Advertisement

ಸಿದ್ಧಾಂತ ಹೆಸರಲ್ಲಿ ಅಡ್ಡ ಗೋಡೆ ಕಟ್ಟಬೇಡಿ

03:23 PM Feb 14, 2021 | Team Udayavani |

ಕಲಬುರಗಿ: ಯಾವುದೇ ಸಿದ್ಧಾಂತದ ಹೆಸರಲ್ಲಿ ಅಡ್ಡಗೋಡೆ ಕಟ್ಟಿಕೊಳ್ಳಬಾರದು. ಸಿದ್ಧಾಂತದೊಳಗೆ ಎಲ್ಲರನ್ನು ಒಳಗೊಳ್ಳುವ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕೆಂದು ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಪ್ರೊ| ಶಿವಗಂಗಾ ರುಮ್ಮಾ ಹೇಳಿದರು.

Advertisement

ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ “ಕಾಮ್ರೆಡ್‌ ಮಾರುತಿ ಮಾನ್ಪಡೆ ಒಂದು ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮೊಳಗೆ ಒಳಗೊಳ್ಳುವಿಕೆ ಇಲ್ಲದೇ ಇದ್ದರೆ ಸೋಲು ಖಂಡಿತ. ಇಂದು ಇಂತಹ ಸೋಲುಗಳನ್ನು ಕಾಣುತ್ತಿದ್ದೇವೆ. ಮಾರುತಿ ಮಾನ್ಪಡೆ ತಮ್ಮ ಸಿದ್ಧಾಂತದಲ್ಲೇ ಅಪಾರ ನಂಬಿಕೆ ಇಟ್ಟುಕೊಂಡೇ ಎಲ್ಲರನ್ನೂ ಒಳಗೊಳ್ಳವಿಕೆ ಗುಣ ಹೊಂದಿದ್ದರು. ಅದು ಅವರ ತಾಯ್ತನದ ವ್ಯಕ್ತಿತ್ವವಾಗಿತ್ತು. ಅವರನ್ನು ಕಳೆದುಕೊಂಡ ಮೂರೇ ತಿಂಗಳಲ್ಲಿ ಅವರ ಶೂನ್ಯತೆ ಎಲ್ಲರಿಗೂ ಗೊತ್ತಾಗುತ್ತಿದೆ ಎಂದರು.

ಹೈದರಾಬಾದ್‌ ಕರ್ನಾಟಕ ಜನಪರ ಸಂಘರ್ಷ ಸಮಿತಿ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ಮಾತನಾಡಿ, ಮಾರುತಿ ಮಾನ್ಪಡೆ ಸಂಘಟಿತ ಹೋರಾಟ ಮಾಡಿದ ವ್ಯಕ್ತಿ. ಅವರು ಕೇವಲ ಒಂದು ವರ್ಗದ ಏಳ್ಗೆ ಮಾತ್ರ ಬಯಸಿದವರಲ್ಲ. ಅವರು ಇಡೀ ಮಾನವ ಅಭಿವೃದ್ಧಿಯ ಪ್ರಖರ ವಿಚಾರ ಹೊಂದಿದ್ದರು ಎಂದು ಹೇಳಿದರು.

ತುಳಿತಕ್ಕೆ ಒಳಗಾದವರು ಮತ್ತು ಶೋಷಿತರ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದರು. ಒಮ್ಮೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ
ಮಂಡಳಿ ಸಭೆಗೆ ಅವರು ಬಂದಿದ್ದರು. ಆಗ 371 (ಜೆ)ನೇ ಕಲಂ ವಿಷಯ ಕುರಿತು ಮಾತ್ರ ಯಾಕೆ ಚರ್ಚೆ ಮಾಡುತ್ತೀರಿ? ಮಂಡಳಿಯಲ್ಲಿ ಶ್ರಮಿಕರು, ಶೋಷಿತರ ವಿಷಯಗಳ ಬಗ್ಗೆಯೂ ಚರ್ಚೆ ಮಾಡಿ. ಅವರ ಕುರಿತು ವಿಚಾರ ಮಾಡಿ. ಮಾನವ ಅಭಿವೃದ್ಧಿಯಾದರೆ, ಈ ಭಾಗದ ಪ್ರಗತಿ ತಾನಾಗಿಯೇ ಹೊಂದಲಿದೆ ಎನ್ನುವ ವಿಚಾರ ಮಂಡಿಸಿದ್ದರು ಎಂದು ಸ್ಮರಿಸಿದರು.

