Advertisement

ದೇಶದ್ರೋಹಿ, ಸಿಖ್ ವಿರೋಧಿ ಬರಹ: ನಟಿ ಕಂಗನಾ ವಿರುದ್ಧ ಪೊಲೀಸ್ ದೂರು

12:03 PM Nov 21, 2021 | Team Udayavani |

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ದೇಶದ್ರೋಹ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ನಟಿ ಕಂಗನಾ ರಣಾವತ್ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ಶನಿವಾರ ಪೊಲೀಸ್ ದೂರುಗಳನ್ನು ದಾಖಲಿಸಿದೆ.

Advertisement

ಐವೈಸಿಯ ರಾಷ್ಟ್ರೀಯ ಕಾರ್ಯದರ್ಶಿ ಅಮರೀಶ್ ರಂಜನ್ ಪಾಂಡೆ ಮತ್ತು ಸಂಘಟನೆಯ ಕಾನೂನು ಕೋಶದ ಸಹ-ಸಂಯೋಜಕ ಅಂಬುಜ್ ದೀಕ್ಷಿತ್ ಅವರು ಇಲ್ಲಿನ ಸಂಸತ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ನಟಿ ವಿರುದ್ಧ ದೂರು ದಾಖಲಿಸಿದ್ದಾರೆ.

ಏತನ್ಮಧ್ಯೆ, ಡಿಎಸ್‌ಜಿಎಂಸಿ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ನಟಿ ಕಂಗನಾ ಬಳಸಿದ ಪದಗಳಿಗೆ ಬಲವಾದ ವಿರೋಧ ವ್ಯಕ್ತಪಡಿಸಿ ಮತ್ತು ಪೊಲೀಸ್ ದೂರನ್ನು ಸಹ ದಾಖಲಿಸಿದ್ದು, ಹೇಳಿಕೆಗಳು “ಅಗೌರವ, ಅವಮಾನಕರ’ ಎಂದು ಕರೆದಿದೆ.

ದೂರಿನ ಪತ್ರವನ್ನು ಮುಂಬೈನ ಹೆಚ್ಚುವರಿ ಪೊಲೀಸ್ ಕಮಿಷನರ್ ಮತ್ತು ದೆಹಲಿಯ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿರುವ ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ನೀಡಲಾಗಿದೆ.

ಡಿಎಸ್‌ಜಿಎಂಸಿ ತನ್ನ ದೂರಿನಲ್ಲಿ,ಕಂಗನಾ ಅವರು ತನ್ನ ಪೋಸ್ಟ್ ಮೂಲಕ “ಉದ್ದೇಶಪೂರ್ವಕವಾಗಿ ರೈತರ ಪ್ರತಿಭಟನೆಯನ್ನು “ಖಾಲಿಸ್ಥಾನಿ ಚಳುವಳಿಗಳು” ಎಂದು ಬಿಂಬಿಸಿದ್ದಾರೆ ಎಂದು ಆರೋಪಿಸಿದೆ.

Advertisement

ಕಂಗನಾ ಅವರು ಸಿಖ್ ಸಮುದಾಯವನ್ನು “ಖಾಲಿಸ್ತಾನಿ ಭಯೋತ್ಪಾದಕರು” ಎಂದು ಕರೆದಿದ್ದಾರೆ ಮತ್ತು ಹತ್ಯಾಕಾಂಡವು 1984 ರಲ್ಲಿ ಮತ್ತು ಅದಕ್ಕೂ ಮೊದಲು ಲೆಕ್ಕಾಚಾರದಂತೆ ನಡೆದಿತ್ತು ಎಂದಿರುವುದನ್ನು ದೂರಿನಲ್ಲಿ ಖಂಡಿಸಲಾಗಿದೆ.

ನಟಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಅಧಿಕಾರಿಗಳಿಂದ “ಕಠಿಣ ಕಾನೂನು ಕ್ರಮ” ವನ್ನು ಡಿಎಸ್‌ಜಿಎಂಸಿ ಕೋರಿದೆ.

“ಸಿಖ್ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಕ್ರಿಮಿನಲ್ ಉದ್ದೇಶದಿಂದ ಪೋಸ್ಟ್ ಅನ್ನು ಉದ್ದೇಶಪೂರ್ವಕವಾಗಿ ಸಿದ್ಧಪಡಿಸಲಾಗಿದೆ ಮತ್ತು ಹಂಚಿಕೊಳ್ಳಲಾಗಿದೆ” ಎಂದು ಅದು ಆರೋಪಿಸಿದೆ.

ಡಿಎಸ್‌ಜಿಎಂಸಿ ಅಧ್ಯಕ್ಷ ಮತ್ತು ಶಿರೋಮಣಿ ಅಕಾಲಿ ದಳ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಸಿಖ್ಖರನ್ನು ಗುರಿಯಾಗಿಸಿಕೊಂಡು ಕಂಗನಾ ಅವಹೇಳನಕಾರಿ ಹೇಳಿಕೆ ನೀಡಿದ್ದು, ಸರ್ಕಾರವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

“ಅವಳನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಅಥವಾ ಜೈಲಿಗೆ ಹಾಕಬೇಕು. ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ದ್ವೇಷಪೂರಿತ ಬರಹಕ್ಕಾಗಿ ನಾವು ಸರ್ಕಾರದಿಂದ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ಸಿರ್ಸಾ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಭಾರತೀಯ ದಂಡ ಸಂಹಿತೆಯ ಐಪಿಸಿ ಸೆಕ್ಷನ್ 124ಎ (ದೇಶದ್ರೋಹ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ನಟಿಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೂರು ನೀಡಲಾಗಿದೆ.

ಕೇಂದ್ರವು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಬಳಿಕ, ರಣಾವತ್ ಅವರು ಭಾರತವನ್ನು “ಜಿಹಾದಿ ರಾಷ್ಟ್ರ” ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಗಳನ್ನು ಪೋಸ್ಟ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next