Advertisement

ಕನಸೆಂಬ ಕುದುರೆಯನೇರಿ

11:31 AM Mar 18, 2017 | |

ಅನಾಥ ಮಕ್ಕಳೇ ಆತನ ಪ್ರಪಂಚ. ಪ್ರಚಾರದ ಹುಚ್ಚಿಲ್ಲ. ಸೇವೆಯಲ್ಲೇ ಖುಷಿ ಕಾಣುವ ಸ್ವಭಾವ ಆತನದು. ಆತನ ವಯಸ್ಸಿನ ಹುಡುಗರು ಸ್ಟೈಲಿಶ್‌ ಲೈಫ್ ನಡೆಸುತ್ತಿದ್ದರೆ ಈತ ಮಾತ್ರ ಅನಾಥಾಶ್ರಮ ನಡೆಸುತ್ತಾ ಅದರಲ್ಲೇ ಖುಷಿ ಕಾಣುತ್ತಾನೆ. ಮುತ್ತುವಿನ ಈ ಕಾರ್ಯಕ್ಕೆ ಪ್ರೇರಣೆಯೇನು, ಅದರ ಉದ್ದೇಶವೇನು ಎಂಬ ತಿಳಿಯುವ ಕುತೂಹಲವಿದ್ದರೆ ನೀವು ಎರಡೂವರೆ ಗಂಟೆ ಸೀಟಿಗೆ ಅಂಟಿಕೊಂಡು ಕೂರಲೇಬೇಕು.

Advertisement

ಕನಸಿನ ದೀರ್ಘ‌ ಪಯಣದಲ್ಲಿ ನೀವು ಸಾಕಷ್ಟು ವಿಷಯಗಳನ್ನು ಬೇಕೋ ಬೇಡವೋ ಕಣ್ತುಂಬಿಕೊಳ್ಳಲೇಬೇಕು. ನಿರ್ದೇಶಕ ಮದನ್‌ ಅವರ ಸಿನಿಮಾ ಪ್ರೀತಿಯನ್ನು ಹಾಗೂ ಅವರು ಆಲೋಚಿಸಿದ ರೀತಿಯನ್ನು ಮೆಚ್ಚಲೇಬೇಕು. ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಯಾವ ವರ್ಗಕ್ಕೂ ಮೋಸ ಆಗಬಾರದು ಎಂಬ ಕಾರಣಕ್ಕೆ ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌, ಕಾಮಿಡಿ, ಕಲರ್‌ಫ‌ುಲ್‌ ಹಾಡು, ಫ್ಲ್ಯಾಶ್‌ಬ್ಯಾಕ್‌ ಸ್ಟೋರಿ … ಹೀಗೆ ಎಲ್ಲವನ್ನು ಕಟ್ಟಿಕೊಟ್ಟಿದ್ದಾರೆ.

ಹಾಗಾಗಿ, “ಸುಖ-ದುಃಖ’ದ ಸಮ್ಮಿಲನದಂತೆ ಈ ಸಿನಿಮಾ ಮೂಡಿಬಂದಿದೆ. ಎಲ್ಲವನ್ನು ಒಂದೇ ಸಿನಿಮಾದಲ್ಲಿ ನೀಡುವ ಪ್ರಯತ್ನವೇ ಸಿನಿಮಾದ ಮೈನಸ್‌ ಪಾಯಿಂಟ್‌ ಎಂದರೆ ನಿರ್ದೇಶಕರಿಗೆ ಬೇಸರವಾಗಬಹುದು. ಹಾಗೆ ನೋಡಿದರೆ ಚಿತ್ರದ ಒನ್‌ಲೈನ್‌ ಚೆನ್ನಾಗಿದೆ. ಅನಾಥ ಮಕ್ಕಳನ್ನು ಯಾವ ರೀತಿ ದಂಧೆಗೆ ಬಳಸುತ್ತಾರೆಂಬ ಲೈನ್‌ ಇಟ್ಟುಕೊಂಡು ಸಿನಿಮಾ ಆರಂಭಿಸಿದ ಮದನ್‌ ಇಂಟರ್‌ವಲ್‌ ನಂತರ ಅದನ್ನು ಮೊಟಕುಗೊಳಿಸಿ ಬೇರೆಯೇ ಲೋಕವನ್ನು ತೋರಿಸಿದ್ದಾರೆ.

ಹಾಗಾಗಿ, ಒಂದು ಟಿಕೆಟ್‌ನಲ್ಲಿ ಎರಡು ಸಿನಿಮಾ ನೋಡಿದ ಅನುಭವ ನಿಮಗೆ ಆಗುತ್ತದೆ. ಆದರೆ, ಆ ಲೈನ್‌ ಅನ್ನು ಮತ್ತಷ್ಟು ಬೆಳೆಸಿಕೊಂಡು ಹೋಗಿದ್ದರೆ “ಕನಸು’ ಕಲರ್‌ಫ‌ುಲ್‌ ಹಾಗೂ ಒಂದು ಸೀರಿಯಸ್‌ ವಿಷಯದ ಸಿನಿಮಾವಾಗುತ್ತಿತ್ತು. ಆದರೆ, ನಿರ್ದೇಶಕರಿಗೆ ಫ್ಯಾಮಿಲಿ ಅಟ್ಯಾಚ್‌ಮೆಂಟ್‌ ಜಾಸ್ತಿ. ಹಾಗಾಗಿ, ತುಂಬಿದ ಕುಟುಂಬದ ಸಂಭ್ರಮ, ಸಡಗರ, ನೋವು-ನಲಿವನ್ನು ಸ್ವಲ್ಪ ಜಾಸ್ತಿಯೇ ತೋರಿಸಿದ್ದಾರೆ. 

