ಜಗ್ಗೇಶ್ ನಾಯಕರಾಗಿರುವ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ನವೆಂಬರ್ 22 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ನವೆಂಬರ್ 15 ರಂದು ತೆರೆಕಾಣಬೇಕಿತ್ತು. ಆದರೆ, ಈಗ ಚಿತ್ರ ಒಂದು ವಾರ ಮುಂದಕ್ಕೆ ಹೋಗಿದ್ದು, ನ.22 ರಂದು ಬಿಡುಗಡೆಯಾಗುತ್ತಿದೆ. ಕವಿರಾಜ್ ನಿರ್ದೇಶನದ ಈ ಚಿತ್ರ ನೈಜ ಘಟನೆಯನ್ನು ಆಧರಿಸಿ ಮಾಡಲಾಗಿದೆ.
ದುಬೈನಲ್ಲಿ ಎಂಟನೆ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯೇ ನಿರ್ದೇಶಕರಿಗೆ ಕಥೆ ರಚಿಸಲು ಕಾರಣವಾಯಿತಂತೆ. ಆ ಅಂಶವನ್ನಿಟ್ಟುಕೊಂಡು ಕವಿರಾಜ್ ಈ ಸಿನಿಮಾ ಮಾಡಿದ್ದಾರೆ. ಹಾಗಂತ ಇದು ಗಂಭೀರ ಸಿನಿಮಾವಲ್ಲ. ಚಿತ್ರದಲ್ಲಿ ಸಾಕಷ್ಟು ಮನರಂಜನೆಯ ಅಂಶಗಳನ್ನು ಸೇರಿಸಲಾಗಿದೆ. ಜಗ್ಗೇಶ್ ಅವರು ಈ ಚಿತ್ರದಲ್ಲಿ ಕನ್ನಡ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಮರ್ಥ್ಯ ಮೀರಿ ಮಕ್ಕಳನ್ನು ದೊಡ್ಡ ಶಾಲೆಗೆ ಸೇರಿಸುವ ಪೋಷಕರು, ಶಿಕ್ಷಣ ವ್ಯವಸ್ಥೆಯ ದುರುಪಯೋಗ, ಮಧ್ಯಮ ವರ್ಗದ ತೊಂದರೆ ಸೇರಿದಂತೆ ಹಲವು ಅಂಶಗಳ ಸುತ್ತ ಈ ಸಿನಿಮಾ ಸಾಗುತ್ತದೆಯಂತೆ. ಗಂಭೀರ ವಿಷಯವನ್ನು ಹಾಸ್ಯಮಯವಾಗಿ ಹೇಳುವ ಜೊತೆಗೆ ಚಿತ್ರದಲ್ಲೊಂದು ಸಂದೇಶವನ್ನು ನೀಡಲಾಗಿದೆಯಂತೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಚಿತ್ರಕ್ಕೆ ಶರಣ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಈ ಹಿಂದೆ ಶರಣ್ ಅವರ “ವಿಕ್ಟರಿ’ ಚಿತ್ರಕ್ಕೆ ಜಗ್ಗೇಶ್ ಧ್ವನಿ ನೀಡಿದ್ದರು. ಈಗ ಶರಣ್ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರಕ್ಕೆ ಧ್ವನಿ ನೀಡಿದ್ದಾರೆ.
ಚಿತ್ರದಲ್ಲಿ ಮೇಘನಾ ಗಾಂವ್ಕರ್ ನಾಯಕಿಯಾಗಿ ನಟಿಸಿದ್ದಾರೆ. ಇವರ ಜೊತೆಗೆ ಜಗ್ಗೇಶ್ ಅವರಿಗೆ ಇನ್ನೂ 21 ನಾಯಕಿಯರು ಸಾಥ್ ನೀಡಿದ್ದಾರೆ. ಚಿತ್ರಕ್ಕಾಗಿ ಕವಿರಾಜ್ ಪ್ರಮೋಶನ್ ಸಾಂಗ್ ಮಾಡಿದ್ದು, ಇದರಲ್ಲಿ ಕನ್ನಡದ ನಟಿಯರಾದ ರಚಿತಾ ರಾಮ್, ಹರಿಪ್ರಿಯಾ, ಕಾರುಣ್ಯ, ರೂಪಿಕಾ, ಅದಿತಿ ಪ್ರಭುದೇವ, ಅದಿತಿ ರಾವ್, ಸಂಯುಕ್ತಾ ಹೊರನಾಡು, ಸೋನು ಗೌಡ, ದಿಶಾ ಪೂವಯ್ಯ, ನಿಶ್ವಿಕಾ ನಾಯ್ಡು, ಶುಭಾ ಪೂಂಜಾ ಸೇರಿದಂತೆ ಒಟ್ಟು 21 ಮಂದಿ ನಟಿಯರು ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ.