Advertisement

ನೀರು ಕುಡಿಯೋದಕ್ಕೆ ಮಾತ್ರವಲ್ಲ, ಮುಟ್ಟೋದಕ್ಕೂ ಭಯ!

06:00 AM Jun 03, 2018 | Team Udayavani |

ಉಡುಪಿ: ಹೂಳೆತ್ತದೆ, ಕಸ, ಪೊದೆ, ತ್ಯಾಜ್ಯಗಳಿಂದ ಕಲ್ಸಂಕ ತೋಡಿನಲ್ಲಿ ನೀರು ಹರಿವಿಗೆ ಸಮಸ್ಯೆ ಮಾತ್ರವಲ್ಲ, ಕೊಳಚೆಯಿಂದಲೂ ತುಂಬುವುದರಿಂದ ಆಸುಪಾಸಿನ ನಿವಾಸಿಗಳು ಕಾಯಿಲೆ ಭೀತಿಯಿಂದ ಬಳಲುವಂತಾಗಿದೆ.
  
ಕಲ್ಸಂಕ ತೋಡಿನ ನೀರು ಮಠದಬೆಟ್ಟು ಪರಿಸರಕ್ಕೆ ತಲುಪುವಾಗ ನೀರು ಕಪ್ಪು, ಕೆಂಪು ಬಣ್ಣ ಹೊಂದುತ್ತದೆ. ಕಲ್ಮಶಗಳ ರಾಶಿಯನ್ನೇ ಹೊತ್ತು ತರುತ್ತದೆ. ಜೋರಾದ ಮಳೆಗೆ ಇವುಗಳು ತೋಡಿನಿಂದ ಮೇಲೆದ್ದು ಗದ್ದೆಗಳಿಗೆ ಪ್ರವಹಿಸುತ್ತದೆ. ಈ ಸಂದರ್ಭ ಮನೆ, ಜಮೀನುಗಳಲ್ಲಿ ಬಾವಿ, ಬೋರ್‌ವೆಲ್‌ ಇದ್ದರೂ ಅವುಗಳ ನೀರು ಮಳೆಗೆ ತೋಡಿನಿಂದ ಮೇಲೆದ್ದು ಮನೆ, ಗದ್ದೆಗಳಿಗೆ ಪ್ರವಹಿಸುತ್ತದೆ. ಇಲ್ಲಿನ ಮನೆಗಳಲ್ಲಿ ನೋಡಲು ಸುಂದರ ಬಾವಿಗಳಿದ್ದರೂ ಅವುಗಳ ನೀರು ಕುಡಿಯುವಂತಿಲ್ಲ. ಕನಿಷ್ಠ ಸ್ನಾನ ಮಾಡುವುದಕ್ಕೂ ಬಳಸುವಂತಿಲ್ಲ. ಈ ಕಾರಣಕ್ಕಾಗಿ ಅನಿವಾರ್ಯವಾಗಿ ನಗರಸಭೆ ನೀರಿನ ಸಂಪರ್ಕ ಪಡೆದುಕೊಂಡಿದ್ದೇವೆ’ ಎನ್ನುತ್ತಾರೆ ಶಿರಿಬೀಡು-ಮಠದಬೆಟ್ಟು ನಿವಾಸಿ ತುಕ್ರ ಪೂಜಾರಿ. ಇದರೊಂದಿಗೆ ಸುತ್ತಲಿನ ಗದ್ದೆಯಲ್ಲಿ ಕೃತಕ ನೆರೆ ತುಂಬುವುದರಿಂದ ಕೃಷಿಯೂ ಸಾಗುತ್ತಿಲ್ಲ.  


ಕೊಳಚೆಗೆ ನಗರಸಭೆ ಕೊಡುಗೆ?
ಭಾರೀ ವರ್ಷಗಳ ಹಿಂದೆಯೇ ಗುಂಡಿ ಬೈಲು ಭಾಗದಲ್ಲಿ ಕಲ್ಸಂಕ ತೋಡಿನ ಪಕ್ಕ ಅಳವಡಿಸಿರುವ ಕೊಳಚೆ ನೀರು ಸಂಗ್ರಹ ಗುಂಡಿ(ವೆಟ್‌ವೆಲ್‌)ಯಿಂದ ಭಾರೀ ಕೊಳಚೆ ನೀರು ಕಲ್ಸಂಕ ತೋಡು ಸೇರುತ್ತಿದೆ ಎನ್ನುತ್ತಾರೆ ಸ್ಥಳೀಯರು. ಪಂಪ್‌ ಹಾಳಾದರೆ, ವಿದ್ಯುತ್‌ ಇಲ್ಲದಿದ್ದರೆ ಮತ್ತು ರಾತ್ರಿ ವೇಳೆಯೂ ಕಲ್ಸಂಕ ತೋಡಿಗೆ ಕೊಳಚೆ ನೀರು ಬಿಡಲಾಗುತ್ತಿದೆ ಎನ್ನುವುದು ಅವರ ದೂರು. ಆದರೆ ಇದನ್ನು ನಗರಸಭೆ ಅಧಿಕಾರಿಗಳು ನಿರಾಕರಿಸುತ್ತಾರೆ.

