ಲಕ್ನೋ: ವಿಧಾನಸಭೆ ಚುನಾವಣೆ ಹತ್ತಿರು ಬರುತ್ತಿದ್ದಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ತನ್ನ ಯೋಜನೆಯ ಪ್ರಚಾರಕ್ಕಾಗಿ ಬಾಲಿವುಡ್ ನಟಿ ಕಂಗನಾ ರಣಾವುತ್ ರನ್ನು ರಾಯಭಾರಿಯನ್ನಾಗಿ ನೇಮಿಸಿದೆ.
ಯೋಗಿ ಸರ್ಕಾರದ ‘ಒಂದು ಜಿಲ್ಲೆ- ಒಂದು ಉತ್ಪನ್ನ’ ಯೋಜನೆಯ ಪ್ರಚಾರಕ್ಕಾಗಿ ಕಂಗನಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಂಗನಾ ರಣಾವುತ್ ಅವರು ಶುಕ್ರವಾರ ಭೇಟಿಯಾದರು.
ರಾಜ್ಯದ 75 ಜಿಲ್ಲೆಗಳಾದ್ಯಂತ ನಿರ್ದಿಷ್ಟ ಸಾಂಪ್ರದಾಯಿಕ ಕೈಗಾರಿಕಾ ಕೇಂದ್ರಗಳನ್ನು ರಚಿಸುವ ಉದ್ದೇಶದಿಂದ ಯುಪಿ ಸರ್ಕಾರವು ಒಂದು ಜಿಲ್ಲೆ-ಒಂದು ಉತ್ಪನ್ನ (ಒಡಿಒಪಿ) ಕಾರ್ಯಕ್ರಮವನ್ನು ಆರಂಭಿಸಿದೆ.
ಇದನ್ನೂ ಓದಿ:ಟಾಟಾಗೇ ಏರ್ ಇಂಡಿಯಾ? ನಷ್ಟದಲ್ಲಿರುವ ಸರಕಾರಿ ವಿಮಾನ ಸಂಸ್ಥೆ ಮಾರಾಟ ನಿರ್ಣಾಯಕ ಘಟ್ಟಕ್ಕೆ
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ( ಮಾಹಿತಿ) ನವನೀತ್ ಸೆಹಗಲ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಖ್ಯಾತ ನಟಿ ಕಂಗನಾ ರಣಾವುತ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದರು. ಮುಖ್ಯಮಂತ್ರಿಗಳು ಅವರಿಗೆ ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಯ ಉತ್ಪನ್ನವೊಂದನ್ನು ನೀಡಿದರು. ಕಂಗನಾ ರಣಾವುತ್ ಅವರು ಈ ಯೋಜನೆಗೆ ರಾಯಭಾರಿಯಾಗಲಿದ್ದಾರೆ ಎಂದಿದ್ದಾರೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಕೆಲಸಗಳನ್ನು ನಟಿ ಕಂಗನಾ ಹೊಗಳಿದರು. ಅಷ್ಟೇ ಅಲ್ಲದೆ ಆಯೋಧ್ಯೆ ರಾಮ ಜನ್ಮಭೂಮಿ ಮಂದಿರಕ್ಕೆ ಭೇಟಿ ನೀಡುವಂತೆ ಸಿಎಂ ಯೋಗಿ ಆದಿತ್ಯನಾಥ್, ಕಂಗನಾಗೆ ವಿನಂತಿಸಿದರು ಎಂದು ವರದಿಯಾಗಿದೆ.