ಬಳ್ಳಾರಿ: ಕೋವಿಡ್ ಸೋಂಕು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರಿದ್ದು, ಅದನ್ನು ಸರಿದೂಗಿಸಲು ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಅದಕ್ಕಾಗಿ ಹೊಸದಾಗಿ ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ರೂಪಿಸಿದೆ. ಅವಧಿಗೆ ಮುನ್ನ ಮೇ 16 ರಂದು ಪ್ರಾಥಮಿಕ, ಪ್ರೌಢಶಾಲೆಗಳನ್ನು ಅದ್ಧೂರಿಯಾಗಿ ಆರಂಭಿಸುವುದರೊಂದಿಗೆ ಅಂದಿನಿಂದಲೇ ಕಾರ್ಯಕ್ರಮ ಅನುಷ್ಠಾನಕ್ಕೆ ಬರಲಿದ್ದು, ಅವಳಿ ಜಿಲ್ಲೆಗಳ ಎಲ್ಲ ಶಿಕ್ಷಕರಿಗೂ ವಿಶೇಷ ತರಬೇತಿ ನೀಡಲಾಗಿದೆ.
ಕಳೆದ ಎರಡು ವರ್ಷಗಳಿಂದ ಬೆಂಬಿಡದೆ ಕಾಡಿದ ಕೋವಿಡ್ ಮಹಾಮಾರಿ ಸೋಂಕು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಭೌತಿಕ ತರಗತಿಗಳು ನಡೆಯದೆ ಮಕ್ಕಳ ಕಲಿಕೆಯಲ್ಲಿ ಅಂತರ ಉಂಟಾಗಿದ್ದು, ಅದನ್ನು ಸರಿದೂಗಿಸಲು ಆನ್‌ಲೈನ್ ತರಗತಿ, ವಿದ್ಯಾಗಮ ಮೂಲಕ ಮಕ್ಕಳು ಇದ್ದಲ್ಲಿಗೆ ಹೋಗಿ ವಿದ್ಯೆ ಕಲಿಸಿದರೂ, ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗಲಿಲ್ಲ. ಅಲ್ಲದೇ, ವರ್ಷದಲ್ಲಿ ಮಕ್ಕಳಿಗೆ ಏನೇನು ಕಲಿಸಬೇಕಿತ್ತು. ಅದಷ್ಟನ್ನು ಸುದೀರ್ಘವಾಗಿ ಪಾಠ ಮಾಡಲಾಗಿಲ್ಲ. ಕೇವಲ ಪರೀಕ್ಷೆಗೆ ಬೇಕಾದಷ್ಟು ಮಾತ್ರ ಕಲಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದು, ಅದನ್ನು ಸರಿದೂಗಿಸುವುದು ‘ಕಲಿಕಾ ಚೇತರಿಕೆ’ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಶಾಲಾ ವಾತಾವರಣಕ್ಕೆ ಹೊಂದಾಣಿಕೆ
ಈ ಮೊದಲು ಪ್ರತಿವರ್ಷ ಎರಡು ತಿಂಗಳು ಬೇಸಿಗೆ ರಜೆ ಮುಗಿದು ಮೇ 26, 28 ರಂದು ಪ್ರಾಥಮಿಕ, ಪ್ರೌಢಶಾಲೆಗಳನ್ನು ತೆರೆಯಲಾಗುತ್ತಿತ್ತು. ಆದರೆ, ಈ ಬಾರಿ ನಿಗದಿತ ಅವಧಿಗೆ 15 ದಿನ ಮುನ್ನವೇ ಮೇ 16 ರಿಂದಲೇ ಶಾಲೆಗಳನ್ನು ತೆರೆಯಲಾಗುತ್ತಿದೆ. ಎರಡು ವರ್ಷಗಳಿಂದ ಶಾಲೆಗಳಿಂದ ದೂರ ಉಳಿದು, ಮನೆಯಂಗಳದಲ್ಲಿ ಆಟಕ್ಕೆ ಸೀಮಿತವಾಗಿರುವ ಮಕ್ಕಳನ್ನು ಕರೆತಂದು ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡುವುದು. ಮಕ್ಕಳ ಆಸಕ್ತಿಯಂತೆ ಕಲಿಕೆ ಸೇರಿ ಆಟಕ್ಕೆ ಮುಕ್ತ ಅವಕಾಶ ಕಲ್ಪಿಸುವುದು. ಈ ಮೂಲಕ ಅವರಲ್ಲಿನ ಭಯ ಹೋಗಲಾಡಿಸಿ, 15 ದಿನಗಳಲ್ಲಿ 1-3ನೇ ತರಗತಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಹಿಂದೆ ಕಲಿಸದ ವಿಷಯಗಳನ್ನು ಪುನಃ ಬೋಧಿಸುವುದರ ಜತೆಗೆ 1-9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ತಾವು ಕಲಿತ ಹಿಂದಿನ ವಿಷಯಗಳನ್ನು ಪುನಃ ಅಭ್ಯಾಸ ಮಾಡಿಸಿ, ಹಿಂದಿನ ಅಂತರವನ್ನು ಸರಿದೂಗಿಸಲಾಗುವುದು ಎಂದು ಡಯಟ್ ಪ್ರಾಚಾರ್ಯೆ ಹನುಮಕ್ಕನವರ್ ತಿಳಿಸಿದ್ದಾರೆ.
