Advertisement

ಬರಗಾಲಕ್ಕೆ  ಕನಕಗಿರಿ ಜನತೆ ತತ್ತರ

10:03 AM Feb 21, 2019 | |

ಕನಕಗಿರಿ: ಕನಕಗಿರಿ ತಾಲೂಕನ್ನು ಈಗಾಗಲೇ ಸರ್ಕಾರ ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಣೆ ಮಾಡಿದೆ. ಉತ್ತಮ ಮಳೆ ಆಗದ ಕಾರಣ ಸಾಲ ಮಾಡಿ ಬಿತ್ತಿದ್ದ ಬೆಳೆ ರೈತರ ಕೈ ಸೇರಲಿಲ್ಲ. ಇನ್ನು ಸ್ಥಳೀಯವಾಗಿ ಉದ್ಯೋಗವಿಲ್ಲದೇ ಕೆಲವರು ಕುಟುಂಬ ಸಹಿತ ಗುಳೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಉದ್ಯೋಗ ನೀಡಲು ಅವಕಾಶವಿದ್ದರೂ ಕನಕಗಿರಿ ತಾಲೂಕು ವ್ಯಾಪ್ತಿಯ ಯಾವ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಪ್ರಾರಂಭವಾಗಿಲ್ಲ. ಗ್ರಾಪಂ ವತಿಯಿಂದ ಉದ್ಯೋಗ ನೀಡಿ ಗುಳೆ ಹೋಗುವುದನ್ನು ತಡೆಗಟ್ಟುವಂತೆ ಶಾಸಕ ಬಸವರಾಜ ದಢೇಸೂಗೂರು ಅಧಿಕಾರಿಗಳಿಗೆ ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

Advertisement

ಬೆಳೆ ಪರಿಹಾರವಿಲ್ಲ: ತಾಲೂಕಿನ ವ್ಯಾಪ್ತಿಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿ ನಷ್ಟ ಅನುಭವಿಸಿರುವ ರೈತರಿಗೆ ಇದುವರೆಗೂ ಬೆಳೆ ಪರಿಹಾರ ನೀಡಿಲ್ಲ. ಬೆಳೆ ನಷ್ಟವಾಗಿರುವ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಕಳಿಸಿದ್ದಾರೆ. ಆದರೆ ರೈತರು ಬೆಳೆ ಪರಿಹಾರಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಸ್ಥಗಿತಗೊಂಡ ಶುದ್ಧ ನೀರಿನ ಘಟಕ: ಸರ್ಕಾರ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಪ್ರತಿ ವರ್ಷ ಸಾವಿರಾರು ಕೋಟಿ ವೆಚ್ಚ ಮಾಡುತ್ತಿದೆ. ಆದರೆ ತಾಲೂಕಿನ ಜೀರಾಳ, ಇಂಗಳದಾಳ, ಉದ್ದಿಹಾಳ, ಸಂಕನಾಳ, ಇಚನಾಳ, ಮುಸಲಾಪುರ ಸೇರಿದಂತೆ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿವೆ. ಇನ್ನು ಹುಲಿಹೈದರ್‌ ಮತ್ತು ಹೇರೂರು ಜಿಪಂ ವ್ಯಾಪ್ತಿಯಲ್ಲಿ 22 ಹಳ್ಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕೈಗೊಂಡ ರಾಜೀವ ಗಾಂಧಿ  ಯೋಜನೆ ಪೂರ್ಣಗೊಂಡಿಲ್ಲ. ಇದರಿಂದ ಹಲವಾರು ಹಳ್ಳಿಗಳ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಿಲ್ಲಾಡಳಿತದಿಂದ ಗೋಶಾಲೆ ಪ್ರಾರಂಭಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ ಜಾನುವಾರುಗಳು ಬಿಸಿಲಿನಲ್ಲಿ ನಿಲ್ಲುವಂತಾಗಿದೆ. ಹುಲಿಹೈದರ್‌, ನವಲಿ, ಮುಸಲಾಪುರ ಭಾಗದಲ್ಲಿ ಗೋಶಾಲೆ ಪ್ರಾರಂಭಿಸುವಂತೆ ಸಂಘ-ಸಂಸ್ಥೆಗಳು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಪಟ್ಟಣಕ್ಕೆ ಮಾತ್ರ ಗೋಶಾಲೆ ಸೀಮಿತವಾಗಿದೆ.

