Advertisement
ರಾಮಾಯಣ ಮೊದಲುಗೊಂಡು, ಮಹಾಭಾರತದ ಆದಿಯಾಗಿ ನಾಡಿನೆಲ್ಲೆಡೆ ಹನುಮ ದೇವರ ಚರಿತ್ರೆಯನ್ನು ಮಹಾಗ್ರಂಥಗಳಲ್ಲಿ ಕಾಣುತ್ತೇವೆ. ಹನುಮನ ಆರಾಧಕರ ಸಂಖ್ಯೆಯಂತೂ ದಿನೇ ದಿನೆ ಹೆಚ್ಚುತ್ತಲೇ ಇದೆ. ಅಂಜನಿಪುತ್ರ ಹನುಮಾನ್‌ನನ್ನು ಕುರಿತು ನೆನೆದರೆ ಸಾಕು, ಕಷ್ಟಗಳೆಲ್ಲ ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಹೀಗಾಗಿ, ನಾಡಿನೆಲ್ಲೆಡೆ ಹನುಮನ ದೇವಾಲಯಗಳಿವೆ. ಅವುಗಳಲ್ಲಿ ಗೋಕಾಕ ಮತ್ತು ಮೂಡಲಗಿಯ ಮಾರ್ಗ ಮಧ್ಯದಲ್ಲಿ ಬರುವ ಕಲ್ಲೋಳಿ ಹನುಮಪ್ಪ ದೇಗುಲವೂ ಒಂದು. ಇದನ್ನು ಸಮರ್ಥ ರಾಮದಾಸರು ಪ್ರತಿಷ್ಟಾಪನೆ ಮಾಡಿದ್ದಾರೆ ಎಂಬ ಪ್ರತೀತಿ ಇದೆ. ಮಹಾರಾಷ್ಟ್ರ-ಪುಣೆ, ಮುಂಬೈ ಪ್ರಾಂತ್ಯಗಳ ಜನರೂ ಕೂಡ ಇಲ್ಲಿನ ಹನುಮನ ಭಕ್ತರಾಗಿದ್ದಾರೆ.
Related Articles
ದೇವಾಲಯದ ಒಳಗೆ ನಿಂತಿರುವ ಹನುಮಪ್ಪನ ಮೂರ್ತಿ ಗಮನ ಸೆಳೆಯುತ್ತದೆ. ಇಲ್ಲಿ ಕಾಟಮುತ್ತೆಪ್ಪ ಮತ್ತು ಅಜ್ಜಪ್ಪ ಸ್ವಾಮಿಗಳ ಸನ್ನಿಧಾನ ಎಂಬ ಎರಡು ಪುಟ್ಟ ದೇಗುಲಗಳೂ ಉಂಟು. ಭಕ್ತರಿಗೆ ವಸತಿ ಸಲುವಾಗಿ ದೇವಾಲಯದವರು ಒದಗಿಸುವ ಕೊಠಡಿಗಳು ಪ್ರಾಂಗಣದಲ್ಲಿ ಇವೆ.
Advertisement
ಈ ಹನುಮಪ್ಪನ ಪೂಜೆಯ ತೀರ್ಥಜಲವನ್ನು ಹಾಗೂ ಲಿಂಗದ ಪೂಜಾ ತೀರ್ಥದ ಜಲವನ್ನು ನಂಜು ನಿವಾರಕವಾಗಿ ಬಳಕೆ ಮಾಡುತ್ತಿರುವರು. ಆ ತೀರ್ಥದಲ್ಲಿ ಅಂತಹ ಶಕ್ತಿಯಿದೆ ಎಂದು ಹೇಳುವರು. ಅಷ್ಟೇ ಅಲ್ಲ, ಚಿಕ್ಕ ದಿಡ್ಡಿ ಬಾಗಿಲಿನ ಮುಂದಿರುವ ಬೋರಗಲ್‌ಗೆ ನಿಮ್ಮ ಶರೀರದ ತಲೆ, ಬೆನ್ನು, ಸೊಂಟ ಇತ್ಯಾದಿ ತಿಕ್ಕಿದರೆ(ಸ್ಪರ್ಶಿಸಿದರೆ) ಅವುಗಳಲ್ಲಿರುವ ವಾಯುಕಾರಕ ನೋವು ಮಾಯವಾಗುವುದೆಂಬ ನಂಬಿಕೆಯೂ ಇದೆ. ಹನುಮಪ್ಪ ದೇವರ ಬೃಹತ್ ಪಾದುಕೆಗಳನ್ನು ಭಕ್ತರು ತಲೆಯ ಮೇಲೆ ಇರಿಸಿಕೊಳ್ಳುವ ಮೂಲಕ ಆರ್ಶಿವಾದ ಪಡೆಯುವರು.
ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ ಜರುಗುವುದು. ಮಾರ್ಗಶಿರ ಮಾಸದಲ್ಲಿ ಪಲ್ಲಕ್ಕಿ ಉತ್ಸವವೂ ನಡೆಯುತ್ತದೆ. ಎರಡು ವಾರಗಳ ಕಾಲ ಅದ್ದೂರಿ ಜಾತ್ರೆ ಕೂಡ ಹನುಮಪ್ಪನಿಗೆ ಜರುಗುತ್ತದೆ. ಅಮಾವಾಸ್ಯೆ ಮತ್ತು ಶನಿವಾರಗಳಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹನುಮಪ್ಪನ ದರ್ಶನ ಪಡೆಯುತ್ತಾರೆ.
ವೈ.ಬಿ.ಕಡಕೋಳ