Advertisement

Kangana Ranaut: ಸಿಗದ ಸೆನ್ಸಾರ್ ಪ್ರಮಾಣ ಪತ್ರ; ಕಂಗನಾ ʼಎಮರ್ಜೆನ್ಸಿʼ ರಿಲೀಸ್‌ ಮುಂದೂಡಿಕೆ

01:15 PM Sep 02, 2024 | Team Udayavani |

ಮುಂಬಯಿ: ಹಲವರು ವಿಘ್ನಗಳನ್ನು ಎದುರಿಸಿ ರಿಲೀಸ್‌ ಡೇಟ್‌ ಮುಂದೂಡುತ್ತಾ ಬಂದಿದ್ದ ಕಂಗನಾ ರಣಾವತ್‌ (Kangana ranaut) ನಟಿಸಿ, ನಿರ್ದೇಶಿಸಿರುವ ಬಹು ನಿರೀಕ್ಷಿತ ʼಎಮರ್ಜೆನ್ಸಿʼ (Emergency  Movie) ಸಿನಿಮಾಕ್ಕೆ ಮತ್ತೆ ಸಂಕಷ್ಟ ಎದುರಾಗಿದ್ದು ಮತ್ತೆ ರಿಲೀಸ್‌ ಡೇಟ್‌ ಮುಂದೂಡಿಕೆ ಆಗಿದೆ ಎಂದು ವರದಿಯಾಗಿದೆ.

Advertisement

ಭಾರತದ ತುರ್ತು ಪರಿಸ್ಥಿತಿಯ ಕಥೆಯನ್ನೊಳಗೊಂಡಿರುವ ʼಎಮರ್ಜೆನ್ಸಿʼ ಸಿನಿಮಾದಲ್ಲಿ ನಟಿ ಕಂಗನಾ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಭಾರತವೇ ಇಂದಿರಾ & ಇಂದಿರಾ ಭಾರತವೇ!!! ದೇಶದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆ,  ಇತಿಹಾಸದಲ್ಲಿ ಅವಳು ಬರೆದ ಕರಾಳ ಅಧ್ಯಾಯ! ಎಂದು ಟ್ರೇಲರ್‌ನ್ನು ಕಂಗನಾ ಹಂಚಿಕೊಂಡಿದ್ದರು.

ಸೆ.6ರಂದು ಸಿನಿಮಾ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಇದೀಗ ಸೆ.6ರಂದು ಕೂಡ ʼಎಮರ್ಜೆನ್ಸಿʼ ಬರುವುದು ಅನುಮಾನವೆನ್ನಲಾಗುತ್ತಿದೆ.

Advertisement

ಕಾರಣವೇನು?: ಇತ್ತೀಚೆಗೆ ಸಿನಿಮಾದ ಟ್ರೇಲರ್‌ ರಿಲೀಸ್‌ ಬಳಿಕ ಶಿರೋಮಣಿ ಅಕಾಲಿದಳದ ದೆಹಲಿ ಘಟಕ ಸಿಬಿಎಫ್‌ಸಿಗೆ ಲೀಗಲ್ ನೋಟಿಸ್ ಕಳುಹಿಸಿ, ರಣಾವತ್ ಅವರ ಚಲನಚಿತ್ರ “ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ” ಮತ್ತು “ತಪ್ಪು ಮಾಹಿತಿ ಹರಡಬಹುದು” ಎಂದು ಆರೋಪಿಸಿ ಬಿಡುಗಡೆಯನ್ನು ತಡೆಯುವಂತೆ ಕೋರಿತ್ತು.

ಇತ್ತ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಸದಸ್ಯರಿಗೆ ಬೆದರಿಕೆಗಳು ಬರುತ್ತಿವೆ ಎಂದು ಕಂಗನಾ ಹೇಳಿದ್ದರು.

