Advertisement
ಜೀವನ ಅನ್ನೋದೇ ಹೀಗೆ ನೋಡಿ. ಎಲ್ಲರ ಬದುಕಿನೊಳಗೂ ಒಂದಿಷ್ಟು ಖುಷಿಯ ವಿಚಾರಗಳು ಚಾರಣ ಹೊಡೆದಿರುತ್ತವೆ. ಅದರೊಟ್ಟಿಗೆ ಒಂದಿಷ್ಟು ಬೇಸರಗಳೂ ನಮ್ಮನ್ನು ಅದೇ ಬೆಟ್ಟದಿಂದಲೇ ಕಾಲು ಜಾರಿಸಿ, ಬೀಳಿಸಿರುತ್ತವೆ. ಪ್ರತಿ ಭಾವಜೀವಿಯ ಬೆನ್ನ ಮೇಲೆಯೂ ಖುಷಿ- ಬೇಸರ, ನೋವು- ನಲಿವುಗಳ ಸಮಾನ ಲೆಕ್ಕದ ಒಂದು ಬ್ಯಾಗ್ ಇದ್ದೇ ಇರುತ್ತೆ. ಇಂಥದ್ದೇ ಒಂದು ಭಾವ ತೀರದ ಯಾನ, ಕಾಲೇಜಿನ ಲೈಫು. ಇಲ್ಲಿ ಇಟ್ಟ ಹೆಜ್ಜೆಗಳು, ಹೋದ ದಾರಿಗಳು, ಯಾವುದೂ ಶೂನ್ಯ ಸಂಪಾದನೆ ಅಲ್ಲ. ಅಪಾರ ಅನುಭವದ ಬೆಟ್ಟವನ್ನು ಮುಂದಿಡುತ್ತವೆ. ಬದುಕಿನಲ್ಲಿ ಅಂಥ ಒಂದೊಳ್ಳೆ ನೆನಪು ದಾಖಲಾಗಲಿಯೆಂಬ ಉದ್ದೇಶದಿಂದ, ನಾನು ಮತ್ತು ಗೆಳೆಯರೆಲ್ಲ ಒಟ್ಟಿಗೆ ಟ್ರಿಪ್ ಹೋಗುವ ಬಗ್ಗೆ ಯೋಚಿಸಿದೆವು. ಆಗ ಹೊಳೆದಿದ್ದೇ, ದಾಂಡೇಲಿಯ ಹೊಳೆಯ ಸಾಲುಗಳು.
Related Articles
ನಿಜ ಅಲ್ವಾ? ನೀರನ್ನು ಕಂಡರೆ, ಯಾರಿಗೇ ಆದರೂ ಮೀನಾಗುವ ಬಯಕೆ ಹುಟ್ಟುತ್ತೆ. ನಮ್ಮನ್ನು ನೀರಿಗೆ ಇಳಿಸಿದ್ದು ಕೂಡ ಅದೇ ಪುಳಕವೇ. ಅಲ್ಲಿ ಆಡಿದ ತುಂಟಾಟಕ್ಕೆ ಲೆಕ್ಕವೇ ಇಲ್ಲ. ನದಿಯೊಳಗೆ ಮುಳುಗೋದು, ಏಳ್ಳೋದು, ಅಲೆಗಳು ಬಂದಾಗ ಹೆದರಿ ಓಡೋದು, ಪಕ್ಕದಲ್ಲಿ ಇದ್ದವರನ್ನು ಗಟ್ಟಿಯಾಗಿ ಹಿಡ್ಕೊಳ್ಳೋದು ಇದೇ ಆಗಿತ್ತು. ಒಮ್ಮೆಯಂತೂ ಅಲೆಗಳು ಜೋರಾಗಿ ಅಪ್ಪಳಿಸಿದಾಗ, ಮುಳುಗಿ ನೀರು ಕುಡಿದು, ಕಂಗಾಲಾಗಿ ಹೋಗಿದ್ದೆ.
Advertisement
ಕಾಳಿ ಬಿಡಲಿಲ್ಲ…ದಾಂಡೇಲಿಯ ಬಹುಮುಖ್ಯ ಆಕರ್ಷಣೆಯೇ ಕಾಳಿ ನದಿ. ನನಗಂತೂ ಆ ನದಿಯನ್ನು ಬಿಟ್ಟು ಬರುವ ಮನಸ್ಸೇ ಆಗಲಿಲ್ಲ. ಬೋರ್ಗರೆಯುವ ನಿಸರ್ಗ ರಮಣೀಯ ಸೌಂದರ್ಯವನ್ನು ಸವಿಯುತ್ತಾ ಅಲ್ಲೇ ತಪಸ್ಸಿಗೆ ಕೂರುವ ಮನಸ್ಸಾಗಿತ್ತು. ಬೋಟಿಂಗ್ ಆಡಲೂ ಮುಂದಾದೆವು. ಆಗ ನೋಡಿ, ಒಳಗೊಳಗೇ ಪುಕುಪುಕು. ನಾನು ಬೇಡವೆಂದರೂ, ನನ್ನ ಫ್ರೆಂಡ್ಸೆಲ್ಲ ಒತ್ತಾಯಿಸಿ, ಕರಕೊಂಡು ಹೋದರು. ನಾನಂತೂ ಬೋಟಿಂಗ್ ವೇಳೆ ಉಸಿರು ಬಿಗಿಹಿಡಿದು ಕುಳಿತಿದ್ದೆ. ನೀರಿನ ಆ ಸಪ್ಪಳ, ನಿರ್ಜನ, ನಾವಷ್ಟೇ ತೇಲಾಡುತ್ತಿರುವಂಥ ಅನುಭವ… ಇವೆಲ್ಲದರ ನಡುವೆ ನಾನೇನಾದ್ರೂ ಬಿದಿºಟ್ರೆ ಎಂಬ ಭಯದ ಭೂತ. ನನ್ನ ಪುಕ್ಕಲುತನ ಕಂಡು, ಫ್ರೆಂಡ್‌ಗಳು ರೇಗಿಸುತ್ತಿದ್ದರು. ಬೋಟಿಂಗ್ ಮುಗಿಸಿ ಬಂದಿದ್ದು, ನಿಜಕ್ಕೂ ನನ್ನ ಮರುಜನ್ಮ. ಇಲ್ಲಿ ನಮಗೆ ಇನ್ನೊಂದು ಖುಷಿ ಕೊಟ್ಟಿದ್ದು, ದಾಂಡೇಲಿಯ ಅತ್ಯಂತ ಹಳೆಯ ದೇಗುಲಗಳಲ್ಲಿ ಒಂದಾದ, ದಂಡೇಲಪ್ಪನ ದರುಶನ. ಹಸಿರು, ಬೆಟ್ಟ- ಕಣಿವೆಗಳ ನಡುವೆ, ಭಕ್ತಿ ಭಾವದಲ್ಲೂ ಕಳೆದುಹೋದ ದಿವ್ಯ ಸುಖ ಸಿಕ್ಕಿತು.
ಹೀಗೆ ರಾಶಿ ರಾಶಿ ನೆನಪುಗಳನ್ನು ಹೊತ್ತು, ನಾವು ದಾಂಡೇಲಿಯಿಂದ ವಾಪಸಾದೆವು. – ಲಕ್ಷ್ಮೀ ಅರ್ಜುನ ಮೊರಬ, ವಿಜಯಪುರ