Advertisement

ದೇಗುಲಕ್ಕೆ ತೆರಳುವಾಗ ಕಂಪ್ಲಿ ಶಾಸಕ ಗಣೇಶ್‌ ಸೆರೆ

12:30 AM Feb 21, 2019 | Team Udayavani |

ರಾಮನಗರ/ಬೆಂಗಳೂರು: ರಾಜ್ಯ ರಾಜಕೀಯ ದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕಾಂಗ್ರೆಸ್‌ ಶಾಸಕರಿಬ್ಬರ ರೆಸಾರ್ಟ್‌ ಗಲಾಟೆಗೆ ತಾರ್ಕಿಕ ಅಂತ್ಯ ಸಿಕ್ಕಿದ್ದು, ಕಂಪ್ಲಿ ಶಾಸಕ ಗಣೇಶ್‌ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

Advertisement

ಗುಜರಾತ್‌ನ ಸೋಮನಾಥದಲ್ಲಿ ಬುಧವಾರ ಗಣೇಶ್‌ ಅವರನ್ನು ಬಂಧಿಸಲಾಗಿದ್ದು, ಗುರುವಾರ ಬೆಳಗ್ಗೆ ರಾಮನಗರಕ್ಕೆ ಕರೆತರುವ ಸಾಧ್ಯತೆ ಇದೆ ಎಂದು ರಾಮನಗರ ಜಿಲ್ಲಾ ಎಸ್ಪಿ ಬಿ.ರಮೇಶ್‌ ತಿಳಿಸಿದ್ದಾರೆ.
ರಾಮನಗರ ತಾಲೂಕಿನ ಬಿಡದಿ ಬಳಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಜ.19ರ ರಾತ್ರಿ ವಿಜಯನಗರ ಶಾಸಕ ಆನಂದ್‌ ಸಿಂಗ್‌ ಮೇಲೆ ಗಣೇಶ್‌ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಅವರು ತಪ್ಪಿಸಿಕೊಂಡು ಓಡಾಡುತ್ತಿದ್ದರು. 

ಮೂರು ದಿನಗಳ ಹಿಂದೆ ಆರೋಪಿ ಶಾಸಕ ಗಣೇಶ್‌ ಗುಜರಾತ್‌ನ ಸೋಮನಾಥದಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿ ದ್ದರಿಂದ 2 ಸಿಪಿಐಗಳು, 2 ಎಸ್‌ಐ ಮತ್ತು 12 ಮಂದಿ ಸಿಬಂದಿ ಗುಜರಾತ್‌ಗೆ ತೆರಳಿದ್ದರು. ಬುಧವಾರ ಅಪರಾಹ್ನ 2 ಗಂಟೆಗೆ ಸೋಮನಾಥ ದೇವಾಲಯಕ್ಕೆ ಕಾರಿನಲ್ಲಿ ಹೋಗುವ ವೇಳೆ ಅಲ್ಲಿದ್ದ ಸುಖಸಾಗರ ಹೋಟೆಲ್‌ನಲ್ಲಿ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ.

ಗಣೇಶ್‌ ಜತೆ ಮೂವರು ಇದ್ದರು
ಶಾಸಕ ಗಣೇಶ್‌ ಜತೆಯಲ್ಲಿ ಅವರ ಸ್ನೇಹಿತರು ಎನ್ನ ಲಾದ ಕರ್ನಾಟಕದ ಇಬ್ಬರು ಮತ್ತು ಸೋಮನಾಥದ ಸ್ಥಳೀಯರೊಬ್ಬರು ಚಾಲಕನ ಜತೆಯಲ್ಲಿದ್ದರು. ಅವರನ್ನೂ ರಾಮನಗರಕ್ಕೆ ಕರೆತರಲಾಗುತ್ತಿದೆ.

ಕಾಂಗ್ರೆಸ್‌ನವರಿಂದಲೇ ರಕ್ಷಣೆ?
ಕಂಪ್ಲಿ ಶಾಸಕ ಗಣೇಶ್‌ ಬಂಧನದ ಹಿಂದೆ ಕಾಂಗ್ರೆಸ್‌ ನಾಯಕರ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಅವರನ್ನು ಬಂಧಿಸದೆ ಹಾಗೇ ಬಿಟ್ಟರೆ ಬಿಜೆಪಿಯವರಿಗೆ ಅದೇ ರಾಜಕೀಯ ಅಸ್ತ್ರವಾಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಗಣೇಶ್‌ರನ್ನು ಬಂಧಿಸಿ ಅನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಸಹಾಯ ಮಾಡುವ ಕುರಿತಂತೆ ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ. 

Advertisement

ಸಂಧಾನಕ್ಕೆ ಒಪ್ಪದ ಆನಂದ್‌ಸಿಂಗ್‌ ಪತ್ನಿ?
ಶಾಸಕ ಆನಂದ್‌ಸಿಂಗ್‌ ರಾಜಕೀಯ ಲೆಕ್ಕಾಚಾರ ದಲ್ಲಿ ಗಣೇಶ್‌ ಜೊತೆಗೆ ಸಂಧಾನ ಮಾಡಿಕೊಳ್ಳಲು ಸಹಮತ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಆದರೆ, ಅವರ ಪತ್ನಿ ಸಂಧಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಕಾರಣಕ್ಕಾಗಿ ಅವರ ಮನ ವೊಲಿಸುವ ಪ್ರಯತ್ನವನ್ನು ನಾಗೇಂದ್ರ ಮುಂದುವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next