Advertisement

ಕನಕಪುರ: ವಿಧಾನಸಭೆ ರಣಕಣದಲ್ಲಿ ಡಿಕೆಶಿಗೆ ಎದುರಾಳಿ ಯಾರು?

12:23 AM Mar 14, 2023 | Team Udayavani |

ಕನಕಪುರ: ವಿಧಾನಸಭಾ ಚುನಾವಣಾ ರಣಕಣ ಹತ್ತಿರವಾಗುತ್ತಿದ್ದರೂ, ತಾಲೂಕಿನಲ್ಲಿ ಜೆಡಿಎಸ್‌ ಬಿಜೆಪಿ ಎರಡು ಪಕ್ಷಗಳಲ್ಲಿ ಅಭ್ಯರ್ಥಿ ಘೋಷಣೆಯಾಗದೇ ಇರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಎದುರಾಳಿ ಯಾರು ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿಸಿದೆ.

Advertisement

ಸದ್ಯದಲ್ಲೇ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮೂರು ಪಕ್ಷಗಳಲ್ಲಿ ಸಂಭಾವ್ಯ ಅಭ್ಯರ್ಥಿ ಮತ್ತು ಘೋಷಿತ ಅಭ್ಯರ್ಥಿಗಳು ಕ್ಷೇತ್ರ ಪರ್ಯಟನೆ ಮಾಡಿ ಚುನಾವಣೆಗೆ ತಯಾರಿ ನಡೆಸಿದ್ದಾರೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆದರೆ, ಚುನಾವಣಾ ಹತ್ತಿರವಾಗುತ್ತಿದ್ದರೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಎದುರಾಳಿ ಅಭ್ಯರ್ಥಿ ಘೋಷಣೆ ಮಾಡದೇ ಜೆಡಿಎಸ್‌ ಮತ್ತು ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎಂಬ ವ್ಯಾಖ್ಯಾನ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಭದ್ರಕೋಟೆಯಾಗಿರುವ ಕನಕಪುರ ತಾಲೂಕಿನಲ್ಲಿ ಈ ಹಿಂದೆ ಸಾತನೂರು ವಿಧಾನಸಭಾ ಕ್ಷೇತ್ರವಾಗಿತ್ತು. 1978ರಿಂದ 1985 ರವರೆಗೂ ಜನತಾ ಪಕ್ಷದಿಂದ ಶಿವಲಿಂಗೇಗೌಡರು, ದೇವೇಗೌಡರು, ಕೆ.ಜಿ.ಶ್ರೀನಿವಾಸ್‌ ಮೂರ್ತಿ ಶಾಸಕರಾಗಿ ಆಯ್ಕೆಯಾಗಿದ್ದರು. 1989ರಲ್ಲಿ ಜನತಾ ಪಕ್ಷದ ಯು.ಕೆ.ಸ್ವಾಮಿ ವಿರುದ್ಧ ಕಾಂಗ್ರೆಸ್‌ ಪಕ್ಷದಿಂದ ಡಿ.ಕೆ.ಶಿವಕುಮಾರ್‌ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ ಡಿಕೆಶಿ ಓಟ ನಿಲ್ಲಲ್ಲೇ ಇಲ್ಲ. 2008ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರ ಕನಕಪುರ ಕ್ಷೇತ್ರದೊಂದಿಗೆ ವೀಲಿನವಾದ ನಂತರವೂ ಕನಕಪುರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಪಿಜಿಆರ್‌ ಸಿಂಧ್ಯಾ ಅವರ ಓಟಕ್ಕೆ ಬ್ರೇಕ್‌ ಹಾಕಿದ್ದ ಡಿಕೆಶಿ, ಸತತವಾಗಿ ಏಳು 7 ಬಾರಿ ಶಾಸಕರಾಗಿ ಆಯ್ಕೆಯಾಗಿ ಕನಕಪುರ ಕ್ಷೇತ್ರವನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದಾರೆ.

ಪ್ರಬಲ ಎದುರಾಳಿಗಳೇ ಇಲ್ಲ: ಸಾತನೂರು ವಿಧಾನಸಭಾ ಕ್ಷೇತ್ರ 2008ರಲ್ಲಿ ವಿಲೀನವಾದ ನಂತರ ಡಿ.ಕೆ.ಶಿವಕುಮಾರ್‌ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧೆಗಿಳಿದ ಧೂಂತೂರು ವಿಶ್ವನಾಥ್‌ ಕೇವಲ 7 ಸಾವಿರ ಮತಗಳ ಅಂತರದಲ್ಲಿ ಸೋಲೊಪ್ಪಿಕೊಂಡರು. 2013ರಲ್ಲಿ ಡಿಕೆಶಿ ವಿರುದ್ಧ ಪಿಜಿಆರ್‌ ಸಿಂಧ್ಯಾ ಸೋತಿದ್ದರು. ಕಳೆದ ನಾಲ್ಕು ದಶಕಗಳಿಂದಲೂ ತಾಲೂಕಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ನೇರ ಸ್ಪರ್ಧೆ ನಡೆದಿದೆ. ಡಿಕೆಶಿಗೆ ಜೆಡಿಎಸ್‌ನಿಂದ ಪ್ರಬಲ ಸ್ಪರ್ಧಿಯಾಗಿದ್ದ ಧೂಂತೂರು ವಿಶ್ವನಾಥ್‌, ಪಕ್ಷದ ಆಂತರಿಕ ವಿಚಾರಗಳಿಗೆ ವರಿಷ್ಠರ ವಿರುದ್ಧ ಮುನಿಸಿಕೊಂಡ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಈ ಅವಕಾಶವನ್ನು ಬಳಸಿಕೊಂಡ ಡಿ.ಕೆ. ಶಿವಕುಮಾರ್‌ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಧೂಂತೂರು ವಿಶ್ವನಾಥ್‌ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡು ಕ್ಷೇತ್ರದಲ್ಲಿ ತನ್ನ ವಿರುದ್ಧ ಸ್ಪರ್ಧಿಸಲು ಪ್ರಬಲ ಎದುರಾಳಿಗಳೇ ಇಲ್ಲದಂತೆ ಮಾಡಿಕೊಂಡಿದ್ದಾರೆ.

