Advertisement

ಕಮಲ ತೆಕ್ಕೆಗೆ ಕಂಪ್ಲಿ ಪುರಸಭೆ

07:39 PM Nov 15, 2019 | Team Udayavani |

ಕಂಪ್ಲಿ: ತೀವ್ರ ಕುತೂಹಲ ಕೆರಳಿಸಿದ್ದ ಕಂಪ್ಲಿ ಪುರಸಭೆ ಫಲಿತಾಂಶ ಗುರುವಾರ ಹೊರಬಿದ್ದಿದ್ದು ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿ ಪುರಸಭೆ ಗದ್ದುಗೆಯನ್ನು ತನ್ನದಾಗಿಸಿಕೊಂಡರೆ, ಕಾಂಗ್ರೆಸ್‌ ತೀವ್ರ ಮುಖಭಂಗ ಅನುಭವಿಸಿದೆ. 23 ವಾರ್ಡ್‌ಗಳಿಗೆ ಜರುಗಿದ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪಕ್ಷದ 13 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸ್ಪಷ್ಟ ಬಹುಮತ ನೀಡಿದರೆ ಕಾಂಗ್ರೆಸ್‌ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನ ನೀಡಿ ಪ್ರಬುದ್ಧತೆ ಮೆರೆದಿದ್ದಾರೆ.

Advertisement

ಬಹುಮತಕ್ಕೆ ಅವಶ್ಯಕ 13 ಸ್ಥಾನಗಳ ಪೈಕಿ ಬಿಜೆಪಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಳ ಬಹುಮತ ಪಡೆದುಕೊಂಡಿದೆ. 23 ವಾರ್ಡ್‌ಗಳಲ್ಲಿ ಚುನಾವಣಾ ಕಣದಲ್ಲಿದ್ದ ಒಟ್ಟು 69 ಜನ ಅಭ್ಯರ್ಥಿಗಳಲ್ಲಿ ಬಿಜೆಪಿ 13, ಕಾಂಗ್ರೆಸ್‌ 10 ಸ್ಥಾನಗಳಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ.

ಕಳೆದ ಪುರಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ 11, ಬಿಎಸ್‌ಆರ್‌ 7, (ಬಿಎಸ್‌ ಆರ್‌ನವರು ನಂತರ ಭಾಜಪ ಸೇರಿದ್ದರು.) ಕೆಜೆಪಿ 2, ಜೆಡಿಎಸ್‌ 1 ಹಾಗೂ ಪಕ್ಷೇತರರು 2 ಜನರು ಆಯ್ಕೆಯಾಗಿದ್ದರು. ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲಿಸಿದ್ದರಿಂದ ಮೊದಲ ಅವಧಿಯಲ್ಲಿ ಕಾಂಗ್ರೆಸ್ನ ಹುಸೇನ್‌ ಬೀ ಅಧಿಕಾರ ನಡೆಸಿದ್ದರು.

ಎರಡನೇ ಅವಧಿಯಲ್ಲಿ ಬಿಜೆಪಿ ಬೆಂಬಲಿಸಿದ್ದರಿಂದ ಕಾಂಗ್ರೆಸ್‌ನ ಎಂ.ಸುಧೀರ್‌ ಅಧಿಕಾರ ನಡೆಸಿದ್ದರು. ಕಳೆದ ಚುನಾವಣೆಗಿಂತ ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ತನ್ನ ಸದಸ್ಯ ಬಲ ಹೆಚ್ಚಿಸಿಕೊಂಡಿದೆ. ಒಂದು ಸ್ಥಾನ ಕಳೆದುಕೊಳ್ಳುವ ಮೂಲಕ ಕಾಂಗ್ರೇಸ್‌ 10 ಸ್ಥಾನಗಳಿಗೆ ತೃಪ್ತಿಪಡುವಂತಾಗಿದೆ. ಬಿಜೆಪಿ 13 ಸ್ಥಾನಗಳೊಂದಿಗೆ ಪುರಸಭೆ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದೆ.

ಚುನಾವಣೆಯಲ್ಲಿ ಸೋತ ತಾಯಿ-ಮಗ: ಪುರಸಭೆ ಚುನಾವಣೆಯಲ್ಲಿ 4ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಜಿ. ಸುಧಾಕರ ಹಾಗೂ 5ನೇ ವಾರ್ಡಿನ ಜಿ. ಕೊಂಡಮ್ಮ ಅವರು ಕಾಂಗ್ರೆಸ್‌ ವಿರುದ್ಧ ಸೋಲುಂಡಿದ್ದಾರೆ. ಒಟ್ನಲ್ಲಿ ತಾಯಿ, ಮಗ ಸೋತಿರುವುದು ವಿಪರ್ಯಾಸವಾಗಿದೆ.

