Advertisement

ಶಿವಯೋಗ ಮಂದಿರಕ್ಕೆ ಕನೇರಿಮಠ ಸವಾಲು

03:30 PM Jun 29, 2018 | Team Udayavani |

ಬೆಳಗಾವಿ: ಜಂಗಮರಿಗೆ ಮಾತ್ರ ಮಠಾಧೀಶರಾಗಲು ಹಾಗೂ ಅರ್ಚಕರಾಗುವ ತರಬೇತಿ ನೀಡುತ್ತಿರುವ ಬಾದಾಮಿಯ ಶಿವಯೋಗ ಮಂದಿರಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರದ ಸಿದ್ಧಸಂಸ್ಥಾನಗಿರಿಯ ಕನೇರಿ ಮಠದಲ್ಲಿ ಜಂಗಮೇತರ ಎಲ್ಲ ಜಾತಿ, ಪಂಥಗಳ ಜನರ ತರಬೇತಿಗಾಗಿ ಗುರುಕುಲ ಆರಂಭಿಸಲಾಗುವುದು ಎಂದು ಕನೇರಿಯ ಸಿದ್ಧಸಂಸ್ಥಾನಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಕ್ಷೇತ್ರದಲ್ಲಿ ಈಗೀಗ ಹಲವಾರು ಬೆಳವಣಿಗೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮತ್ತು ಅದ್ವೆ„ತ ಪಂಥ ಪಾಲಿಸುವ ಸುಮಾರು 400 ಮಠಾಧೀಶರು ಒಂದೆಡೆ ಸೇರಿ ಸಹೃದಯಿ ಮಠಾಧಿಪತಿಗಳ ಒಕ್ಕೂಟ ಆರಂಭಿಸಿದ್ದೇವೆ. ಈ ಒಕ್ಕೂಟವು ಈಗಾಗಲೇ ತನ್ನ ಕಾರ್ಯ ಆರಂಭಿಸಿದೆ.  ರಾಜ್ಯದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಜಂಗಮೇತರ ಮಠಾಧೀಶರಿದ್ದು ಅವರೆಲ್ಲರನ್ನು ಈ ಒಕ್ಕೂಟದ ಅಡಿ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.

ಸಹೃದಯ ಮಠಾಧೀಶರ ಒಕ್ಕೂಟ ಕನೇರಿ ಮಠದಲ್ಲಿ ಜಂಗಮೇತರರಿಗೆ ಸನ್ಯಾಸ, ಮಠಾಧಿಪತಿ ಆಗಲು ಮತ್ತು
ಅರ್ಚಕ ವೃತ್ತಿ ಕೈಗೊಳ್ಳುವವರಿಗೆ ತರಬೇತಿ ಕೇಂದ್ರ ಆರಂಭಿಸಿದೆ. ಮಠಾಧಿಪತಿ ಆಗಲು ಜಾತಿ, ಮತ, ಪಂಥ
ಮುಖ್ಯವಲ್ಲ, ಜ್ಞಾನ, ವ್ಯಕ್ತಿತ್ವ, ಚಾರಿತ್ರ್ಯ ಮತ್ತು ನಡವಳಿಕೆ ಮುಖ್ಯ ಎಂಬುದನ್ನು ಈ ಕೇಂದ್ರ ಸಾರಿ ತೋರಿಸಲಿದೆ. ಮಠಾಧೀಶರು ಜಾತಿ ಆಧಾರಿತ ಆಗಬಾರದು. ಒಂದೇ ಕುಟುಂಬಕ್ಕೆ ಇದು ಸೀಮಿತವಾಗಬಾರದು. ಈ ಹಿನ್ನೆಲೆಯಲ್ಲಿ
ಸಹೃದಯ ಮಠಾಧೀಶರ ಒಕ್ಕೂಟ ಕಾರ್ಯ ನಿರ್ವಹಿಸಲಿದೆ ಎಂದರು. 

