Advertisement

ಕಂಬಳಕ್ಕೆ ಹಸಿರು ನಿಶಾನೆ : ರಾಜ್ಯದ ಅಧ್ಯಾದೇಶಕ್ಕೆ ರಾಷ್ಟ್ರಪತಿ ಅಂಕಿತ

03:30 AM Jul 04, 2017 | Karthik A |

ಮಂಗಳೂರು: ಕರಾವಳಿ ಭಾಗದ ಜನಪದ ಕ್ರೀಡೆ ಕಂಬಳ ಆಯೋಜನೆ ಸಂಬಂಧ ರಾಜ್ಯ ಸರಕಾರ ಹೊರಡಿಸಿದ್ದ ಅಧ್ಯಾದೇಶಕ್ಕೆ ಸೋಮವಾರ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಇದರೊಂದಿಗೆ ಕಂಬಳ ಆಯೋಜನೆಗೆ ಎದುರಾಗಿದ್ದ ತೊಡಕಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದ್ದು, ಮುಂದಿನ 6 ತಿಂಗಳ ಅವಧಿಯಲ್ಲಿ ಕಂಬಳ ನಡೆಸಲು ಅಧಿಕೃತ ಅನುಮತಿ ಲಭಿಸಿದೆ. ರಾಜ್ಯದಲ್ಲಿ ತುರ್ತಾಗಿ ಕಂಬಳ ಆಯೋಜಿಸಲು ಕಾನೂನಿನಡಿ ಅನುಮತಿ ನೀಡುವ ಉದ್ದೇಶದಿಂದ ಸರಕಾರವು ತುರ್ತಾಗಿ ಅಧ್ಯಾದೇಶ ಮಾಡಿ ರಾಜ್ಯ ಪಾಲರ ಮೂಲಕ ಕೇಂದ್ರಸರಕಾರಕ್ಕೆ ಕಳುಹಿಸಿತ್ತು. ಈ ಅಧ್ಯಾದೇಶಕ್ಕೆ ರಾಷ್ಟ್ರಪತಿಗಳ ಅನುಮತಿಯೊಂದಿಗೆ ಗೃಹ ಸಚಿವಾಲಯ ಆದೇಶವನ್ನು ಹೊರಡಿಸಿ ಅದನ್ನು ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿಗೆ ರವಾನಿಸಿದೆ.

Advertisement

ಈ ಆದೇಶದ ಬಗ್ಗೆ ‘ಉದಯವಾಣಿ’ ಜತೆ ಮಾತನಾಡಿದ ಕೇಂದ್ರ ಅಂಕಿ-ಅಂಶ ಸಚಿವ ಡಿ.ವಿ. ಸದಾನಂದ ಗೌಡ ಅವರು, ರಾಷ್ಟ್ರಪತಿ ಹೊರಡಿಸಿರುವ ಅಧ್ಯಾದೇಶ ಹಿನ್ನೆಲೆಯಲ್ಲಿ ಕಂಬಳ ಆಯೋಜನೆಗೆ ಅನುಮತಿ ಲಭಿಸಿದೆ. ಈ ಅಧ್ಯಾದೇಶ 6 ತಿಂಗಳವರೆಗೆ ಜಾರಿಯಲ್ಲಿರುತ್ತದೆ. ಈ ನಡುವೆ ರಾಜ್ಯ ಸರಕಾರದ ‘ಕಂಬಳ ತಿದ್ದುಪಡಿ ಮಸೂದೆ’ಗೆ ಕೇಂದ್ರದ ಸೂಚನೆ ಮೇರೆಗೆ ಕೆಲವು ತಿದ್ದುಪಡಿ ಕೋರಿದ್ದು ಇದು ರಾಜ್ಯ ವಿಧಾನಸಭೆಯ ಎರಡು ಸದನಗಳಲ್ಲಿ ಮತ್ತೆ ಮಂಡನೆಯಾಗಿ ಅನುಮತಿ ಪಡೆದ ಬಳಿಕ ರಾಜ್ಯಪಾಲರ ಬಳಿಗೆ ಹೋಗುತ್ತದೆ. ಅಲ್ಲಿ ಮಸೂದೆ ಕಾಯಿದೆ ರೂಪವನ್ನು ಪಡೆದುಕೊಂಡು ಕಂಬಳಕ್ಕೆ ಶಾಶ್ವತವಾದ ಅಂಗೀಕಾರ ಲಭಿಸುತ್ತದೆ. ಇದು ಮತ್ತೆ ರಾಷ್ಟ್ರಪತಿಗಳ ಬಳಿಗೆ ಹೋಗುವ ಆವಶ್ಯಕತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ರಾಜ್ಯ ಸರಕಾರ ಕಂಬಳ ಸಂಬಂಧ ಅಧ್ಯಾದೇಶ ಹೊರತಾಗಿ ಕಂಬಳ ತಿದ್ದುಪಡಿ ಮಸೂದೆಯನ್ನು ಕೂಡ ಕೇಂದ್ರ ಸರಕಾರದ ಒಪ್ಪಿಗೆಗಾಗಿ ಕಳುಹಿಸಿತ್ತು. ಈಗ ಅಧ್ಯಾದೇಶಕ್ಕೆ ಮಾತ್ರ ರಾಷ್ಟ್ರಪತಿ ಅಂಗೀಕಾರ ನೀಡಿದ್ದಾರೆ. 

