ಹಾವೇರಿ: ದಾಸಶ್ರೇಷ್ಠ ಕನಕದಾಸರ ಕರ್ಮಭೂಮಿ ಕಾಗಿನೆಲೆಯನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿಸುವತ್ತ ಹೆಜ್ಜೆ ಇಟ್ಟಿರುವ ಕಾಗಿನೆಲೆ
ಅಭಿವೃದ್ಧಿ ಪ್ರಾಧಿಕಾರ, ಈಗ ಕಾಗಿನೆಲೆಯನ್ನು ಇನ್ನಷ್ಟು ಆಕರ್ಷಿತಗೊಳಿಸಲು “ಕನಕ’ ಪರಿಸರ ಸ್ನೇಹಿ ಉದ್ಯಾನವನದಲ್ಲಿ ಶಂಖನಾದ ಮೊಳಗಿಸುತ್ತಿರುವ 30 ಅಡಿ ಎತ್ತರ, 35 ಅಡಿ ಸುತ್ತಳತೆ ಹೊಂದಿರುವ ಬೃಹತ್ ಕನಕಮೂರ್ತಿ ಪ್ರತಿಷ್ಠಾಪಿಸಿದೆ.
ಕನಕರ ಕಲಾಕೃತಿ ಸಿಮೆಂಟ್‌ನಿಂದ ರಚಿಸಲಾಗಿದೆ. ಕನಕರ ಭುಜದ ಮೇಲ್ಭಾಗದ ಆಕೃತಿ ಮಾತ್ರ ಹೊಂದಿರುವ ಈ ಮೂರ್ತಿ ಕನಕರು ಭೂಮಿ ಯೊಳಗಿಂದ ಮೇಲೆದ್ದು ಗಗನಮುಖೀಯಾಗಿ ಶಂಖನಾದ ಮೊಳಗಿಸುತ್ತಿ ರುವಂತೆ ಭಾಸವಾಗುವಂತಿದೆ. ಕನಕರ ಕೈಯಲ್ಲಿ ಹಿಡಿದಿರುವ ಬೃಹತ್ ಶಂಖದಿಂದ ನೀರು ಸುರಿಯುವಂತೆ ಮಾಡಲಾಗಿದ್ದು, ನೋಡುಗರ ಮನ ಸೆಳೆಯುತ್ತಿದೆ. ಕಾಗಿನೆಲೆ ಅಭಿವೃದಿಟಛಿ ಪ್ರಾಧಿಕಾರ ಐದಾರು ವರ್ಷಗಳ ಹಿಂದೆಯೇ ಕಾಗಿನೆಲೆಯಲ್ಲಿ ವಿಶಾಲವಾದ ಅಂದರೆ 40 ಎಕರೆ ವಿಸ್ತೀರ್ಣದಲ್ಲಿ ಸುಮಾರು ಐದು ಕೋಟಿ ರೂ.ವೆಚ್ಚದಲ್ಲಿ “ಕನಕ’ ಪರಿಸರ ಉದ್ಯಾನವನ
ನಿರ್ಮಿಸಿದ್ದು ಹಂತ-ಹಂತವಾಗಿ ಉದ್ಯಾನವನ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡುತ್ತಿದೆ.
ಉದ್ಯಾನದಲ್ಲಿ ಬೃಹತ್ ದ್ವಾರಬಾಗಿಲು, ಮಕ್ಕಳ ಉದ್ಯಾನ, ನಕ್ಷತ್ರ ಗಾರ್ಡ್‌ನ್ (ರಾಶಿಗಳ ಪ್ರಕಾರ ಸಸಿ ನೆಟ್ಟಿರುವುದು), ಪ್ರವಾಸಿಗರು ಕುಳಿತುಕೊಳ್ಳಲು ಎರಡು ಗುಡಿಸಲಿನ ಮನೆಗಳು, ವೀಕ್ಷಣಾ ಗೋಪುರ, ಹೊಂಗೆ, ನೇರಳೆ, ಅರಳಿ, ಸಬೂಬಿಯಾ, ರೇನ್‌ಟ್ರೀ, ಟೀಕ್ ಸೇರಿ ವಿವಿಧ ನಮೂನೆಯ ಶೋ ಸಸಿಗಳನ್ನು ನೆಟ್ಟು ಪ್ರವಾಸಿಗರನ್ನು ಸೆಳೆಯುವ ಯತ್ನ ಮಾಡಲಾಗಿದೆ.
