ಕಂಕನಾಡಿ: ಕಾರಣಿಕ ಕ್ಷೇತ್ರ ಕಂಕನಾಡಿ ಗರಡಿ ಸ್ಥಾಪನೆಗೊಂಡು 150 ವರ್ಷ ಪೂರ್ಣಗೊಂಡಿರುವ ಪ್ರಯುಕ್ತ “ನಮ್ಮೂರ ಸಂಭ್ರಮ’ದ ಸೋಮವಾರ ಶ್ರೀ ಬ್ರಹ್ಮ ಬೈದರ್ಕಳರಿಗೆ ಸಹಸ್ರ ಕುಂಭಾಭಿಷೇಕ ನಡೆಯಿತು.
ವೇ| ಮೂ| ಕೆ. ವಾಸುದೇವ ಶಾಂತಿ ಯವರ ಉಪಸ್ಥಿತಿಯಲ್ಲಿ ಬಿ. ಗಂಗಾಧರ ಶಾಂತಿ ನೇತೃತ್ವದಲ್ಲಿ ನಾರಾಯಣಗುರು ವೈದಿಕ ಸಮಿತಿ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಶಾಂತಿ ಋತ್ವಿಜರು, ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ಬೆಳಗ್ಗೆ 4.30ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಗಣಪತಿ ಹೋಮ, ಸಹಸ್ರಕಲಶ ಪ್ರಸನ್ನ ಪೂಜೆ, ಕಲಶಾಭಿಷೇಕ ಪ್ರಾರಂಭ, ಬೆಳಗ್ಗೆ 7.40ಕ್ಕೆ ಶ್ರೀ ಶ್ರೀ ಬ್ರಹ್ಮ ಬೈದರ್ಕಳರಿಗೆ ಸಹಸ್ರ ಕುಂಭಾಭಿಷೇಕ ಜರಗಿತು. ಬಳಿಕ ಪ್ರಸನ್ನ ಪೂಜೆ, ಅನ್ನ ನೈವೇದ್ಯ ಸೇವೆ, ಬೈದರ್ಕಳರಿಗೆ ದರ್ಶನ ಸೇವೆ, ಪಾಣಿತಾಡನ, ಭೂತಬಲಿ, ಪಲ್ಲಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಂಜೆ 4 ಗಂಟೆಯಿಂದ ನಾಗಮಂಡಲ ಮಂಟಪ ಶುದ್ಧಿ, ವಾಸ್ತು ರಾಕ್ಷೋಘ್ನಾ ಹೋಮ, ವಾಸ್ತು ಬಲಿ, ರಾತ್ರಿ 7 ಗಂಟೆಯಿಂದ ಪಲ್ಲಕ್ಕಿ ಬಲಿ ಉತ್ಸವ, ಬ್ರಹ್ಮ ಬೈದರ್ಕಳರಿಗೆ ವಿಶೇಷ ಮಹಾಪೂಜೆ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚುಟುಕು ಕವಿಗೋಷ್ಠಿ, ಸ್ಥಳೀಯ ಪ್ರತಿಭೆಗಳಿಂದ ವಿವಿಧ ನೃತ್ಯಾವಳಿಗಳು, ತುಳು, ಭಾರತೀಯ ಜಾನಪದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ “ವರಾಹ ರೂಪಂ.. ವ್ಹಾ ಪೊರ್ಲುಯಾ’ ಜರಗಿತು. ಸಂಜೆ ಧಾರ್ಮಿಕ
ಸಭಾ ಕಾರ್ಯಕ್ರಮ ನಡೆಯಿತು.
ಇಂದು ನಾಗಬ್ರಹ್ಮ ಮಂಡಲೋತ್ಸವ
ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಮಾ.7ರಂದು ರಾತ್ರಿ 12 ಗಂಟೆಯಿಂದ ನಾಗಬ್ರಹ್ಮ ಮಂಡಲೋತ್ಸವ ಸೇವೆ ನಡೆಯಲಿದೆ. ಬೆಳಗ್ಗೆಯಿಂದಲೇ ಗಣಪತಿ ಹೋಮ, ನಾಗದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ತನುತಂಬಿಲ ಸೇವೆ, ಆಶ್ಲೇಷಾ ಬಲಿ, ಸರ್ಪಸೂಕ್ತ ಹೋಮ, ಮಂಡಲ ಪೂಜೆ, ನಾಗಪಾತ್ರಿ ಮನೋಜ್ ಶಾಂತಿ ಮತ್ತು ಬಳಗದವರಿಂದ ನಾಗ ಸಾನ್ನಿಧ್ಯದಲ್ಲಿ ಹಾಲಿಟ್ಟು ಸೇವೆ ನಡೆಯಲಿದೆ.