Related Articles
ಶಿಕ್ಷಕರಿಗೆ ತರಬೇತಿ
1-9ನೇ ತರಗತಿ ವಿದ್ಯಾರ್ಥಿಗಳಿಗೆ ಹಿಂದಿನ ಎರಡು ವರ್ಷಗಳಲ್ಲಿ ಕಲಿಯದ ವಿಷಯಗಳನ್ನು ಈ ಬಾರಿ ಕಲಿಸಬೇಕಿದ್ದು, ಇದಕ್ಕಾಗಿ ಬಳ್ಳಾರಿ/ ವಿಜಯನಗರ ಅವಳಿ ಜಿಲ್ಲೆಗಳ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಪ್ರತ್ಯೇಕವಾಗಿ ತರಬೇತಿ ನೀಡಲಾಗಿದೆ. ಅದಕ್ಕಾಗಿ ವಿಶೇಷ ಕೈಪಿಡಿಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಹಿಂದಿನ ಎರಡು ವರ್ಷಗಳ ಕಲಿಕಾ ಪಠ್ಯಗಳು, ಪ್ರಸ್ತುತ ವರ್ಷದ ಅಗತ್ಯ ಪಠ್ಯಗಳನ್ನು ಆಧರಿಸಿ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಲಾಗಿದ್ದು, ಅದರಂತೆ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಲಿದ್ದು, ಮಕ್ಕಳಿಗೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂಬುದನ್ನು ಅರಿಯಲು ಮೌಲ್ಯಮಾಪನವೂ ನಡೆಯಲಿದೆ ಎಂದು ಶಿಕ್ಷಕರು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ
ಎರಡು ವರ್ಷಗಳ ಕೋವಿಡ್ ಸೋಂಕಿನ ಬಳಿಕ ಮೇ 16 ರಂದು ಪೂರ್ಣ ಪ್ರಮಾಣದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳನ್ನು ತೆರೆಯಲಾಗುತ್ತಿದ್ದು, ಅದ್ಧೂರಿಯಗಿ ಚಾಲನೆ ನೀಡಲಾಗುತ್ತಿದೆ. ಇದಕ್ಕಾಗಿ ಮೇ 13, 14 ರಂದು ಶಾಲೆಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಶಿಕ್ಷಕರಿಗೆ ಸೂಚಿಸಿದೆಯಾದರೂ, ಕೆಲ ಶಾಲೆಗಳಲ್ಲಿ ಈಗಾಗಲೇ ಸ್ವಚ್ಛತಾ ಕಾರ್ಯ ಚಾಲನೆ ಪಡೆದುಕೊಂಡಿದೆ. ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮೇ 16 ರಂದು ಮೊದಲ ದಿನ ಶಾಲೆಗೆ ಬರುವ ಮಕ್ಕಳಿಗೆ ಹೂ, ಸಿಹಿ ತಿನಿಸು ನೀಡಿ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ.
ಕೋವಿಡ್‌ನಿಂದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಭೌತಿಕ ತರಗತಿಗಳು ನಡೆಯದೆ ಮಕ್ಕಳಿಗೆ ಕಲಿಕೆಯಲ್ಲಿ ಅಂತರ ಉಂಟಾಗಿದೆ. ಈ ಅಂತರವನ್ನು ಸರಿದೂಗಿಸುವ ಸಲುವಾಗಿ ಪ್ರಸಕ್ತ ವರ್ಷ 15 ದಿನಗಳ ಮುನ್ನ ಶಾಲೆಗಳನ್ನು ತೆರೆದು, ‘ಕಲಿಕಾ ಚೇತನ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಅಂದು ತಳಿರು ತೋರಣಗಳಿಂದ ಶಾಲೆಗಳನ್ನು ಸಿಂಗರಿಸಿ, ಹೂವು, ಸಿಹಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗುತ್ತದೆ. – ಹನುಮಕ್ಕನವರ್ ಮೇ ಡಯಟ್ ಪ್ರಾಚಾರ್ಯರು, ಬಳ್ಳಾರಿ
ವೆಂಕೋಬಿ ಸಂಗನಕಲ್ಲು