Advertisement

ಮದುಮಗ ಸೋಲು: ಪುರಸಭೆ ಚುನಾವಣೆ ಫಲಿತಾಂಶದ ದಿನದಂದು 8ನೇ ವಾರ್ಡಿನ ಕಾಂಗ್ರೆಸ್‌ ಅಭ್ಯರ್ಥಿ ಎಲ್‌.ರಾಜೇಶ್‌ ಅವರ ಮದುವೆ ಇತ್ತು. ಮದುವೆ ಬಿಜಿಯಲ್ಲಿದ್ದ ರಾಜೇಶ್‌ ಗೆ ಸೋಲಿನ ಶಾಕ್‌ ನೀಡಿದೆ. ಬಿಜೆಪಿ ಅಭ್ಯರ್ಥಿ ಟಿ.ವಿ. ಸುದರ್ಶನ ರೆಡ್ಡಿ ವಿರುದ್ಧ 11 ಮತಗಳಿಂದ ಸೋತಿದ್ದಾರೆ.

ಮಾಜಿ ಅಧ್ಯಕ್ಷರಲ್ಲಿ ಒಬ್ಬರು ಆಯ್ಕೆ: ಪಟ್ಟಣದ 21ನೇ ವಾರ್ಡಿನಲ್ಲಿ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷೆ ಎಚ್‌. ಹೇಮಾವತಿ ಅವರು ಗೆಲವು ಸಾಧಿಸಿದ್ದು, ಮಾಜಿ ಅಧ್ಯಕ್ಷರಾದ 2ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಹುಸೇನ್‌
ಬೀ ಹಾಗೂ 15ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದ ಗೋವಿಂದರಾಜು ಸೋತಿದ್ದಾರೆ.

ಪಟ್ಟಣದ ಹೊಸಪೇಟೆ ಬೈಪಾಸ್‌ ರಸ್ತೆಯಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್‌ ಬಂದೋಬಸ್ತ್ನೊಂದಿಗೆ ಬೆಳಗ್ಗೆ 7.45ಕ್ಕೆ ಮತಯಂತ್ರಗಳನ್ನು ಇರಿಸಿದ್ದ ಭದ್ರತಾ ಕೊಠಡಿಯನ್ನು ಚುನಾವಣಾಧಿಕಾರಿಗಳು ಅಭ್ಯರ್ಥಿಗಳ ಸಮಕ್ಷಮದಲ್ಲಿ ತೆರೆದರು. ನಂತರ 8 ಗಂಟೆಗೆ ಮತ ಏಣಿಕೆ ಆರಂಭಿಸಲಾಯಿತು. ಪ್ರತಿಷ್ಠೆ ಕಣವಾಗಿದ್ದ ಪುರಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ 13, ಕಾಂಗ್ರೆಸ್‌ 10 ಅಭ್ಯರ್ಥಿಗಳು ಗೆಲುವು ತನ್ನದಾಗಿಸಿಕೊಂಡರೆ ಉಳಿದ 46 ಅಭ್ಯರ್ಥಿಗಳು ಸೋತು ಸುಣ್ಣವಾಗಿದ್ದಾರೆ.

ವಿಜಯೋತ್ಸವ: ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಶುರುವಾದ ಮತ ಎಣಿಕೆ 10 ಗಂಟೆ ಸುಮಾರಿಗೆ ಎಲ್ಲ ವಾರ್ಡ್‌ಗಳ ಫಲಿತಾಂಶ ಪ್ರಕಟಗೊಂಡಿತು. ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಗೆದ್ದ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಮತ ಎಣಿಕೆ ನಂತರ ಚುನಾವಣಾಧಿಕಾರಿಗಳಾದ ಮಹ್ಮದ್‌ ಶಫಿ, ಷಣ್ಮುಕಪ್ಪ ಅವರು ಚುನಾವಣಾ ಫಲಿತಾಂಶ ಪ್ರಕಟಿಸಿ ವಿಜೇತ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದರು. ಈ ಚುನಾವಣೆ ಮತ ಎಣಿಕೆಯ ನೋಡಲ್‌ ಅಧಿಕಾರಿ ರಮೇಶ್‌ ಕೋನರೆಡ್ಡಿ, ತಹಶೀಲ್ದಾರ್‌ ಗೌಸಿಯಾಬೇಗಂ, ಉಪ ತಹಶೀಲ್ದಾರ್‌ ರವೀಂದ್ರಕುಮಾರ್‌, ಸಿಪಿಐ ಡಿ. ಹುಲುಗಪ್ಪ, ಪಿಎಸ್‌ಐ ಮೌನೇಶ್‌ ರಾಥೋಡ್‌ ಹಾಗೂ ಚುನಾವಣಾ ಸಿಬ್ಬಂದಿ ಪಾಲ್ಗೊಂಡಿದ್ದರು. ಮತ ಎಣಿಕೆಗಳ ಹಿನ್ನೆಲೆಯಲ್ಲಿ ಪಟ್ಟಣಕ್ಕೆ
ಜಿಲ್ಲಾ ಹೆಚ್ಚುವರಿ ಎಸ್ಪಿ ಲಾವಣ್ಯ ಮತ್ತು ಹಂಪಿ ಉಪವಿಭಾಗದ ಎಎಸ್ಪಿ ಡಾ|
ಸಿಮಿ ಮರಿಯಂ ಜಾರ್ಜ್‌ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next