Advertisement

ಚಿನ್ನಾಭರಣ ಮಳಿಗೆಯಲ್ಲಿ ಕಳವಿಗೆ ಬಂದು ಸಿಕ್ಕಿಬಿದ್ದ ಕಳ್ಳಿಯರು!

11:41 AM Jan 16, 2017 | Team Udayavani |

ಬೆಂಗಳೂರು: ಬಸವನಗುಡಿಯಲ್ಲಿರುವ ಶ್ರೀ ಸಾಯಿಗೋಲ್ಡ್‌ ಪ್ಯಾಲೇಸ್‌ನ ಚಿನ್ನಾಭರಣ ಮಳಿಗೆಯಲ್ಲಿ ಕಳವು ಮಾಡಲು ಬಂದಿದ್ದ ಆಂಧ್ರ ಮೂಲದ ಮೂವರು ಮಹಿಳೆಯರನ್ನು ಭಾನುವಾರ ಮಳಿಗೆಯ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಆಂಧ್ರಪ್ರದೇಶದ ಕುಪ್ಪಂ ಮೂಲದ ಕಲಾವತಿ, ಲಲಿತಾ, ರತ್ನಾ ಬಂಧಿತರು. ಈ ಮೂವರು ಕಳೆದ ಅಕ್ಟೋಬರ್‌ನಲ್ಲಿ ಚಿನ್ನಾಭರಣ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದು ಓಲೆ ಕಳವು ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಮಳಿಗೆ ಮಾಲಿಕರು ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಭಾನುವಾರ ಪುನಃ ಕಳುವಿಗೆ ಬಂದಿದ್ದಾಗ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಾವತಿ, ಲಲಿತಾ ಮತ್ತು ರತ್ನಾ ಅವರು ಭಾನುವಾರ ಮಧ್ಯಾಹ್ನ ಗ್ರಾಹಕರ ಸೋಗಿನಲ್ಲಿ ಮಳಿಗೆಯ ಕೌಂಟರ್‌ಗೆ ತೆರಳಿ ಗಜೇಂದ್ರ ಎಂಬ ಸೇಲ್ಸ್‌ಮ್ಯಾನ್‌ ಬಳಿ ಚಿನ್ನಾರಣ ತೋರಿಸುವಂತೆ ಕೇಳಿದ್ದಾರೆ. ಹಲವು ಚಿನ್ನಾಭರಣವನ್ನು ತೆಗೆಸಿರುವ ಮಹಿಳೆಯರು ಯಾವ ಒಡವೆಯನ್ನೂ ಆಯ್ಕೆ ಮಾಡಲಿಲ್ಲ. ಬಳಿಕ ಮತ್ತಷ್ಟು ಒಡವೆ ತೆಗೆಯುವಂತೆ ಕೇಳಿದ್ದಾರೆ.