ನಾಯಕನ ಕಾಯಕದ ಹಿಂದಿನ ಉದ್ದೇಶವನ್ನು ಹೇಳುವುದಕ್ಕಾಗಿ ಫ್ಲ್ಯಾಶ್‌ಬ್ಯಾಕ್‌ ಮೊರೆ ಹೋದ ನಿರ್ದೇಶಕರು ಸಿನಿಮಾ ಮುಗಿಯಲು ಹತ್ತು ನಿಮಿಷವರೆಗೂ ಆ ಫ್ಲ್ಯಾಶ್‌ಬ್ಯಾಕ್‌ನಿಂದ ಹೊರಬಂದಿಲ್ಲ. ಹಾಗಾಗಿ, ಚಿತ್ರ ಆರಂಭವಾದಾಗ ನೋಡಿದ ನಾಯಕ ಕಾಯಕ ಮತ್ತೆ ನಿಮಗೆ ಸಿಗೋದೇ ಇಲ್ಲ. ಚಿತ್ರದ ಮೊದಲರ್ಧವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ನಿರೂಪಣೆ ವಿಷಯದಲ್ಲೂ ಇಲ್ಲಿ ನಿರ್ದೇಶಕರ ಕೆಲಸವನ್ನು ಮೆಚ್ಚಬಹುದು.

Advertisement

ಆದರೆ, ಇಂಟರ್‌ವಲ್‌ ನಂತರ ಮಾತ್ರ ಕೆಟ್ಟ ರಸ್ತೆಯಲ್ಲಿ ಸಾಗುವ ವಾಹನದಂತೆ ಇಡೀ ಸಿನಿಮಾ ನಿಧಾನಗತಿಯಲ್ಲೇ ಸಾಗುತ್ತದೆ. ಇಲ್ಲಿ ಸಾಕಷ್ಟು ಅನಾವಶ್ಯಕ ದೃಶ್ಯಗಳನ್ನು ತರಲಾಗಿದೆ. ನಿರ್ದೇಶಕರ ಕಾಮಿಡಿ ಪ್ರೀತಿಯನ್ನೇನೋ ಮೆಚ್ಚಬಹುದು. ಆದರೆ, ಆ ಪ್ರೀತಿ ಮಾತ್ರ ಇಲ್ಲಿ ಸ್ವಲ್ಪ ಅತಿಯಾದ ಕಾರಣ ತುಂಬಾ ಉದ್ದುದ ಕಾಮಿಡಿ ದೃಶ್ಯಗಳನ್ನು ಇಟ್ಟಿದ್ದಾರೆ. ಇವೆಲ್ಲದಕ್ಕೆ ಕತ್ತರಿ ಹಾಕಿದ್ದರೆ ಸಿನಿಮಾದ ಅವಧಿ ಕಡಿಮೆಯಾಗಿ, ಕಥೆಗೆ ಮತ್ತಷ್ಟು ಮಹತ್ವ ಬರುತ್ತಿತ್ತು.  

ಫ್ಯಾಮಿಲಿ ಡ್ರಾಮಾ ಇಷ್ಟಪಡುವವರಾದರೆ “ಎರಡು ಕನಸು’ ನೋಡಲಡ್ಡಿಯಿಲ್ಲ. ಜಾತ್ರೆ, ಕಲರ್‌ಫ‌ುಲ್‌ ಹಾಡು ಎಲ್ಲವನ್ನೂ ನೀವು ಕಣ್ತುಂಬಿಕೊಳ್ಳಬಹುದು.  ನಾಯಕ ವಿಜಯರಾಘವೇಂದ್ರ “ಕಸ್ತೂರಿ ನಿವಾಸ’ದ ಮುತ್ತುವಾಗಿ, ಕುಟುಂಬದ ಕಣ್ಮಣಿಯಾಗಿ ಇಷ್ಟವಾಗುತ್ತಾರೆ. ಈ ಬಾರಿ ಯಾವ ಆ್ಯಕ್ಷನ್‌ ಹೀರೋಗೂ ಕಮ್ಮಿ ಇಲ್ಲದಂತೆ ಫೈಟ್‌ ಮಾಡಿದ್ದಾರೆ. ನಾಯಕಿಯರಾದ ಕ್ರಿಷಿ ತಾಪಂಡ, ಕಾರುಣ್ಯ ರಾಮ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಕುರಿ ಪ್ರತಾಪ್‌, ಪೆಟ್ರೋಲ್‌ ಪ್ರಸನ್ನ ಸೇರಿದಂತೆ ಇತರ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. 

ಚಿತ್ರ: ಎರಡು ಕನಸು
ನಿರ್ಮಾಣ: ಅಶೋಕ್‌
ನಿರ್ದೇಶನ: ಮದನ್‌
ತಾರಾಗಣ: ವಿಜಯ ರಾಘವೇಂದ್ರ, ಕ್ರಿಷಿ ತಾಪಂಡ, ಕಾರುಣ್ಯ ರಾಮ್‌, ಪೆಟ್ರೋಲ್‌ ಪ್ರಸನ್ನ, ಕುರಿ ಪ್ರತಾಪ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next