ಮಂಡಿ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರು ಶನಿವಾರ ಚುನಾವಣ ರ್‍ಯಾಲಿಯಲ್ಲಿ ಭಾಷಣ ಮಾಡುವಾಗ ತಮ್ಮದೇ ಪಕ್ಷದ ನಾಯಕ ತೇಜಸ್ವಿ ಸೂರ್ಯ ಹೆಸರನ್ನು ತಪ್ಪಾಗಿ ಬಳಸಿ ನಡೆಸಿದ ವಾಗ್ದಾಳಿಯ ವಿಡಿಯೋ ವೈರಲ್ ಆಗುತ್ತಿದೆ.
ಬಿಹಾರದ ಮಾಜಿ ಉಪಮುಖ್ಯಮಂತ್ರಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಹೆಸರು ಬಳಸುವ ಬದಲು ತಪ್ಪಾಗಿ ತೇಜಸ್ವಿ ಸೂರ್ಯ ಅವರ ಹೆಸರು ಬಳಸಿದ್ದಾರೆ. ಹಲವರು ತಮ್ಮದೇ ಪಕ್ಷದ ಸಂಸದನ ಬಗ್ಗೆ ಅರಿವಿಲ್ಲವೇ ಎಂದು ಪ್ರತಿಕ್ರಿಯೆ ನೀಡಿ ನಟಿಯನ್ನು ಟೀಕಿಸಿದ್ದಾರೆ.
‘ತೇಜಸ್ವಿ ಸೂರ್ಯ ಅವರನ್ನು ಗೂಂಡಾಗಿರಿ ಮಾಡುತ್ತಾ ನವರಾತ್ರಿಯ ಮುನ್ನಾದಿನದಂದು ಮೀನು ತಿನ್ನುತ್ತಾರೆ ಎಂದು ಆರೋಪಿಸಿದರು. ತೇಜಸ್ವಿ ಯಾದವ್ ಅವರು ಏಪ್ರಿಲ್ 9 ರಂದು ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಚುನಾವಣೆಯ ಪ್ರಚಾರದ ನಂತರ ನಂತರ ಫಿಶ್ ಫ್ರೈ ತಿನ್ನುತ್ತಿದ್ದರು. ಈ ಬಗ್ಗೆ ಹಲವರು ಟೀಕೆ ಮಾಡಿದ್ದರು.
ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ ರಣಾವತ್, ಚಂದ್ರನ ಮೇಲೆ ಆಲೂಗೆಡ್ಡೆ ಬೆಳೆಯಲು ಬಯಸುತ್ತಿರುವ ರಾಹುಲ್ ಗಾಂಧಿಯಾಗಲಿ, ವಿಚಿತ್ರವಾಗಿ ಮಾತನಾಡುವ ಅಖಿಲೇಶ್ ಯಾದವ್, ಗೂಂಡಾಗಿರಿ ಮಾಡುವ ‘ತೇಜಸ್ವಿ ಸೂರ್ಯ’ ಅವರೇ ಆಗಲಿ, ಅದೆಲ್ಲ ಹಾಳಾದ ರಾಜಕುಮಾರರ ಪಕ್ಷಎಂದು ಹೇಳಿದ್ದಾರೆ.
ಟೀಕಾ ಪ್ರಹಾರದ ಭರದಲ್ಲಿ ಯಾರೆಂಬುದೇ ಮರೆತು ಹೋಯಿತೇ ಎಂದು ಹಲವರು ಪ್ರಶ್ನಿಸಿದ್ದಾರೆ.