Advertisement

ಮಠದಬೆಟ್ಟು 2ನೇ ಅಡ್ಡರಸ್ತೆಯ ಕಮಲ ಪೂಜಾರಿ¤ ಅವರ ಮನೆಗೂ ಮೊನ್ನೆಯ ಮಳೆ ಸಂದರ್ಭ ತೋಡಿನ ನೀರು ಉಕ್ಕಿ ಬಂದಿತ್ತು. ತೋಡಿನ ಇನ್ನೊಂದು ಬದಿಯ ನಿವಾಸಿ ಕೃಷ್ಣ ಪೂಜಾರಿ, ಸುರೇಶ್‌ ಅವರ ಮನೆಗೂ ನೀರು ನುಗ್ಗಿತ್ತು.  “ಈ ಭಾಗದಲ್ಲಿ 1983ರಲ್ಲಿ ಮಾಡಿದ ಚರಂಡಿ ವ್ಯವಸ್ಥೆಗಳೇ ಈಗಲೂ ಇವೆ. ಈಗ ನಗರ ಬೆಳೆದಿದೆ. ಚರಂಡಿಗಳು ನಗರದ ಸಾಮರ್ಥ್ಯ ತಡೆದುಕೊಳ್ಳುವ ಶಕ್ತಿ ಹೊಂದಿಲ್ಲ. ಹೆಚ್ಚಿನ ಕಡೆಗಳಲ್ಲಿ ಚರಂಡಿಗಳು ಸಮರ್ಪಕವಾಗಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರಭಾಕರ್‌.

ಮಳೆಗಾಲದಲ್ಲಿ ನೆರೆ, ಕೊಳಚೆ ನೀರಿನ ಹಾವಳಿ. ಬಿಸಿಲು ಬಂದರೆ ವಾಸನೆ, ಸೊಳ್ಳೆಯಿಂದ ರಾತ್ರಿ ನಿದ್ದೆ ಮಾಡುವುದು ಕೂಡ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಅಹವಾಲು ತೋಡಿಕೊಳ್ಳುತ್ತಾರೆ. ಇಲ್ಲಿಯೂ ತೋಡಿಗೆ ಕಸ ಎಸೆಯುವವರು, ಕೊಳಚೆ ನೀರನ್ನು ನೇರವಾಗಿ ತೋಡಿಗೆ ಬಿಡುವವರು ಕಡಿಮೆಯೇನಿಲ್ಲ. 

ವೆಟ್‌ವೆಲ್‌ ಶೀಘ್ರ ಮೇಲ್ದರ್ಜೆಗೆ
ಗುಂಡಿಬೈಲು ಭಾಗದಲ್ಲಿ ಕಲ್ಸಂಕ ತೋಡಿನ ಪಕ್ಕ ಇರುವ ವೆಟ್‌ವೆಲ್‌ನ್ನು ಸ್ಥಳಾಂತರಿಸಿ ಮೇಲ್ದರ್ಜೆಗೇರಿಸುವ ಯೋಜನೆ ಇದೆ. ಮೊನ್ನೆಯ ಸಿಡಿಲಿಗೆ ಪಂಪ್‌ ಕೆಟ್ಟು ಹೋಗಿರುವುದರಿಂದ ಕೊಳಚೆ ನೀರು ಕಲ್ಸಂಕ ತೋಡು ಸೇರುತ್ತಿದೆ. ಬೇರೆ ಸಮಸ್ಯೆ ಇಲ್ಲ. ಇದನ್ನು ಕೂಡಲೇ ಸರಿಪಡಿಸುತ್ತೇವೆ.
– ಶಶಿಧರ ಹೆಗ್ಡೆ, ಎಂಜಿನಿಯರ್‌, ನಗರಸಭೆ 

ಮೊದಲು ತೋಡು ತೆರವುಗೊಳಿಸಿ
ಕಲ್ಸಂಕ ತೋಡಿನ ಹೂಳೆತ್ತಿದರೆ ಕೃತಕ ನೆರೆ ಸಮಸ್ಯೆ ಪರಿಹಾರವಾಗುತ್ತದೆ. ಇದನ್ನು ಸಂಪರ್ಕಿಸುವ ತೋಡುಗಳನ್ನು ಕೂಡ ಸರಿಪಡಿಸಬೇಕಾಗಿದೆ. ತೋಡನ್ನು ಆವರಿಸಿರುವ ಕುರುಚಲು ಗಿಡ, ದಟ್ಟ ಪೊದೆಗಳನ್ನು ತೆರವುಗೊಳಿಸಬೇಕು. ವೆಟ್‌ವೆಲ್‌ನಿಂದ ಕೊಳಚೆ ನೀರು ಕಲ್ಸಂಕ ತೋಡು ಸೇರುವುದನ್ನು ನಿಲ್ಲಿಸಬೇಕು. ಅಧಿಕಾರಿಗಳು ಜನರ ಹಾದಿ ತಪ್ಪಿಸುತ್ತಿದ್ದಾರೆ.
– ಹರೀಶ್‌ ರಾಮ್‌, ನಗರ ಸಭೆ ಸದಸ್ಯರು, ಬನ್ನಂಜೆ ವಾರ್ಡ್‌ 

Advertisement

82ರ ಅನಂತರದ ನೆರೆ
1982ರಲ್ಲೊಮ್ಮೆ ಭಾರೀ ನೆರೆ ಬಂದಿತ್ತು. ಅನಂತರ ದೊಡ್ಡ ನೆರೆ ಬಂದದ್ದು ಮೊನ್ನೆಯೇ (ಮೇ 29). ಈ ಹಿಂದೆ ಕಲ್ಸಂಕ ತೋಡನ್ನು ಜೆಸಿಬಿಯಲ್ಲಿ ಸ್ವಲ್ಪವಾದರೂ ಕ್ಲೀನ್‌ ಮಾಡುತ್ತಿದ್ದರು. ಈ ಬಾರಿ ಮಾಡಿಲ್ಲ. ಇಲ್ಲಿ ಒಂದು ತಡೆಗೋಡೆ ನಿರ್ಮಿಸಿದ್ದರು. ಅದು ಕೂಡ ಮುರಿದು ಬಿದ್ದಿದೆ.
– ಮಾಧವ, ಮಠದಬೆಟ್ಟು ನಿವಾಸಿ 

– ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next