ಬೆಂಗಳೂರು: ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರ ಬಗ್ಗೆ ಆಗಿನ ಕಾಂಗ್ರೆಸ್ ಪಕ್ಷದ ಪರಮೋತ್ಛ ನಾಯಕರಾಗಿದ್ದ ಕೆ. ಕಾಮರಾಜ್ ಅವರು ತುಂಬಾ ವ್ಯಥೆಪಟ್ಟುಕೊಂಡು ಕಣ್ಣೀರು ಹಾಕಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಕಾಮರಾಜ್ ಫೌಂಡೇಷನ್ ಆಫ್ ಇಂಡಿಯಾದ ವತಿಯಿಂದ ಶನಿವಾರ ನಗರದ ಬಿ. ಆರಸೋಜಿರಾವ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಫೌಂಡೇಷನ್‌ನ 42ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ದೇವೇಗೌಡರು, ಕಾಮರಾಜ್ ಆವರ ಜೊತೆಗಿನ ಒಡನಾಟ ಹಾಗೂ ತುರ್ತು ಪರಿಸ್ಥಿತಿ ಬಗ್ಗೆ ಅವರು ವ್ಯಥೆಪಟ್ಟಿದ್ದನ್ನು ಸ್ಮರಿಸಿಕೊಂಡರು.
ಕಾಂಗ್ರೆಸ್ ಪಕ್ಷ ಬಿಕ್ಕಟ್ಟು ಎದುರಿಸುತ್ತಿದ್ದ ಕಾಲದಲ್ಲಿ ಇಂದಿರಾಗಾಂಧಿಯವರನ್ನು ಪ್ರಧಾನಿ ಮಾಡುವುದರಲ್ಲಿ ಕಾಮರಾಜ್ ನಿರ್ಣಾಯಕ ಪಾತ್ರ ವಹಿಸಿದ್ದರು. ಅದೇ ಇಂದಿರಾಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ, ತಾನೇ ಪ್ರಧಾನಿ ಮಾಡಿದ “ಮೇಡಂ’ (ಇಂದಿರಾಗಾಂಧಿ) ಹೀಗೆ ಮಾಡಿ ಬಿಟ್ಟರಲ್ಲಾ ಎಂದು ವ್ಯಥೆಪಟ್ಟು ಕಣ್ಣೀರು ಹಾಕಿದ್ದ ಕಾಮರಾಜ್ ಪಶ್ಚಾತ್ತಾಪಪಟ್ಟಿದ್ದರು ಎಂದು ತಿಳಿಸಿದರು.
ಭಾವುಕರಾದ ಎಚ್‌ಡಿಡಿ: ಮಾತನಾಡುವಾಗ ಕಾಮರಾಜ್ ಅವರನ್ನು ನೆನೆದು ಎಚ್.ಡಿ. ದೇವೇಗೌಡರು ಭಾವುಕರಾದರು. ಅವರೊಬ್ಬ ಸರಳ ಜೀವಿ. ಅವರ ಸರಳತೆ ಮತ್ತು ಪ್ರಾಮಾಣಿಕತೆ ಇಂದಿನ ಪೀಳಿಗೆಗೆ ಮಾದರಿ. ನಾನು ಕಂಡಂತೆ ರಾಷ್ಟ್ರಪಿತ ಮಹಾತ್ಮಗಾಂಧಿ ನಂತರ ಅತ್ಯಂತ ಸರಳ, ಸಜ್ಜನ, ಮೇಧಾವಿ ಹಾಗೂ ತಾನು ನಂಬಿದ ತತ್ವಗಳ ಪರಿಪಾಲಕ ವ್ಯಕ್ತಿಯೆಂದರೆ ಕಾಮರಾಜ್. ಅವರಿಗೆ ಮರಣೋತ್ತರ ಭಾರತರತ್ನ ಲಭಿಸಿತು.
ಆದರೆ, ಅದೆನ್ನಲ್ಲ ಅವರು ಬಯಸುತ್ತಿರಲಿಲ್ಲ ಎಂದು ಹೇಳಿದಾಗ ದೇವೇಗೌಡರ ಕಣ್ಣುಗಳು ತೆವಗೊಂಡಿದ್ದವು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಕಾಮರಾಜ್ ಫೌಂಡೇಷನ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ಎ. ನೀಲಾಲೋಥಿತದಾಸನ್ ನಾಡರ್, ಪ್ರಧಾನ ಕಾರ್ಯದರ್ಶಿ ಪ್ರೊ. ಡಾ. ಕೆ. ಜಾನ್‌ಕುಮಾರ್, ಸ್ವಾಗತ ಸಮಿತಿ ಕಾರ್ಯದರ್ಶಿ ಎಂ.ಎ. ಚೆಲ್ಲಯ್ಯ ಮತ್ತಿತರರು ಇದ್ದರು.