ಕಲಬುರಗಿ: ಕಳೆದ ತಿಂಗಳು ಉದ್ಘಾಟನೆಗೊಂಡು ಆರಂಭವಾಗಿರುವ ಇಲ್ಲಿನ ವಿಮಾನ ನಿಲ್ದಾಣದಿಂದ ಕಲಬುರಗಿ- ಬೆಂಗಳೂರು ನಡುವೆ ಎರಡನೇ ವಿಮಾನ ಹಾರಾಟ ಶುಕ್ರವಾರ ಇಂದು ಶುಭಾರಂಭಗೊಂಡಿತು.
ಏರ್ ಇಂಡಿಯಾದ ಅಲಯನ್ಸ್ ಸ್ಟಾರ್ ವಿಮಾನವು ಬೆಳಿಗ್ಗೆ 8.30ಕ್ಕೆ ಮೈಸೂರಿನಿಂದ ಹೊರಟು ತದನಂತರ ಬೆಂಗಳೂರಿಗೆ ಬಂದು ಅಲ್ಲಿಂದ 10.50ಕ್ಕೆ ಹೊರಟು 12.50ಕ್ಕೆ ಕಲಬುರಗಿ ವಿಮಾನ ನಿಲ್ದಾಣ ಕ್ಕೆ ಆಗಮಿಸಿದಾಗ ಭರ್ಜರಿಯಾಗಿ ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಕೇಕ್ ಕತ್ತರಿಸುವ ಮುಖಾಂತರ ಸಂಭ್ರಮಿಸಲಾಯಿತು.
ಒಟ್ಟಾರೆ 72 ಸೀಟುಗಳ ಪೈಕಿ 56 ಜನ ಪ್ರಯಾಣಿಕರು ಪ್ರಯಾಣಿಸಿದರು. ಬೆಂಗಳೂರಿನಿಂದ 10.50ಕ್ಕೆ ಬಿಟ್ಟ ವಿಮಾನವು ಕಲಬುರಗಿ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 12.50 ಬಂದು ತಲುಪಿತು. ಬೆಂಗಳೂರಿನಿಂದ 9.50ಕ್ಕೆ ಬಿಡಬೇಕಿದ್ದ ವಿಮಾನ ಮಂಜು ಕವಿದ ವಾತಾವರಣ ಹಿನ್ನೆಲೆಯಲ್ಲಿ ಒಂದು ಗಂಟೆ ತಡವಾಗಿ ಪ್ರಯಾಣಿಸಿತು. ಹೀಗಾಗಿ ಕಲಬುರಗಿಗೆ ಒಂದುವರೆ ಗಂಟೆ ತಡವಾಗಿ ಆಗಮಿಸಿತು.
ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿ ಮಡು, ದತ್ತಾತ್ರೇಯ ಪಾಟೀಲ್, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ವಿಮಾನ ಸ್ವಾಗತಿಸಿದರಲ್ಲದೇ ಕಲಬುರಗಿಯಿಂದ ಮರಳಿ ಬೆಂಗಳೂರಿಗೆ ಹೊರಟ ವಿಮಾನಕ್ಕೆ ಹಸಿರು ಬಾವುಟ ಮೂಲಕ ಚಾಲನೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಡಾ.ಉಮೇಶ ಜಾಧವ್ ಅವರ ಪ್ರಯತ್ನದಿಂದ ಈಗ ಬೆಂಗಳೂರಿಗೆ ಎರಡನೇ ವಿಮಾನ ಶುರುವಾಗಲಿದೆ. ಜನವರಿ 2 ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಎರಡನೇ ಟರ್ಮಿನಲ್ ಉದ್ಗಾಟನೆ ನೆರವೇರಿಸಿದ ನಂತರ ಜನರಿಗೆ ಅನುಕೂಲ ತಕ್ಕಂತೆ ಸಮಯದ ಬದಲಾವಣೆಯಾಗಲಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ನವದೆಹಲಿ, ತಿರುಪತಿ, ಮುಂಬೈ ನಡುವೆ ವಿಮಾನ ಸಂಚಾರ ಶುರುವಾಗಲಿದೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಈ ಸಂದರ್ಭದಲ್ಲಿ ತಿಳಿಸಿದರು.