Advertisement

ಕಂಡ್ಲೂರು: ಮುಚ್ಚುವ ಭೀತಿಯ ಕನ್ನಡ ಶಾಲೆಯ ಅಭ್ಯುದಯ

12:40 AM Apr 13, 2019 | Sriram |

ವಿಶೇಷ ವರದಿ- ಬಸ್ರೂರು: ಒಂದು ಕಾಲದಲ್ಲಿ 500 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ ಈ ಕನ್ನಡ ಶಾಲೆಯಲ್ಲೀಗ ಇರುವುದು ಕೇವಲ 22 ಮಕ್ಕಳು, 4 ಶಿಕ್ಷಕರು! ಇದಕ್ಕಾಗಿ ಸರಕಾರಕ್ಕೆ ಹೊಳೆದ ಪರಿಹಾರ ಮುಚ್ಚುಗಡೆ! ಆದರೆ ಊರಮಂದಿಯ ಪ್ರಯತ್ನದ ಫ‌ಲವಾಗಿ ಶಾಲೆಗೆ 40 ಮಕ್ಕಳ ಸೇರ್ಪಡೆಗೆ ಈಗಾಗಲೇ ಪೋಷಕರ ಒಪ್ಪಿಗೆ ಆಗಿದೆ.

Advertisement

ಕಂಡ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ 134 ವರ್ಷಗಳ ಸುದೀರ್ಘ‌ ಶೈಕ್ಷಣಿಕ ಇತಿಹಾಸವಿದೆ. ಶಾಲೆಯಲ್ಲಿ ಯಾವುದೇ ಮೂಲಭೂತ ಸೌಕರ್ಯದ ಕೊರೆತೆಯಿಲ್ಲದ ಏಕೈಕ ಶಾಲೆ ಇದಾಗಿದೆ ಎನ್ನುವುದು ಗಮನಾರ್ಹ.

ವಿಲೀನ
ಬಹುತೇಕ ಸರಕಾರಿ ಶಾಲೆಗಳು ಮಕ್ಕಳ ಕೊರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕಂಡ್ಲೂರು ಕನ್ನಡ ಶಾಲೆಗೂ ಅದೇ ಸಮಸ್ಯೆ ಎದುರಾಗಿದೆ. ಈ ಮಧ್ಯೆ ಈ ಶಾಲೆಯನ್ನು ಬೇರೊಂದು ಸರಕಾರಿ ಶಾಲೆಯ ಜತೆ ವಿಲೀನಗೊಳಿಸಲಾಗುವುದು ಎಂಬ ಸುದ್ದಿಯೂ ಬಂದಾಗ ಈ ಶಾಲೆಯ ಉಳಿವಿಗಾಗಿ ಶಾಲಾ ಅಭ್ಯುದಯ ಸಮಿತಿ , ಶಾಲಾಭಿವೃದ್ಧಿ ಸಮಿತಿ ಮತ್ತಿತರ ಸಮಿತಿಗಳ ರಚನೆಯಾಗಿ ಶಾಲೆಯ ಸರ್ವತೋಮುಖ ಪ್ರಗತಿಗೆ ಸಜ್ಜಾಗಿವೆ.

ಸಮಿತಿ
ಶಾಲಾಭ್ಯುದಯ ಸಮಿತಿಯ ಅಧ್ಯಕ್ಷೆ ಯಾಗಿ ಕಾವ್ರಾಡಿ ಗ್ರಾ.ಪಂ. ಅಧ್ಯಕ್ಷೆಯಾದ ಗೌರಿ ಆರ್‌. ಶ್ರೀಯಾನ್‌ ಹಾಗೂ ಶಾಲಾ ಮೆಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ವಿಜಯ ಪೂಜಾರಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರ ಜತೆ ಊರವರ ಪರಿಶ್ರಮವೂ ಸೇರಿದೆ.

ಸಕಲ ವ್ಯವಸ್ಥೆ
ಈಗಾಗಲೇ ಶಾಲೆಯಲ್ಲಿ ಸುಸಜ್ಜಿತ ಶಾಲಾ ಕಟ್ಟಡ, ತರಗತಿ ಕೊಠಡಿಗಳು, ವಿಶಾಲವಾದ ಬಯಲು ರಂಗ ಮಂದಿರ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಅಡುಗೆ ಕೋಣೆ, ಆಟದ ಮೈದಾನ ಮತ್ತಿತರ ವ್ಯವಸ್ಥೆಗಳು ಈ ಶಾಲೆಯಲ್ಲಿವೆ.

Advertisement

ಶಾಲೆ ಮುಚ್ಚಲು ಬಿಡುವುದಿಲ್ಲ
ಶತಮಾನ ಕಳೆದ ಶಾಲೆಯ ಉಳಿವು ಅಗತ್ಯ. ಅದಕ್ಕಾಗಿ ಮನೆ ಮನೆ ಭೇಟಿ ಮಾಡಿ ದೇಣಿಗೆ ಸಂಗ್ರಹಿಸುವುದಷ್ಟೇ ಅಲ್ಲ ಶಾಲೆಗೆ ಮಕ್ಕಳನ್ನು ಸೇರಿಸಿ ಎಂಬ ಮನವಿ ಮಾಡುತ್ತಿದ್ದೇವೆ. ಇದಕ್ಕೆ ಫ‌ಲ ದೊರೆಯುತ್ತಿದೆ. ಶಾಲೆ ಮುಚ್ಚಲು ಬಿಡುವುದಿಲ್ಲ.
-ಗೌರಿ ಶ್ರೀಯಾನ್‌, ಶಾಲಾಭ್ಯುದಯ ಸಮಿತಿಯ ಅಧ್ಯಕ್ಷೆ

ಭೇಟಿ ನೀಡಿದ್ದೇನೆ
ಶಾಲೆಗೆ ಭೇಟಿ ನೀಡಿದ್ದು ಮುಂದಿನ ವರ್ಷ 6 ಹಾಗೂ 7ರಲ್ಲಿ ಒಬ್ಬೊಬ್ಬ ವಿದ್ಯಾರ್ಥಿ ಮಾತ್ರ ಇರುತ್ತಾರೆ. ಹಾಗಾಗಿ ಕಿರಿಯ ಪ್ರಾಥಮಿಕ ಮಾಡುವ ಕುರಿತು ಅಥವಾ ಸಮೀಪದ ಉರ್ದು ಶಾಲೆಗೆ ವಿಲೀನ ಮಾಡುವ ಪ್ರಸ್ತಾಪ ಇದೆ. ಹೊಸದಾಗಿ ಮಕ್ಕಳ ಸೇರ್ಪಡೆಯಾದರೆ ಮುಚ್ಚುವ ಸಂದರ್ಭ ಬರದು. ಊರವರಿಂದಲೂ ಮನವಿ ಬಂದಿದೆ.
– ಅಶೋಕ್‌ ಕಾಮತ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next