೋರ್ ಹೊಡೆಸುತ್ತದೆ. “ಕನ್ನಡ್’ಕ್ಕಾಗಿ ಮೊದಲರ್ಧವನ್ನು ಸಹಿಸಿಕೊಂಡರಷ್ಟೇ ದ್ವಿಯಾರ್ಧದಲ್ಲಿ “ಗೊತ್ತಿಲ್ಲ’ದ ಒಂದಷ್ಟು ವಿಷಯಗಳು ಗೊತ್ತಾಗುತ್ತದೆ. ಚಿತ್ರದ ನಿರೂಪಣೆಯಲ್ಲಿ, ಕಥೆಯನ್ನು ಇನ್ನಷ್ಟು ಮೊನಚಾಗಿ ಹೇಳುವ ಅವಕಾಶಗಳಿದ್ದರೂ, ನಿರ್ದೇಶಕರು ಅದನ್ನು ಸಮರ್ಥವಾಗಿ ಬಳಸಿಕೊಂಡಂತಿಲ್ಲ. ಚಿತ್ರಕಥೆ ಮತ್ತು ನಿರೂಪಣೆ ಕಡೆಗೆ ಇನ್ನಷ್ಟು ಗಮನ ನೀಡಿದ್ದರೆ, “ಕನ್ನಡ್ ಗೊತ್ತಿಲ್ಲ’ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು.
ಇನ್ನು ಚಿತ್ರದ ಬಹುಭಾಗ ಪೊಲೀಸ್ ತನಿಖಾಧಿಕಾರಿಯಾದ ಹರಿಪ್ರಿಯಾ ಸುತ್ತ ನಡೆಯುತ್ತದೆ. ಪಾತ್ರದಲ್ಲಿ ಬದಲಾವಣೆಯಿದೆ ಎಂಬ ಅಂಶವನ್ನು ಹೊರತುಪಡಿಸಿದರೆ, ಹರಿಪ್ರಿಯಾ ಅಭಿನಯದಲ್ಲಿ ಹೊಸ ಬದಲಾವಣೆಯನ್ನೂ ನಿರೀಕ್ಷಿಸುವಂತಿಲ್ಲ. ಹರಿಪ್ರಿಯಾ ಪಾತ್ರದಲ್ಲಿ, ಪೊಲೀಸ್ ಆಫೀಸರ್ ಅಂದ್ರೆ ಇರುವ ಗತ್ತು, ಖಡಕ್ ಖದರ್ ಇನ್ನಷ್ಟು ಬೇಕಿತ್ತು. ಚಿತ್ರಕ್ಕೆ ಅನಗತ್ಯವಾದರೂ, ಹರಿಪ್ರಿಯಾ ಅವರ ಬಿಲ್ಡಪ್ ಮತ್ತಿತರ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, ಚಿತ್ರಕಥೆ ಇನ್ನಷ್ಟು ವೇಗ ಪಡೆದುಕೊಳ್ಳುತ್ತಿತ್ತು. ಉಳಿದಂತೆ ಬೆನಕ ಪವನ್, ಧರ್ಮಣ್ಣ ಕಡೂರ್ ಅಭಿನಯ ಚಿತ್ರದಲ್ಲಿ ಸಾಕಷ್ಟು ಗಮನ ಸೆಳೆಯುತ್ತದೆ.
ಸುಧಾರಾಣಿ ಕೇವಲ ಅತಿಥಿ ಪಾತ್ರಕಷ್ಟೇ ಸೀಮಿತವಾಗಿರುವುದರಿಂದ ಅವರ ಪಾತ್ರದ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ಉಳಿದಂತೆ ಇನ್ಯಾವ ಪಾತ್ರಗಳೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದಿಲ್ಲ. “ಕನ್ನಡ್ ಗೊತ್ತಿಲ್ಲ’ ಚಿತ್ರದ ಕೆಲ ತಾಂತ್ರಿಕ ಅಂಶಗಳು ಗಮನ ಸೆಳೆಯುತ್ತವೆ. ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಚೆನ್ನಾಗಿ ಮೂಡಿಬಂದಿದೆ. ರಘು ದೀಕ್ಷಿತ್ ಹಾಡಿರುವ ಹಾಡು ಕೆಲಹೊತ್ತು ಕಿವಿಯಲ್ಲಿ ಗುನುಗುಟ್ಟುತ್ತದೆ. ಸಂಕಲನ ಕಾರ್ಯ ಇನ್ನಷ್ಟು ಹರಿತವಾಗಿದ್ದರೆ ಚಿತ್ರದ ವೇಗ ಕೂಡ ಹೆಚ್ಚುತ್ತಿತ್ತು.
ಚಿತ್ರ: ಕನ್ನಡ್ ಗೊತ್ತಿಲ್ಲ
ನಿರ್ಮಾಣ: ಕುಮಾರ ಕಂಠೀರವ
ನಿರ್ದೇಶನ: ಮಯೂರ್ ರಾಘವೇಂದ್ರ
ತಾರಾಗಣ: ಹರಿಪ್ರಿಯಾ, ಬೆನಕ ಪವನ್, ಧರ್ಮಣ್ಣ ಕಡೂರ್, ಸುಧಾ ಬೆಳವಾಡಿ, ಸುಧಾ ರಾಣಿ ಮತ್ತಿತರರು.
* ಜಿ.ಎಸ್ ಕಾರ್ತಿಕ ಸುಧನ್