ಗೊಂದಲದ ಸ್ಥಿತಿ: ರಾಜ್ಯ ಸರಕಾರ ಈಗಾಗಲೇ ‘ಕಂಬಳ ತಿದ್ದುಪಡಿ ಮಸೂದೆ’ ರೂಪಿಸಿ ರಾಜ್ಯಪಾಲರ ಬಳಿಗೆ ಕಳುಹಿಸಿದ್ದು ಅವರು ಅದನ್ನು ಕೇಂದ್ರ ಸರಕಾರಕ್ಕೆ ಪರಿಶೀಲನೆಗಾಗಿ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದರು. ಈ ‘ಕಂಬಳ ತಿದ್ದುಪಡಿ ಮಸೂದೆ’ ಈಗಾಗಲೇ ಅರಣ್ಯ ಮತ್ತು ಪರಿಸರ, ಸಂಸ್ಕೃತಿ ಹಾಗೂ ಕಾನೂನು ಸಚಿವಾಲಯದ ಪರಿಶೀಲನೆಗೆ ಹೋಗಿತ್ತು. ಮಸೂದೆಯಲ್ಲಿನ ಕೆಲವು ಪದಬಳಕೆಗೆ ಕಾನೂನು ಸಚಿವಾಲಯ ಆಕ್ಷೇಪವೆತ್ತಿದ್ದ ಕಾರಣ ಕಡತವನ್ನು ರಾಜ್ಯ ಸರಕಾರಕ್ಕೆ ವಾಪಸ್‌ ಕಳುಹಿಸಲಾಗಿತ್ತು. ‘ಕೇಂದ್ರ ಸರಕಾರಕ್ಕೆ 2ನೇ ಬಾರಿ ಕಳುಹಿಸಿದ್ದ ‘ಕಂಬಳ ತಿದ್ದುಪಡಿ ಮಸೂದೆ’ ನಾನಾ ಕಾರಣಗಳಿಂದಾಗಿ ಒಪ್ಪಿಗೆ ಪಡೆಯದೆ ಕಾನೂನು ಸಚಿವಾಲಯದಲ್ಲೇ ಬಾಕಿಯಾಗಿತ್ತು. ಕೊನೆಗೂ ಗೃಹಸಚಿವಾಲಯ ಒಪ್ಪಿಗೆ ನೀಡಿ ಎದುರಾಗಿದ್ದ ಎಲ್ಲ ರೀತಿಯ ಕಾನೂನು ಅಡೆ-ತಡೆ ಹಾಗೂ ಗೊಂದಲ ನಿವಾರಣೆಯಾಗಿ ಅಧಿಸೂಚನೆ ಹೊರಬೀಳಲಿದೆ ಎಂಬುದಾಗಿ ಹೇಳಲಾಗಿತ್ತು. ಆದರೆ ಈಗ ಮಸೂದೆಯ ಬದಲು ರಾಷ್ಟ್ರಪತಿಯವರ ಅಧ್ಯಾದೇಶ ಹೊರಬಿದ್ದಿರುವುದು ಕಂಬಳ ಕಾಯ್ದೆ ಬಗ್ಗೆ ಜನರಲ್ಲಿ ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿದೆ. 

ಕಾನೂನು ಆದರೆ ಮಾತ್ರ ಶಾಶ್ವತ ಪರಿಹಾರ: ಅಧ್ಯಾದೇಶ 6 ತಿಂಗಳು ಮಾತ್ರ ಉರ್ಜಿತದಲ್ಲಿರುತ್ತದೆ. ಅಷ್ಟರೊಳಗೆ ಅದು ಕಾನೂನು ಆಗಿ ಮಾರ್ಪಾಡಾಗಬೇಕು. ಈಗ ಹೊರಡಿಸಿರುವ ಈ ಅಧ್ಯಾದೇಶ ಪ್ರಕಾರ ಮುಂದಿನ ಡಿಸೆಂಬರ್‌ ಕೊನೆಯವರೆಗೆ ಕಂಬಳ ಆಯೋಜನೆಗೆ ಅವಕಾಶವಿದೆ. ಅಷ್ಟರೊಳಗೆ ಕಂಬಳ ಮಸೂದೆ ಅಂಗೀಕಾರ ಪಡೆದು ಕಾನೂನು ರೂಪ ಪಡೆಯಬೇಕು. ಆದರೆ ಈಗ ಕಂಬಳ ಬಗ್ಗೆ ರಾಜ್ಯ ಸರಕಾರ ಕಳುಹಿಸಿರುವ ಕಂಬಳ ತಿದ್ದುಪಡಿ ಮಸೂದೆಗೆ ಗೃಹ ಇಲಾಖೆಯಿಂದ ಅಂಗೀಕಾರ ನೀಡಿರುವ ಅಧಿಸೂಚನೆ ರಾಜ್ಯ ಸರಕಾರಕ್ಕೆ ರವಾನಿಸಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಕಂಬಳಕ್ಕೆ ಅನುಮತಿ ನೀಡಿ ಅಧ್ಯಾದೇಶ ಹೊರಬಿದ್ದಿರುವುದಕ್ಕೆ ಸಂಸದ ನಳಿನ್‌ ಕುಮಾರ್‌ ಕಟೀಲು, ಕಂಬಳ ಬಗ್ಗೆ ಕಾನೂನು ಹೋರಾಟ ನಡೆಸಿರುವ ಆಶೋಕ್‌ ರೈ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next