ಕಂಪ್ಲಿ: ಕಳೆದೆರಡು ದಿನಗಳಿಂದ ತುಂಗಭದ್ರಾ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರು ಮಂಗಳವಾರ ಬೆಳಗಿನಿಂದ ಪ್ರವಾಹ ಇಳಿಮುಖವಾಗಿದೆ.
ಸೇತುವೆಯ ಮೇಲೆ 4ರಿಂದ5 ಅಡಿಗಳಷ್ಟು ಹರಿಯುತ್ತಿದ್ದ ನೀರಿನ ಪ್ರವಾಹ ಮಂಗಳವಾರ ಸೇತುವೆಯ ಮಟ್ಟಕ್ಕೆ ಹರಿಯುತ್ತಿದ್ದು, ಸೇತುವೆ ಮೇಲಿದ್ದ ಕಸಕಡ್ಡಿ,ಗಿಡಗಂಟೆ ಸೇರಿದಂತೆ ಪ್ರವಾಹಕ್ಕೆ ಹರಿದು ಬಂದಿದ್ದ ಹಸಿರೆಲೆಗಳನ್ನು ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು. ಆ.10ರಿಂದ 12ರವರೆಗೆ ನದಿಗೆ 25 ಸಾವಿರದಿಂದ 2.50.ಲಕ್ಷ ಕ್ಯೂಸೆಕ್ ನೀರನ್ನು ಬಿಡುತ್ತಿದ್ದು, ಇಂದು ಬೆಳಗಿನಿಂದ ನದಿಗೆ 1.65ಲಕ್ಷ ಕ್ಯೂಸೆಕ್ ನೀರನ್ನು ಬಿಡುತ್ತಿರುವುದರಿಂದ ನದಿಯಲ್ಲಿ ನೀರಿನ ಪ್ರವಾಹ ಕಡಿಮೆಯಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ.
ಕಂಪ್ಲಿ ಕೋಟೆಯಲ್ಲಿ ನದಿ ಪ್ರವಾಹದಿಂದ ಮನೆಗಳಿಗೆ ನೀರು ಹೊಕ್ಕ ಕುಟುಂಬಗಳನ್ನು ಪಟ್ಟಣದ 8ನೇ ವಾರ್ಡ್ ಸರ್ಕಾರಿ ಶಾಲೆಯ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದು, ಅವರಿಗೆ ಊಟ ಉಪಚಾರ,ಆರೋಗ್ಯ ಸೇವೆ ಮುಂದುವರಿದಿದೆ. ಶಾಲೆಗೆ ರಜೆಯನ್ನು ಘೋಷಣೆ ಮಾಡಲಾಗಿದ್ದು, ಪ್ರವಾಹ ಮುಂದುವರಿದರೆ ಕೇಂದ್ರವನ್ನು ಮುಂದುವರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನದಿ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನದಿ ತೀರದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ನದಿ ತೀರದಲ್ಲಿ ಜನರನ್ನು ನಿಯಂತ್ರಿಸಲು ಹಾಗೂ ಸೇತುವೆ ಜನರು ಸಂಚರಿಸದಂತೆ ಪೊಲೀಸರು, ಪುರಸಭೆ ಸಿಬ್ಬಂದಿಗಳು ಹರಸಹಾಸ ಪಡುತ್ತಿದ್ದಾರೆ. ಆದರೂ ಕೆಲವರು ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾರೆ. ಸೇತುವೆ ಮೇಲೆ ನೀರು ಕಡಿಮೆಯಾಗುತ್ತಿದ್ದಂತೆಯೇ ಈ ಭಾಗದಿಂದ ಆ ಭಾಗಕ್ಕೆ ಹಾಗೂ ಆ ಭಾಗದಿಂದ ಈ ಭಾಗಕ್ಕೆ ಪ್ರಯಾಣಿಕರು ತಮ್ಮ ಸರಕು ಸರಂಜಾಮುಗಳೊಂದಿಗೆ ಸಂಚರಿಸುತ್ತಿರುವುದು ಕಂಡು ಬಂತು.
ಮೇಲೆದ್ದ ಸಿಮೆಂಟ್ ಕಾಂಕ್ರೀಟ್: ಕೇವಲ ಎರಡೇ ದಿನಗಳ ನದಿ ಪ್ರವಾಹಕ್ಕೆ 60 ವರ್ಷಗಳಷ್ಟು ಹಳೆಯದಾದ ಸೇತುವೆಯ ಮಧ್ಯದಲ್ಲಿ ಸಿಮೆಂಟಿನ ಮೇಲ್ಭಾಗ ಎದ್ದಿದ್ದು, ನೀರು ಕಡಿಮೆಯಾದರೂ ವಾಹನಗಳ ಸಂಚಾರ ದುಸ್ತರವಾಗಲಿದೆ. ಪೊಲೀಸರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ಪರಿಶೀಲನೆ ಮಾಡಿದ ಮೇಲೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.