ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ರಾಜ್ಯದಲ್ಲೇ ಅತೀ ಹೆಚ್ಚು 81,826 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ ಅಖಂಡ ಶ್ರೀನಿವಾಸಮೂರ್ತಿಗೆ ಡಿಜೆ ಹಳ್ಳಿ ಗಲಭೆ ಪ್ರಕರಣದಿಂದಾಗಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದೆ. ಹೀಗಾಗಿ ಬಿಎಸ್‌ಪಿ ಸೇರ್ಪಡೆಯಾಗಿ ಅಖಾಡಕ್ಕಿಳಿದಿದ್ದಾರೆ.
Advertisement
ದೇವನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧೆಗೆ ವರ್ಷದಿಂದ ತಯಾರಿ ನಡೆಸಿದ್ದ ಎ.ಸಿ.ಶ್ರೀನಿವಾಸ್ ಇಲ್ಲಿ ಕಾಂಗ್ರೆಸ್‌ನ ಅಚಾನಕ್ ಅಭ್ಯರ್ಥಿಯಾಗಿದ್ದಾರೆ. ಇದು ಇವರಿಗೆ ಬಯಸದೇ ಬಂದ “ಭಾಗ್ಯ’ದಂತಾಗಿದೆ. ಇಬ್ಬರೂ ಇದೀಗ ಗೆಲುವಿಗಾಗಿ ಪ್ರಬಲ ಹೋರಾಟ ನಡೆಸಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿಗೆ ಪ್ರತಿಷ್ಠೆ, ಎ.ಸಿ.ಶ್ರೀನಿವಾಸ್‌ಗೂ ಗೆಲ್ಲುವ ಛಲ.ಅಖಂಡ ಶ್ರೀನಿವಾಸಮೂರ್ತಿ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಹಾಗೂ ಮತದಾರರ ಸಮೂಹ ಹೊಂದಿದ್ದು, ಎರಡು ಬಾರಿಯ ಅಭಿವೃದ್ಧಿ ಕಾರ್ಯಗಳು ತಮ್ಮ ಕೈ ಹಿಡಿಯುವ ವಿಶ್ವಾಸದಲ್ಲಿದ್ದಾರೆ. ಮೇಲ್ನೋಟಕ್ಕೆ ನೇರ ಪೈಪೋಟಿಯಿದೆ. ಆದರೂ ಇಲ್ಲಿನ ಮತದಾರರು ಈ ಬಾರಿ “ಗುಪ್ತಗಾಮಿನಿ’ಯಂತಾಗಿದ್ದು ಅವರ ನಡೆ ಕುತೂಹಲ ಮೂಡಿಸಿದೆ.
ಜೆಡಿಎಸ್‌ನಿಂದ ಅನುರಾಧಾ, ಬಿಜೆಪಿಯಿಂದ ಮುರುಳಿ, ಆಮ್ ಆದ್ಮಿ ಪಾರ್ಟಿಯಿಂದ ಸುರೇಶ್ ರಾಥೋಡ್, ಎಸ್‌ಡಿಪಿಐನಿಂದ ಭಾಸ್ಕರ್ ಪ್ರಸಾದ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದು “ಬಂಡಾಯ”ದ ಲಾಭದ ನಿರೀಕ್ಷೆಯಲ್ಲಿದ್ದಾರೆ.
Related Articles
Advertisement
ತಿರುಗಿಬಿದ್ದ ಪಾಲಿಕೆ ಸದಸ್ಯರುಒಂದು ಕಾಲದಲ್ಲಿ ಪ್ರಸನ್ನಕುಮಾರ್‌ಗೆ ತಿರುಗಿಬಿದ್ದಿದ್ದ ಪಾಲಿಕೆ ಸದಸ್ಯರೇ ಇದೀಗ ಮಾಜಿಗಳಾಗಿ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ತಿರುಗಿಬಿದ್ದಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿಗೆ ಶತಾಯಗತಾಯ ಟಿಕೆಟ್ ತಪ್ಪಿಸಲು ಹೋರಾಟ ಮಾಡಿ ಯಶಸ್ವಿಯೂ ಆಗಿದ್ದಾರೆ.ಅಖಂಡ ಶ್ರೀನಿವಾಸಮೂರ್ತಿ ಗಾಡ್ ಫಾದರ್ ಆಗಿದ್ದ ಮಾಜಿ ಸಚಿವ ಜಮೀರ್ ಅಹಮದ್ ಅವರು ನಾನು ಪಕ್ಷದ ಅಧಿಕೃತ ಅಭ್ಯರ್ಥಿ ಪರ ಎಂದು ಹೇಳಿದ್ದಾರೆ. ಡಿಜೆ ಹಳ್ಳಿ ಗಲಭೆ ಇಡೀ ಕ್ಷೇತ್ರದ ರಾಜಕೀಯ ಚಿತ್ರಣ ಬದಲಿಸಿರುವುದಂತೂ ನಿಜ. ಒಟ್ಟಾರೆ, ಕ್ಷೇತ್ರದಲ್ಲಿ ಜಿದ್ದಾಜಿದ್ದು ಏರ್ಪಟ್ಟಿದ್ದು, ಮತದಾರ ಯಾರ ಪರ ಒಲವು ತೋರುತ್ತಾನೆ ಕಾದು ನೋಡಬೇಕಾಗಿದೆ. ~ ಎಸ್.ಲಕ್ಷ್ಮೀನಾರಾಯಣ