ಮಹಿಳೆಯರ ನಡವಳಿಕೆ ಗಮನಿಸಿದ ಸೇಲ್ಸ್‌ಮ್ಯಾನ್‌ ಕಳೆದ ಬಾರಿ ಮಳಿಗೆಗೆ ಬಂದು ಕಳವು ಮಾಡಿದ್ದ ಮಹಿಳೆಯರೇ ಇವರಿರಬಹುದು ಎಂದು ಅನುಮಾನಗೊಂಡು ಇತರೆ ಸಿಬ್ಬಂದಿಯ ನೆರವಿನೊಂದಿಗೆ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಕಳವು ಪ್ರಕರಣದ ಸಿಸಿವಿಟಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಕಳವಿಗೆ ಬಂದಿದ್ದು ಇದೇ ಮಹಿಳೆಯರು ಎಂಬುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಬಂಧಿತ‌ ಆರೋಪಿಗಳು ಬೇರೆ ಮಳಿಗೆಗಳಲ್ಲೂ ಕಳವು ಮಾಡಿರುವ ಶಂಕೆ ಇದ್ದು, ಆ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಕುಪ್ಪುಂನಲ್ಲಿರುವ ಲಕ್ಷಿ ಎಂಬಾಕೆ ನಕಲಿ ಚಿನ್ನಾಭರಣಗಳನ್ನು ತಯಾರಿಸಿ, ಮಹಿಳೆಯರಿಗೆ ಕೊಟ್ಟು ಅದನ್ನು ಚಿನ್ನಾಭರಣ ಮಳಿಗೆಯಲ್ಲಿಟ್ಟು ಅಸಲಿ ಚಿನ್ನಾಭರಣ ಕದಿಯುವಂತೆ ಸೂಚಿಸುತ್ತಿದ್ದಳು ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಹಬ್ಬದ ದಿನಗಳಲ್ಲಿ ಹೆಚ್ಚು ಗ್ರಾಹಕರಿರುತ್ತಾರೆ, ಸುಲಭವಾಗಿ ಕಳವು ಮಾಡಬಹುದೆಂದು ಹಬ್ಬದ ದಿನಗಳಲ್ಲಿ ಕಳವಿಗೆ ಬಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕದ್ದು ಪುನಃ ಮಳಿಗೆಗೆ ಬಂದಿದ್ರು!
ಇದೇ ಮೂವರು ಮಹಿಳೆಯರು 2016ರ ಅ. 31ರಂದು ಶ್ರೀಸಾಯಿಗೋಲ್ಡ್‌ ಪ್ಯಾಲೇಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದರು. ಮಳಿಗೆಯಲ್ಲಿದ್ದ ಸೇಲ್ಸ್‌ಗರ್ಲ್ಸ್ಗೆ ಚಿನ್ನಾಭರಣ ತೋರಿಸುವಂತೆ ಹೇಳಿದ್ದರು.  ಕೆಲವು ಒಡವೆಗಳನ್ನು ಪಡೆದಿದ್ದ ಮಹಿಳೆಯರು ಅವುಗಳನ್ನು ಪರಿಶೀಲಿಸುತ್ತಿದ್ದರು.

ಈ ವೇಳೆ ಮತ್ತಷ್ಟು ಒಡವೆಗಳನ್ನು ತೋರಿಸುವಂತೆ ಹೇಳಿದ್ದು, ಸೇಲ್ಸ್‌ಗರ್ಲ್ ಹಿಂದಿರುಗಿ ಬೇರೆ ಚಿನ್ನಾಭರಣ ತೋರಿಸುವಷ್ಟರಲ್ಲಿ ಓರ್ವ ಮಹಿಳೆ ಅಸಲಿ ಚಿನ್ನಾಭರಣಗಳನ್ನು ತಮ್ಮ ಬ್ಯಾಗ್‌ಗೆ ಹಾಕಿಕೊಂಡಿದ್ದು, ಇನ್ನಿಬ್ಬರು ನಕಲಿ ಒಡವೆಗಳನ್ನು ಮಳಿಗೆಯ ಬಾಕ್ಸ್‌ನಲ್ಲಿ ಇಟ್ಟು ಬಳಿಕ ಸ್ಥಳದಿಂದ ಪರಾರಿಯಾಗಿದ್ದರು.

ಅನುಮಾನದಿಂದ ಮಳಿಗೆಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಮೂವರು ಮಹಿಳೆಯರ ಕೈಚಳಕ ಬಯಲಾಗಿತ್ತು. ಈ ಬಾರಿಯೂ ಮೂವರು ಮಹಿಳೆಯರು ಬಂದು ಹಿಂದಿನಂತೆಯೇ ವರ್ತಿಸಿದ್ದು ಮಳಿಗೆ ಸಿಬ್ಬಂದಿಯ ಅನುಮಾನಕ್ಕೆ ಕಾರಣವಾಗಿ ಕಳ್ಳರು ಸಿಕ್ಕಿಬೀಳುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next