ಕಂಪ್ಲಿ: ನೆನೆದವರ ಮನದಲ್ಲಿ ನೆಲೆಸುವ ,ಇಷ್ಟಾರ್ಥ ನೆರವೇರಿಸುವ ರಾಯರು ಎಲ್ಲೆಲ್ಲಿಯೂ ನೆಲೆಸಿದ್ದು, ಎಲ್ಲಾ ರೋಗಗಳನ್ನು ಕಳೆಯುವ ಬೃಹತ್ ಶಕ್ತಿ ಮೂಲಮೃತ್ತಿಕಾ ಬೃಂದಾನವಕ್ಕಿದೆ ಎಂದು ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದ ದಿಗ್ವಿಜಯ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.
ಪಟ್ಟಣದ ಸತ್ಯನಾರಾಯಣ ಪೇಟೆ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಿದ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಗುರುವಾರ ಶ್ರೀ ಮುಖ್ಯ ಪ್ರಾಣದೇವರ ಹಾಗೂ ಶ್ರೀ ರಾಘವೇಮದ್ರಸ್ವಾಮಿಗಳವರ ಮೂಲ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪಿಸಿ, ಬಿಂಬವಾಹನ ತತ್ವನ್ಯಾಸ, ಮಾತೃಕಾನ್ಯಾಸ, ಪೂರ್ವಕ ಪ್ರತಿಷ್ಠಾ ಅಷ್ಟಬಂಧನ ಹಾಗೂ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮತ್ತು ಮಹಾಮಂಗಳಾರತಿ ನೆರವೇರಿಸಿ ಅನುಗ್ರಹ ಸಂದೇಶ ನೀಡಿ ಆರ್ಶೀವಚನ ನೀಡಿದರು.
ಭಕ್ತಿಯಿಂದ ಕರೆದರೆ ರಾಯರು ಭಕ್ತರ ಇಷ್ಟಾರ್ಥವನ್ನು ನೆರವೇರಿಸು ತ್ತಾರೆ. ಜಗತ್ತಿನ ನಮ್ಮ ನಿಮ್ಮೆಲ್ಲರ ಉಸಿರಾಗಿರುವ ರಾಯರು ಕಲಿಯುಗದ ಕಾಮಧೇನು, ಕಲ್ಪವೃಕ್ಷವಾಗಿರುವ ರಾಘವೇಂದ್ರ ಸ್ವಾಮಿಗಳು ದೈವಿಕವಾಗಿ ಅನುಗ್ರಹ ನೀಡುತ್ತಾರೆ ಎಂದರು.
ವಿದ್ಯಾರ್ಥಿಗಳಿಗೆ ವಿದ್ಯೆ, ಮಕ್ಕಳಾಗದವರಿಗೆ ಸಂತಾನ ಭಾಗ್ಯ ನೀಡುವ ಮೂಲಕ ಇಂದಿಗೂ ಜೀವಂತ ಇರುವ ರಾಯರು, ಭೂತ, ಪ್ರೇತಾ, ಪಿಶಾಚ ಬಾಧೆಗಳನ್ನು ಪರಿಹರಿಸುವ ರಾಯರು ಬೇಡಿದವರಿಗೆ ಅನುಗ್ರಹ ನೀಡುತ್ತಾರೆ. ಭಕ್ತರ ಪರಿಶ್ರಮದಿಂದ ಎಲ್ಲ ಶಾಸಕರು,ರಾಜಕಾರಣಿಗಳು, ರೈತರು, ವ್ಯಾಪಾರಸ್ಥರು ಎಲ್ಲರೂ ಕೈಜೋಡಿಸಿ ಸುಸಜ್ಜಿತ ಮಠವನ್ನು ನಿರ್ಮಿಸಿದ್ದೀರಿ. ನಿಮಗೆಲ್ಲರಿಗೂ ಅನುಗ್ರಹ ನೀಡುತ್ತಾರೆ ಎಂದು ಹೇಳಿದರು.
ಗುಣವಂತ ಭಕ್ತರಿರುವ ನಮಗೆ ಹಣದ ಅವಶ್ಯಕತೆ ಇಲ್ಲ. ನೂತನ ಮಠವನ್ನು ಹಣದಾಸೆಗಾಗಿ ಮಾಡಿಲ್ಲ, ಭಕ್ತರಿಗಾಗಿ ಮಾಡಿದ್ದೇವೆ. ಆ ಮಠ, ಈ ಮಠ ಎನ್ನುವ ಭೇದ ಇಟ್ಟುಕೊಳ್ಳಬೇಡಿ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಲ್ಲರೂ ಸಹಕರಿಸಿದ್ದಾರೆ. ಎಲ್ಲರಿಗೂ ರಾಯರ ಅನುಗ್ರಹವಿದ್ದು, ನೂತನ ಮಠವು ಭಕ್ತರ ಶ್ರದ್ಧಾಕೇಂದ್ರವಾಗಿ ಬೆಳಗಲಿ ಎಂದರು.
ಪಟ್ಟಣದ ವರ್ತಕರು ಹಾಗೂ ಶ್ರೀಮಠದ ಭಕ್ತರಾದ ಟಿ. ಕೊಟ್ರೇಶ್ ಶ್ರೇಷ್ಠಿಯವರನ್ನು ನೂತನ ಮಠದ ಗೌರವ ವಿಚಾರಣಾ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ ಎಂದು ಶ್ರೀಪಾದಂಗಳವರು ಘೋಷಿಸಿದರು.
ಇದಕ್ಕೂ ಮೊದಲು ಶ್ರೀಮಠದ ಅನೇಕ ವಿದ್ವಾಂಸರು ವಿಶೇಷ ಉಪನ್ಯಾಸ ನೀಡಿದರು. ಕಂಪ್ಲಿ ಶಾಸಕರಾದ ಜೆ.ಎನ್.ಗಣೇಶ್ ಅವರು ಇಂದಿನ ಶ್ರೀಮಠದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಶ್ರೀಪಾದಂಗಳವರಿಂದ ಆರ್ಶೀವಾದ ಪಡೆದರು.
ನಂತರ ಶ್ರೀಮಠದ ನಿರ್ಮಾಣಕ್ಕೆ ಸಹಕಾರ ನೀಡಿದ ಗಣ್ಯರು, ದಾನಿಗಳನ್ನು ಶ್ರೀಪಾದಂಗಳವರು ರಾಯರ ಮಂತ್ರಾಕ್ಷತೆ ನೀಡಿ ಸನ್ಮಾನಿಸಿ ಆಶೀರ್ವದಿಸಿದರು.