ಶಿಲ್ಪವನ, ಕಾರಂಜಿ: ಈ ಸುಂದರ ಉದ್ಯಾನದಲ್ಲಿ ಕನಕದಾಸರು ಬಾಳೆ ಎಲೆಯಲ್ಲಿ ನದಿ ದಾಟಿದ್ದು, ಬಿಳಿಗಿರಿರಂಗನ ಬೆಟ್ಟದಲ್ಲಿ ಆನೆ ಕನಕರಿಗೆ ಶರಣಾಗತಿಯಾಗಿದ್ದು, ನಳಚರಿತ್ರೆಯಲ್ಲಿ ಬರುವ ನಳ ದಮ ಯಂತಿಗೆ ಹಂಸದ ಮೂಲಕ ಪ್ರೇಮಪತ್ರ ಕಳುಹಿಸಿದ್ದು ಹೀಗೆ ದಾಸಶ್ರೇಷ್ಠ ಕನಕದಾಸರ ಬದುಕು, ಬರಹ ಹಾಗೂ ಜೀವನದ ಪ್ರಮುಖ ಘಟನಾವಳಿಗಳನ್ನು ಶಿಲ್ಪ (ಸಿಮೆಂಟ್ ಶಿಲ್ಪ)ಗಳಲ್ಲಿ ತಯಾರಿಸಿ ಪ್ರತಿಷ್ಠಾಪಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದೇ ಉದ್ಯಾನದಲ್ಲಿ ಮೈಸೂರಿನ ಕೆಆರ್‌ಎಸ್ ಬೃಂದಾವನ ಮಾದರಿಯ ಸಂಗೀತ ಕಾರಂಜಿ ಸಹ ನಿರ್ಮಿಸಲಾಗಿದೆ. 3.5 ಕೋಟಿ ರೂ.ಗಳಲ್ಲಿ ನಿರ್ಮಿಸಿರುವ ಈ ಕಾರಂಜಿ ಬಣ್ಣ-ಬಣ್ಣದ ಬೆಳಕಿನಲ್ಲಿ ವಿವಿಧ ಸಂಗೀತ, ಹಾಡುಗಳಿಗೆ ತಕ್ಕಂತೆ ನೀರು ಚಿಮ್ಮುವ ಮೂಲಕ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಒಟ್ಟಾರೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಕಾಗಿನೆಲೆಗೆ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲು ನಿರಂತರ ಪ್ರಯತ್ನ ಮುಂದುವರಿಸಿದ್ದು, ಉದ್ಯಾನದ ಆಕರ್ಷಣೆ ಹೆಚ್ಚಿಸುವ ಸಾಲಿಗೆ ಈಗ ಶಂಖನಾದ ಮೊಳಗಿಸುವ ಬೃಹತ್ ಕನಕ ಮೂರ್ತಿ ಸೇರ್ಪಡೆಯಾಗಿದೆ.
ಕಾಗಿನೆಲೆ ತಾಣವನ್ನು ಇನ್ನಷ್ಟು ಆಕರ್ಷಣೀಯಗೊಳಿಸಲು ಶಂಖನಾದ ಮೊಳಗಿಸುವ ಮಾದರಿಯ ಬೃಹತ್ ಕನಕರ ಸಿಮೆಂಟ್ ಕಲಾಕೃತಿಯನ್ನು 30 ಲಕ್ಷ ರೂ. ಗಳಲ್ಲಿ ರಾಕ್ ಗಾರ್ಡನ್‌ನ ಕಲಾವಿದರು ಸುಂದರವಾಗಿ ನಿರ್ಮಿಸಿದ್ದಾರೆ. ಈ ಕಲಾಕೃತಿಯಿಂದ ತಾಣದ ಮೆರಗು ಇನ್ನಷ್ಟು ಹೆಚ್ಚಾಗಿದೆ. ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
● ಮಲ್ಲೇಶಪ್ಪ ಹೊರಪೇಟೆ, ಆಯುಕ್ತರು, ಕಾಗಿನೆಲೆ ಅಭಿವೃದಿಟಛಿ ಪ್ರಾಧಿಕಾರ
● ಎಚ್.ಕೆ. ನಟರಾಜ