ನಮ್ಮ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ನಿಜವಲ್ಲ. ವಾಸ್ತವವಾಗಿ, ನಮ್ಮ ಚಲನಚಿತ್ರವನ್ನು ಮೊದಲೇ ಬಿಡುಗಡೆಗೆ ಅನುಮತಿ ನೀಡಲಾಗಿತ್ತು ಆದರೆ ಹಲವಾರು ಬೆದರಿಕೆಗಳಿಂದಾಗಿ ಅದರ ಪ್ರಮಾಣೀಕರಣವನ್ನು ನಿಲ್ಲಿಸಲಾಗಿದೆ, ”ಎಂದು ಕಂಗನಾ ಹೇಳಿದ್ದರು.

ರಿಲೀಸ್‌ ಮುಂದೂಡಿಕೆ?:  ಸೆನ್ಸಾರ್‌ ಬೋರ್ಡ್‌ನಿಂದ ಇನ್ನೂ ಕೂಡ ಪ್ರಮಾಣಪತ್ರ ಸ್ವೀಕರಿಸದ ಕಾರಣ ಸೆ.6ರಂದು ಸಿನಿಮಾ ರಿಲೀಸ್‌ ಆಗೋದು ಅನುಮಾನವೆನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಕಂಗನಾ “ನನ್ನ ಸಿನಿಮಾದ ಮೇಲೆಯೇ ʼಎಮರ್ಜೆನ್ಸಿʼ ಬಿದ್ದಿದೆ. ಇದು ಅತ್ಯಂತ ನಿರಾಶದಾಯಕ ಸ್ಥಿತಿಯಾಗಿದೆ. ನನ್ನ ದೇಶದ ಬಗ್ಗೆ ನಾನು ತುಂಬಾ ನಿರಾಶಗೊಂಡಿದ್ದೇನೆ” ಎಂದು ಅವರು ಹೇಳಿದ್ದಾರೆ.

“ಇಂದು ನಾವು ಯಾರಿಂದಲೂ ಹೆದರಿದರೆ, ನಾಳೆಯ ದಿನ ಬೇರೆ ಅವರಿಂದಲೂ ಹೆದರಬೇಕಾದ ಪರಿಸ್ಥಿತಿ ಬರಬಹುದು. ಜನರು ನಮ್ಮನ್ನು ಹೆದರಿಸುತ್ತಲೇ ಇರುತ್ತಾರೆ ಏಕೆಂದರೆ ನಾವು ತುಂಬಾ ಸುಲಭವಾಗಿ ಹೆದರುತ್ತೇವೆ. ನಾವು ಎಷ್ಟು ಭಯಪಡುತ್ತೇವೆ? ನಾನು ಈ ಚಿತ್ರವನ್ನು ತುಂಬಾ ಸ್ವಾಭಿಮಾನದಿಂದ ಮಾಡಿದ್ದೇನೆ. ಅದಕ್ಕಾಗಿಯೇ ಸಿಬಿಎಫ್‌ಸಿ ಯಾವುದೇ ವಿವಾದವನ್ನು ಎತ್ತಿ ತೋರಿಸಲು ಸಾಧ್ಯವಿಲ್ಲ. ಚಿತ್ರದ ಕತ್ತರಿಸದ ಆವೃತ್ತಿಯನ್ನು ಬಿಡುಗಡೆ ಮಾಡಲು ನಾನು ನಿರ್ಧರಿಸಿದ್ದೇನೆ. ಅದಕ್ಕೂ ಅವಕಾಶ ನೀಡದೆ ಇದ್ದರೆ ನ್ಯಾಯಾಲಯದಲ್ಲಿ ಹೋರಾಡುತ್ತೇನೆ” ಎಂದು ಕಂಗನಾ ಹೇಳಿದ್ದಾರೆ.

ಅನುಪಮ್‌ ಖೇರ್‌, ಶ್ರೇಯಸ್‌ ತಲ್ಪಾಡೆ, ಮಿಲಿಂದ್ ಸೋಮನ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next