ಕಲಬುರಗಿ: ಕೋವಿಡ್ ಸೋಂಕಿನ ಹಾವಳಿಯಿಂದಾಗಿ ಎರಡನೇ ಬಾರಿಯ ಲಾಕ್ ಡೌನ್ ನಂತರ ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನಜೀವನ ಸೋಮವಾರದಿಂದ ಮತ್ತೆ ಸಹಜ ಸ್ಥಿತಿಗೆ ಬಂದಿದೆ. ಕೊರೊನಾ ಪಾಸಿಟಿವ್ ಪ್ರಮಾಣ ತಗ್ಗಿದ ಪರಿಣಾಮ ಸರ್ಕಾರ ಎರಡನೇ ಹಂತದ ಅನ್‌ಲಾಕ್ ಘೋಷಿಸಿದ್ದರಿಂದ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ ಸಿಕ್ಕಂತೆ ಆಗಿದೆ.
ಕೋವಿಡ್ ಎರಡನೇ ಅಲೆ ಶುರುವಾದ ಕಾರಣ ಏ.10ರಿಂದ ನೈಟ್ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಜಾರಿ ಮೂಲಕ ಸಂಪೂರ್ಣ ಲಾಕ್‌ಡೌನ್ ಅನುಷ್ಠಾನ ಮಾಡಲಾಗಿತ್ತು. ಇದೀಗ ಸೋಂಕಿನ ತೀವ್ರತೆ ಕಡಿಮೆಯಾಗಿದ್ದರಿಂದ ಮತ್ತೆ ಲಾಕ್‌ಡೌನ್ ತೆರವು ಮಾಡಲಾಗಿದ್ದು, ಸೋಮವಾರದಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ 5ರವರೆಗೆ ಬಹುತೇಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಜನರು ಮನೆಗಳಿಂದ ಹೊರ ಬಂದು ತಮ್ಮ ನಿತ್ಯದಲ್ಲಿ ಕಾರ್ಯಗಳಲ್ಲಿ ಮುಕ್ತವಾಗಿ ತೊಡಗಿಸಿಕೊಂಡರು.
ಎಲ್ಲ ಹೋಟೆಲ್, ರೆಸ್ಟೋರೆಂಟ್, ಉಪಹಾರ ಗೃಹಗಳು, ಬಾರ್‌ಗಳು ಮತ್ತು ಕ್ಲಬ್‌ಗಳಲ್ಲಿ ಮದ್ಯ ಪೂರೈಕೆ ಹೊರತುಪಡಿಸಿ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಿದವು. ದಿನದ 24 ಗಂಟೆ ಕೂಡ ಹೋಮ್ ಡೆಲಿವರಿಗೆ ಅನುಮತಿ ಕೊಡಲಾಗಿದೆ. ಲಾಡ್ಜ್ ಗಳಲ್ಲೂ ಶೇ.50ರಷ್ಟು ಭರ್ತಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಹೋಟೆಲ್‌ಗಳ ಮುಂದೆ ಅಧಿಕ ಜನರು ಕಂಡು ಬಂದರು.
ನಿಟ್ಟುಸಿರು ಬಿಟ್ಟ ಪ್ರಯಾಣಿಕರು: ಸಾರಿಗೆ ಬಸ್ ಸಂಚಾರ ಶುರುವಾಗಿದ್ದರಿಂದ ಬಹುಪಾಲು ಜನ ನಿಟ್ಟುಸಿರು ಬಿಟ್ಟರು. ಲಾಕ್‌ಡೌನ್ ಕಾರಣ ಸರ್ಕಾರಿ ನೌಕರರು, ಶಾಲಾ ಶಿಕ್ಷಕರು, ಉದ್ಯೋಗಸ್ಥರು ಮತ್ತು ಗ್ರಾಮೀಣದ ಭಾಗದ ಜನರು ವಾಹನಗಳು ಸಿಗದೆ ಪರದಾಡುವುದರೊಂದಿಗೆ ಅಧಿಕ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಸ್ ಓಡಾಟ ಆರಂಭದ ಹಿನ್ನೆಲೆಯಲ್ಲಿ ದೂರದ ಜಿಲ್ಲೆಗಳು ಮತ್ತು ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ತೆರಳಲು ಪ್ರಯಾಣಿಕರಿಗೆ ಸುಲಭ ಸಾರಿಗೆ ವ್ಯವಸ್ಥೆ ಲಭ್ಯವಾಯಿತು. ಕೆಲವು ಬಸ್‌ಗಳಲ್ಲಿ ಶೇ.50ರಷ್ಟು ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕೆಂದು ನಿಯಮ ಪಾಲಿಸಲು ಸಾಧ್ಯವಾಗಲಿಲ್ಲ. ಮೊದಲ ದಿನವಾಗಿದ್ದರಿಂದ ಹೊರ ಜಿಲ್ಲೆಗಳಿಗೆ ಓಡಾಡುವ ಬಸ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಕಂಡುಬರಲಿಲ್ಲ.
ಆದರೂ, ಬೀದರ್, ರಾಯಚೂರು, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು ಮುಂತಾದ ಪಟ್ಟಣಗಳಿಗೆ ಬಸ್‌ಗಳ ಕಾರ್ಯಾಚರಣೆ ನಡೆಸಿದವು. ಅಲ್ಲದೇ, ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೂ ಬಸ್‌ಗಳು ಸಂಚಾರ ನಡೆಸಿದವು.
ರಾತ್ರಿ-ವಾರಾಂತ್ಯ ಕರ್ಫ್ಯೂ ಇರುತ್ತೆ
ಎರಡನೇ ಹಂತದ ಅನ್‌ಲಾಕ್‌ನಲ್ಲಿ ಬೆಳಗ್ಗೆ 6ಗಂಟೆಯಿಂದ ಸಂಜೆ ಗಂಟೆಯವರೆಗೆ ಮಾತ್ರ ಬಹುತೇಕ ಸಡಿಲಿಕೆ ಮಾಡಲಾಗಿದ್ದು, ಸಂಜೆ 5 ಗಂಟೆ ನಂತರ ವಾರಾಂತ್ಯ ಕರ್ಫ್ಯೂ ಮತ್ತು ಪ್ರತಿ ಶುಕ್ರವಾರ ರಾತ್ರಿ7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಇರಲಿದೆ. ಈ ಸಂದರ್ಭದಲ್ಲಿ ಅನಗತ್ಯ ಜನರ ಓಡಾಟ ಮತ್ತು ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿವೆ.
ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ 13,174 ಸಿಬ್ಬಂದಿ ಪೈಕಿ ಈಗಾಗಲೇ 11,864 ಚಾಲನಾ ಸಿಬ್ಬಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದುಕೊಂಡ ಚಾಲನಾ ಸಿಬ್ಬಂದಿಯನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಕೊಟ್ರಪ್ಪ, ಮುಖ್ಯ ಸಂಚಾರ
ವ್ಯವಸ್ಥಾಪಕ, ಎನ್‌ಇಕೆಆರ್‌ಟಿಸಿ