Advertisement

ಪದ್ಮಶ್ರೀ ಪುರಸ್ಕೃತ, ಮಹಾರಾಷ್ಟ್ರದ ಮಾಜಿ ಎಂಎಲ್‌ಸಿ ಲಕ್ಷ್ಮಣ ಮಾನೆ ಮಾತನಾಡಿ, ಮಾನ್ಪಡೆ ಬಡತನ ಕುಟುಂಬದಿಂದ ಬಂದವರು. ಆದ್ದರಿಂದ ಅವರು ಬಡವರ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದರು. ಈಗ ಬಡವರು, ಶ್ರಮಿಕರಷ್ಟೇ ಅಲ್ಲ, ಎಲ್ಲರಿಗೂ ರಕ್ಷಣೆಯಾಗಿರುವ ಸಂವಿಧಾನವೂ ಸಂಕಷ್ಟದಲ್ಲಿದೆ. ಹೀಗಾಗಿ ಮಾನ್ಪಡೆ ಅವರಂತವರ ವಿಚಾರಗಳನ್ನು ಮತ್ತಷ್ಟು ಪ್ರಬಲಗೊಳಿಸುವ ಅನಿವಾರ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾರುತಿ ಮಾನ್ಪಡೆ ಪುತ್ರ ಸುನೀಲ ಮಾನ್ಪಡೆ ಮಾತನಾಡಿ, ನನ್ನ ತಂದೆ ನಮ್ಮ ಕುಟುಂಬಕ್ಕೆ ನಿಮ್ಮೆರಲ್ಲ ಪ್ರೀತಿ, ಕಾಳಜಿ ಬಿಟ್ಟು ಹೋಗಿದ್ದಾರೆ. ಅವರಿಗೆ ತೋರಿದ ಪ್ರೀತಿ, ಕಾಳಜಿ ನಮ್ಮ ಕುಟುಂಬಕ್ಕೂ ತೋರಿ ಎಂದು ಹೇಳಿದರು.

ಕಲಾವಿದ ವಿ.ಜಿ.ಅಂದಾನಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶೌಕತ್‌ ಅಲಿ ಆಲೂರ, ರಾಯಣ್ಣ ಹೊನ್ನರೆಡ್ಡಿ, ಆರ್‌.ಚನ್ನಬಸು, ಸೈಯದ್‌ ಇಬ್ರಾಹಿಂ, ಕೆ.ಡಿ.ಭಂಟನೂರ, ಈಶ್ವರಚಂದ್ರ, ಹಳ್ಳೆಪ್ಪ ಹವಲ್ದಾರ, ಈರಣ್ಣಗೌಡ ಹೊಸಮನಿ, ಬಸವರಾಜ ಪಾಟೀಲ ಮೈಲಾಪುರ ಮತ್ತು ಗ್ರಾಮ ಪಂಚಾಯಿತಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನೂರಾರು ಜನರು ಪಾಲ್ಗೊಂಡಿದ್ದರು.

ಓದಿ :ಶಿಥಿಲಾವಸ್ಥೆಯ ಕಚೇರಿಯನ್ನು ಸ್ವತಃ ಸ್ವಚ್ಚಗೊಳಿಸಿದ ಕಲಬುರಗಿ ತಹಶೀಲ್ದಾರ್

Advertisement

Udayavani is now on Telegram. Click here to join our channel and stay updated with the latest news.

Next