ಕನಕಪುರ: ತಾಲೂಕಿನ ಬೇಲಿಕೊತ್ತನೂರು ಎಂಬಲ್ಲಿ ಆಹಾರ ಅರಸಿಕೊಂಡು ಬಂದಿರುವ ಚಿರತೆಯೊಂದು ಇಬ್ಬರ ಮೇಲೆ ದಾಳಿ ನಡೆಸಿರುವ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ.
ರಾತ್ರಿ 11 ಗಂಟೆಯ ವೇಳೆಗೆ ರೇಷ್ಮೆ ಸಕಾಣಿಕೆ ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಅಲ್ಲಿ ಕೆಲಸಕ್ಕೆಂದು ಬಂದಿದ್ದ ತಮ್ಮಯ್ಯ ಎನ್ನುವರರ ಮೇಲೆ ಎರಗಿ ಗಂಭೀರವಾಗಿ ಗಾಯಗೊಳಿಸಿದೆ. ತಮ್ಮಯ್ಯ ಚಿರತೆ ದಾಳಿ ಮಾಡುತ್ತಿದ್ದಂತೆ ಬೊಬ್ಬಿಟ್ಟಿದ್ದು ಸ್ಥಳಕ್ಕೆ ದೌಡಾಯಿಸಿದ ಮಾಲೀಕ ಜಗದೀಶ್ ಅವರು ತಮ್ಮಯ್ಯರನ್ನು ರಕ್ಷಿಸಿ , ಚಿರತೆಯನ್ನು ಕೂಡಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮಯ್ಯ ಅವರಿಗೆ ತಲೆ ಮತ್ತು ಕೈ ಕಾಲುಗಳಿಗೆ ಗಂಭೀರವಾದ ಗಾಯಗಳಾಗಿದ್ದು ಕನಕಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗ್ಗೆ ಚಿರತೆ ನೋಡಲೆಂದು ಬಂದಿದ್ದ ಬಾಲಕನೊಬ್ಬ ಕಿಟಕಿಯಲ್ಲಿ ನೋಡುತ್ತಿದ್ದಾಗ ಚಿರತೆ ತನ್ನ ಪಂಚಿನಿಂದ ಪರಚಿದ್ದು ಯುವಕನ ಕಿವಿ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು ಆತನನ್ನೂ ಕನಕಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಣ್ಯ ಇಲಾಖೆ ಸಿಬಂದಿಗಳು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿ, ಬನ್ನೇರುಘಟ್ಟದ ಪಶುವೈದ್ಯರ ನೆರವಿನಿಂದ ಅರಿವಳಿಕೆ ಚಚ್ಚು ಮದ್ದು ನೀಡುವ ಮೂಲಕ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
ಚಿರತೆಯನ್ನು ನೋಡಲೆಂದು ನೂರಾರು ಕುತೂಹಲಿಗಳು ಆಗಮಿಸಿದ್ದರು.