ಈಗ ಆರಂಭಿಸಿರುವ ಗುರುಕುಲ ಮುಂಬರುವ ದಿನಗಳಿಗೆ ಹಾಗೂ ಪೀಳಿಗೆಗೆ ಸನ್ಯಾಸಿಗಳನ್ನು, ಮಠಾಧೀಶರು ಮತ್ತು ಅರ್ಚಕರನ್ನು ತಯಾರು ಮಾಡಲಿದೆ. ಇದು ಜಾತಿ, ಪಂಥ ರಹಿತವಾಗಿದ್ದು, ಹಿಂದೂ ಧರ್ಮ ಪಾಲಿಸುವ, ನಮ್ಮ ಸಿದ್ಧಾಂತ ಅಳವಡಿಸಿಕೊಂಡಿರುವ ಯಾರಾದರೂ ಇಲ್ಲಿ ಬರಬಹುದು.ಈಗ ಜಂಗಮ ಮಠಾಧೀಶರಿಗೆ ಮಾತ್ರ ಆದ್ಯತೆ
ದೊರೆಯುತ್ತಿದ್ದು, ಜಂಗಮೇತರ ಮಠಾಧೀಶರನ್ನು ಕಣೆಗಣಿಸಲಾಗುತ್ತಿದೆ. ಈ ಎಲ್ಲ ನೋವುಗಳಿಗೆ ನಿವಾರಣೆ ಕಂಡುಕೊಳ್ಳಲು ರಾಜ್ಯದ ಜಂಗಮೇತರ ಮಠಾಧೀಶರು ಒಂದೆಡೆ ಸೇರಿ ಸಹೃದಯ ಮಠಾಧೀಶರ ಒಕ್ಕೂಟ ಸ್ಥಾಪನೆ ಮಾಡಿದ್ದಾರೆ ಎಂದರು.

ಅಧ್ಯಯನಕ್ಕೆ ಅವಕಾಶ: ಶಿವಯೋಗ ಮಂದಿರದಲ್ಲಿ ಜಂಗಮರಲ್ಲದವರಿಗೆ ಪ್ರವೇಶ ಸಿಕ್ಕಿಲ್ಲ. ಅಲ್ಲಿ ಪ್ರವೇಶ ಸಿಗದ
ಎಲ್ಲರೂ ಇಲ್ಲಿ ಪ್ರವೇಶ ಪಡೆದು ಅಧ್ಯಯನ ಮಾಡಬಹುದು. ರಾಜ್ಯದಲ್ಲಿ 60 ಸಾವಿರ ಮಠಗಳಿದ್ದು, ಎಲ್ಲಿ ಬೇಕಾದರೂ ಮಠಾಧೀಶರಾಗಬಹುದು. ಇನ್ನು ಅರ್ಚಕರಾಗ ಬಯಸುವವರಿಗೆ 6 ತಿಂಗಳು ಮತ್ತು 1 ವರ್ಷದ ಅವಧಿಯ
ಕೋರ್ಸ್‌ಗಳಿವೆ. ಮಠಾಧೀಶರಾಗ ಬಯಸುವವರು 4 ವರ್ಷದಿಂದ 12 ವರ್ಷಗಳವರೆಗೂ ಇಲ್ಲಿ ಉಚಿತವಾಗಿ
ಅಧ್ಯಯನ ಮಾಡಬಹುದು. ಇದಕ್ಕೆ ಜಂಗಮೇತರರು ಯಾರು ಬೇಕಾದರೂ ಆಗಬಹುದು. ಇನ್ನು ಸಂಗೀತಾಸಕ್ತರಿಗೆ
ಕೀರ್ತನಕಾರರಾಗಲು ಅವಶ್ಯಕವಾದ ತರಬೇತಿ ನೀಡಲಾಗುವುದು ಎಂದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಶಿರೋಳದ ಶಂಕರಾರೂಢ ಸ್ವಾಮೀಜಿ, ಹಲ್ಯಾಳದ ಹರ್ಷಾನಂದ ಸ್ವಾಮಿಗಳು, ಚಿಕ್ಕೂರಿನ
ಅದ್ವೈತಾನಂದ ಸ್ವಾಮಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next