ಅಭಿವೃದ್ಧಿ ಕುಂಠಿತ: ನೂತನ ಕನಕಗಿರಿ ತಾಲೂಕಿಗೆ ನೇಮಕವಾಗಿದ್ದ ತಹಶೀಲ್ದಾರ್‌ ರವಿ ಅಂಗಡಿ ಮತ್ತು ಸಂತೋಷ ರಾಣಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ತಾಲೂಕಿನ ಆಡಳಿತವನ್ನು ಗಂಗಾವತಿ ತಹಶೀಲ್ದಾರ್‌ ಅವರಿಗೆ ಪ್ರಭಾರಿಯಾಗಿ ನೀಡಲಾಗಿದೆ. ಕುಡಿಯುವ ನೀರಿಗಾಗಿ ಕನಕಗಿರಿ ತಾಲೂಕಿಗೆ 30 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಬರದಿಂದ ತತ್ತರಿಸುತ್ತಿರುವ ಕನಕಗಿರಿ ತಾಲೂಕಿನಲ್ಲಿ ಬರವನ್ನು ನಿರ್ವಹಣೆ ಮಾಡುವವರೇ ಇಲ್ಲದಂತಾಗಿದೆ. ಒಟ್ಟಾರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಜನತೆ ಬರದ ಕ್ಷಾಮದಿಂದ ಬಳಲುವಂತಾಗಿದೆ.

Advertisement

ಕನಕಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ಗುಳೆ ಹೋಗುವುದನ್ನು ತಡೆಗಟ್ಟುವಂತೆ ತಾಪಂ ಮತ್ತು ಜಿಪಂ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಕನಕಗಿರಿಯಲ್ಲಿ ಗೋಶಾಲೆ ಪ್ರಾರಂಭಿಸಲಾಗಿದೆ. ಇನ್ನು ಹುಲಿಹೈದರ್‌, ನವಲಿ ಭಾಗದಲ್ಲಿ ಗೋ ಶಾಲೆಗಳನ್ನು ಪ್ರಾರಂಭಿಸುವಂತೆ ಸಂಬಂಧಪಟ್ಟ ಸಚಿವರಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ.
. ಬಸವರಾಜ ದಢೇಸೂಗೂರು, ಶಾಸಕ

ವರ್ಷದಲ್ಲಿ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುವ ಇಬ್ಬರು ತಹಶೀಲ್ದಾರ್‌ಅನ್ನು ಸರ್ಕಾರ ವರ್ಗಾವಣೆ ಮಾಡಿದೆ. ಸದ್ಯ ಗಂಗಾವತಿ ತಹಶೀಲ್ದಾರಿಗೆ ಪ್ರಭಾರಿ ವಹಿಸಲಾಗಿದೆ. ಇದರಿಂದ ಬರ ನಿರ್ವಹಣೆ ಹೇಗೆ ಸಾಧ್ಯ. ಕೂಡಲೇ ಡಿಸಿ ತಾಲೂಕಿಗೆ ತಹಶೀಲ್ದಾರರನ್ನು ನೇಮಿಸಬೇಕು.
. ಹರೀಶ ಪೂಜಾರ
ಕರವೇ ನಗರ ಘಟಕದ ಅಧ್ಯಕ್ಷ

ಶರಣಪ್ಪ ಗೋಡಿನಾಳ

Advertisement

Udayavani is now on Telegram. Click here to join our channel and stay updated with the latest news.

Next