Advertisement
ಕಾನೂನಿನ ಕರಡು ಪ್ರತಿ ಉದಯವಾಣಿಗೆ ಲಭ್ಯವಾಗಿದ್ದು, ದೇಸಿ ತಳಿ ಸಂರಕ್ಷಣೆ ಮತ್ತು ತಳಿ ಅಭಿವೃದ್ಧಿ ಉದ್ದೇಶದಿಂದ ಕಂಬಳ, ಎತ್ತಿನಗಾಡಿ ಓಟ ಹಾಗೂ ಕೊಬ್ಬರಿ ಹೋರಿ ಕ್ರೀಡೆಗೆ ಕಾನೂನಿನ ಮಾನ್ಯತೆ ನೀಡಲು ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.
Related Articles
Advertisement
ಪ್ರಾಣಿ ದಯಾ ಸಂಘ ಕಂಬಳ ಕ್ರೀಡೆ, ಕೋಣಗಳಿಗೆ ಚಿತ್ರ ಹಿಂಸೆ ನೀಡಲಾಗುತ್ತದೆ ಎಂಬ ಕಾರಣಕ್ಕೆ ಕಂಬಳ ನಿಷೇಧಿಸಬೇಕೆಂದು ಹೈ ಕೋರ್ಟ್ ಮೆಟ್ಟಿಲೇರಿತ್ತು, ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕಳೆದ ಎರಡು ವರ್ಷದಿಂದ ಕಂಬಳ ಸೇರಿದಂತೆ ಕೋಣ, ಎತ್ತುಗಳನ್ನು ಬಳಸಿ ಮನರಂಜನೆಗೆ ಆಡುವ ಕ್ರೀಡೆಗಳನ್ನು ನಿಷೇಧಿಸಿ ತೀರ್ಪು ನೀಡಿತ್ತು. ತಮಿಳುನಾಡಿನಲ್ಲಿ ಜಲ್ಲಿ ಕಟ್ಟು ನಡೆಸಲು ಇತ್ತೀಚೆಗೆ ಸುಪ್ರೀಂ ಕೋರ್ಟ್ ಪ್ರತಿಬಂಧಕ ಆದೇಶದ ನಡುವೆಯೂ ಸುಗ್ರೀವಾಜ್ಞೆ ಹೊರಡಿಸಿ ಜಲ್ಲಿ ಕಟ್ಟು ನಡೆಸಿದ್ದರಿಂದ ರಾಜ್ಯದಲ್ಲೂ ಸಹ ಕಂಬಳ, ಎತ್ತಿನ ಗಾಡಿ ಓಟ, ಕೊಬ್ಬರಿ ಹೋರಿ ಓಟ ಕ್ರೀಡೆ ನಡೆಸಲು ಕಾನೂನಿಗೆ ತಿದ್ದುಪಡಿ ತರಲು ಎಲ್ಲೆಡೆ ಒತ್ತಡ ಕೇಳಿ ಬಂದಿತ್ತು.ಹೈಕೋರ್ಟ್ ಕಂಬಳ ಕ್ರೀಡೆಯ ನಿಷೇಧ ತೆರವುಗೊಳಿಸಬಹುದೆಂದು ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರ ಅದು ಸಾಧ್ಯವಾಗದಿದ್ದಾಗ, ಅಧಿವೇಶನದಲ್ಲಿಯೇ ಕ್ರೀಡೆಗೆ ನಡೆಸಲು ಅನುಕೂಲವಾಗುವಂತೆ ತಮಿಳು ನಾಡಿನ ಜಲ್ಲಿಕಟ್ಟು ಮಾದರಿಲ್ಲಿ ತಿದ್ದುಪಡಿ ತರುವುದಾಗಿ ಪ್ರಕಟಿಸಿತ್ತು. ಅದರಂತೆ ಕರಾವಳಿ ಭಾಗದ ಕಂಬಳ, ಉತ್ತರ ಕರ್ನಾಟಕದ ಎತ್ತಿನಗಾಡಿ ಓಟ, ಕೊಬ್ಬರಿ ಹೋರಿ ಕ್ರೀಡೆಗೆ ಕಾನೂನಿನಲ್ಲಿ ತಿದ್ದುಪಡಿ ತರಲು ರಾಜ್ಯದ ಜನತೆ ಹಾಗೂ ಜನ ಪ್ರತಿನಿಧಿಗಳು ಒತ್ತಡ ಹೇರಿದ್ದರು. ಕೊಬ್ಬರಿ ಹೋರಿಗಿಲ್ಲ ಕಾನೂನು ?: ರಾಜ್ಯ ಸರ್ಕಾರ ಕಂಬಳ ಮತ್ತು ಎತ್ತಿನಗಾಡಿ ಓಟದ ಸ್ಪರ್ಧೆಗೆ ಕಾನೂನು ತಿದ್ದುಪಡಿಗೆ ಮುಂದಾಗಿದ್ದು, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಕ್ರಮಣ, ದೀಪಾವಳಿ ಮತ್ತು ಯುಗಾದಿ ಸಂದರ್ಭದಲ್ಲಿ ಆಚರಿಸಲ್ಪಡುವ ಕೊಬ್ಬರಿ ಹೋರಿ ಕ್ರೀಡೆಗೆ ಕಾನೂನಿನ ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ ಹಿಂದೇಟು ಹಾಕಿತ್ತು. ಕೊಬ್ಬರಿ ಓಟದ ಕ್ರೀಡೆಯಲ್ಲಿ ಗೂಳಿ ಹೋರಿಗಳನ್ನು ಬಳಸುವುದರಿಂದ ಅಲ್ಲಿಯೂ ಹೋರಿಗಳಿಗೆ ಹಿಂಸೆ ನೀಡಲಾಗುತ್ತದೆ ಎಂಬ ಕಾರಣಕ್ಕೆ ಅದನ್ನು ವಿಧೇಯಕದಲ್ಲಿ ಸೇರಿಸದಿರಲು ಸರ್ಕಾರ ನಿರ್ಧರಿಸಿತ್ತು. ಆದರೆ, ಉತ್ತರ ಕರ್ನಾಟಕ ಭಾಗದವರೇ ಆದ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೊಬ್ಬರಿ ಹೋರಿ ಸ್ಪರ್ಧೆಯನ್ನು ಸೇರಿಸುವಂತೆ ಪಟ್ಟು ಹಿಡಿದಾಗ, ಸರ್ಕಾರ ಸಭಾಧ್ಯಕ್ಷ ಸಲಹೆಯನ್ನು ಪರಿಗಣಿಸಿ ಕೊಬ್ಬರಿ ಹೋರಿ ಕ್ರೀಡೆಯನ್ನೂ ವಿಧೇಯಕದಲ್ಲಿ ಸೇರಿಸಲು ತೀರ್ಮಾನಿಸಿದೆ. – ಶಂಕರ ಪಾಗೋಜಿ.