ಡಿಕೆಶಿ ವಿರುದ್ಧ ಪ್ರಬಲ ಸ್ಪರ್ಧೆ ಅಸಾಧ್ಯ: ಜೆಡಿಎಸ್‌ನಿಂದ ಹಲವು ಆಕಾಂಕ್ಷಿಗಳಿದ್ದಾರೆ. ತಾಲೂಕು ಅಧ್ಯಕ್ಷ ಬಿ.ನಾಗರಾಜು, ನಲ್ಲಹಳ್ಳಿ ಶಿವಕುಮಾರ್‌ ಸೇರಿ ಹಲವು ಆಕಾಂಕ್ಷಿಗಳಿದ್ದಾರೆ. ನಲ್ಲಹಳ್ಳಿ ಶಿವಕುಮಾರ್‌ ಅವರ ತಂದೆ ಶಿವಣ್ಣೆಗೌಡರು, ದೇವೇಗೌಡರ ಒಡನಾಟದಲ್ಲಿದ್ದರು. ದೇವೇಗೌಡರ ಗೆಲುವಿಗೂ ಶ್ರಮಿಸಿದ್ದಾರೆ. ಪಕ್ಷಕ್ಕಾಗಿ ಹಲವಾರು ವರ್ಷ ದುಡಿದಿದ್ದಾರೆ. ಅವರ ನಂತರ ಅವರ ಮಗ ನಲ್ಲಹಳ್ಳಿ ಶಿವಕುಮಾರ್‌ ಪಕ್ಷಕ್ಕಾಗಿ ದುಡಿದಿದ್ದಾರೆ. ಜೆಡಿಎಸ್‌ನಲ್ಲಿರುವ ಕೆಲವು ಆಕಾಂಕ್ಷಿಗಳು ಡಿ.ಕೆ. ಶಿವಕುಮಾರ್‌ ಅವರೊಂದಿಗೆ ವಿಶ್ವಾಸದಿಂದ ಇದ್ದಾರೆ. ಅವರಿಗೆ ಟಿಕೆಟ್‌ ಕೊಟ್ಟರೆ ಡಿ.ಕೆ. ಶಿವಕುಮಾರ್‌ ವಿರುದ್ಧ ಪ್ರಬಲ ಸ್ಪರ್ಧೆ ಅಸಾಧ್ಯ. ಹಾಗಾಗಿ ನಲಹಳ್ಳಿ ಶಿವಕುಮಾರ್‌ ಅವರಿಗೆ ಟಿಕೆಟ್‌ ಕೊಡಬೇಕು, ಇಲ್ಲದಿದ್ದರೆ ಅನಿತಾ ಕುಮಾರಸ್ವಾಮಿ ಅವರನ್ನು ತಾಲೂಕಿನಲ್ಲಿ ಕಣಕ್ಕಿಳಿಸಬೇಕು ಎಂಬುದು ಜೆಡಿಎಸ್‌ ಕೆಲವು ಮುಖಂಡರ ಒತ್ತಾಯವಾಗಿದೆ.

Advertisement

ಸಂಘಟನೆಯಲ್ಲಿ ಬಿಜೆಪಿ ಹಿಂದೆ ಬಿದ್ದಿಲ್ಲ
ತಾಲೂಕಿನಲ್ಲಿ ಬಿಜೆಪಿಯಲ್ಲಿ ಬಣಗಳು ಇದ್ದರೂ, ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದಿಲ್ಲ. ಬೂತ್‌ ಅಭಿಯಾನ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಗಳ ಮೂಲಕ ಸಕ್ರಿಯವಾಗಿ ಪಕ್ಷ ಸಂಘಟನೆ ಮಾಡಿ ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಬಲ ಪಡಿಸಿದ್ದಾರೆ. ಬಿಜೆಪಿಯಿಂದ ಕಳೆದ ಬಾರಿ ನಂದಿನಿ ಗೌಡ ಸ್ಪರ್ಧಿಸಿದ್ದರು. ಈ ಬಾರಿ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ನಂದಿನಿ ಗೌಡ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೊನ್ನಿಗನಹಳ್ಳಿ ಜಗನ್ನಾಥ್‌, ಸೀಗೆಕೋಟೆ ರವಿಕುಮಾರ್‌ ಸಹ ಆಕಾಂಕ್ಷಿಗಳಾಗಿದ್ದಾರೆ. ನಮಗೆ ಟಿಕೆಟ್‌ ಕೊಡಬೇಕೆಂದು ತಮ್ಮ ನಾಯಕರ ಮೂಲಕ ಒತ್ತಡ ತರುತ್ತಿದ್ದಾರೆ. ಮೂರು ಪಕ್ಷಗಳ ಮಧ್ಯ ನಾವ್ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಬಿಎಸ್‌ಪಿ ಸಹ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿದೆ. ಇದರ ಜೊತೆಗೆ ಧಮ್ಮ ದೀವಿಗೆ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಪಕ್ಷೇತರರಾಗಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ.

-ಬಿ.ಟಿ.ಉಮೇಶ್‌, ಬಾಣಗಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next