ಕಲಬುರಗಿ: ಸತತ ಮಳೆ ಮತ್ತು ಭೀಮಾ ನದಿ ಪ್ರವಾಹದಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಮುಳುಗಡೆಯಾದ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಭೀಮಾ ನದಿ ಪ್ರವಾಹದಿಂದ ಕಬ್ಬು, ಹತ್ತಿ, ತೊಗರಿ ಸೇರಿ ಎಲ್ಲ ಬೆಳೆಗಳು ನಾಶವಾಗಿವೆ. ಹಲವು ಗ್ರಾಮಗಳು ಮುಳುಗಡೆಯಾಗಿ ಜನರು, ರೈತರು ತತ್ತರಿಸಿ ಹೋಗಿದ್ದಾರೆ. ಆದರೂ, ರಾಜ್ಯ ಸರ್ಕಾರದಿಂದ ಒಂದು ಪೈಸೆ ಪರಿಹಾರ ಸಿಕ್ಕಿಲ್ಲ ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ, ಅಫಜಲಪುರ ತಾಲೂಕು ಘಟಕದ ಅಧ್ಯಕ್ಷ ರಮೇಶ ಹೂಗಾರ ನೇತೃತ್ವದಲ್ಲಿ ರೈತರು ಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದರೂ ಸರ್ಕಾರ ಮತ್ತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ರೈತರ ಸಮಸ್ಯೆಗಳನ್ನು ಮೇಲಾಧಿ ಕಾರಿಗಳು ಆಲಿಸಬೇಕು. ಅವರೇ ಬಂದು ಮನವಿ ಪತ್ರ ಸ್ವೀಕರಿಸಬೇಕೆಂದು ಒತ್ತಾಯಿಸಿದರು. ರೈತ ಮುಖಂಡರು ಮತ್ತು ರೈತರು ಜಿಲ್ಲಾಧಿಕಾರಿ ಕೊಠಡಿಗೆ ಮುತ್ತಿಗೆ ಹಾಕಲು ಹೋದಾಗ ಪೊಲೀಸರು ಮುಖ್ಯ ಗೇಟ್ ಬಳಿಯೇ ತಡೆದು ನಿಲ್ಲಿಸಿದರು. ಈ ಸಂದರ್ಭದಲ್ಲಿ ರೈತರು ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಧ್ಯಪ್ರವೇಶಿಸಿದ ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರಗಡೇದ ಹಾಗೂ ಪೊಲೀಸ್ ಸಿಬ್ಬಂದಿ ರೈತರನ್ನು ಸಮಾಧಾನ ಪಡಿಸಿದರು.
ನಂತರ ಅಪರ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಆಗಮಿಸಿ, ರೈತರ ಸಮಸ್ಯೆ ಆಲಿಸಿದರು. ಮನೆ ಹಾನಿ ಪರಿಹಾರ ಪ್ರತಿಕ್ರಿಯೆ ನಡೆಯುತ್ತಿದೆ. ಪ್ರವಾಹ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು. ಆದರೆ, ರೈತರು ಇಲ್ಲಿಯವರೆಗೂ ನಮಗೆ ಪರಿಹಾರ ತಲುಪಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆಗೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳೇ ಬಂದು ಭೇಟಿ ಮಾಡಬೇಕು. ಇಲ್ಲವೇ, ಕೆಲ ಮುಖಂಡರನ್ನಾದರು ಕರೆಸಿ ಜಿಲ್ಲಾಧಿಕಾರಿಗಳು ಮಾತನಾಡಬೇಕು ಎಂದು ಒತ್ತಾಯಿಸಿದರು.
ಕಬ್ಬಿಗೆ ಸರ್ಕಾರ ಬೆಲೆ ನಿಗದಿ ಪಡಿಸುವ ಮುನ್ನವೇ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯಲು ಮುಂದಾಗಿವೆ. ಇದು ಕಬ್ಬು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ತಕ್ಷಣವೇ ಎಸ್ ಎಪಿ ಅಡಿ ಕಬ್ಬಿನ ಬೆಲೆ ನಿಗದಿ ಮಾಡಬೇಕು. ಅಲ್ಲಿವರೆಗೆ ಜಿಲ್ಲೆಯಲ್ಲಿರುವ ಕಾರ್ಖಾನೆಗಳು ಕಬ್ಬು ಅರೆಯವುದನ್ನು ಜಿಲ್ಲಾಧಿಕಾರಿಗಳು ತಡೆಯಬೇಕು. ಜತೆಗೆ ಕಾರ್ಖಾನೆಗಳು ಇಳುವರಿಯಲ್ಲಿ ರೈತರಿಗೆ ಮೋಸ ಮಾಡುತ್ತಿವೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೇಂದ್ರ ಸದ್ಯ ಘೋಷಿಸಿದ ಎಫ್ ಆರ್‌ಪಿ ಅವೈಜ್ಞಾನಿಕವಾಗಿದ್ದು, ಮರುಪರಿಶೀಲನೆ ಮಾಡಬೇಕು. ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಗಳ ನಡುವೆ ದ್ವಿಪಕ್ಷೀಯ ಒಪ್ಪಂದ ಜಾರಿಗೆ ತಂದಿದ್ದರೂ ಕಾರ್ಖಾನೆಗಳು ಪಾಲಿಸುತ್ತಿಲ್ಲ. ಸರ್ಕಾರ ಇಂತಹ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಬೇಕು. ಹೀಗಾಗಿ ಜಿಲ್ಲಾಧಿಕಾರಿಗಳನ್ನೇ ಭೇಟಿ ಮಾಡಬೇಕೆಂದು ಮುಖಂಡರು ಪಟ್ಟು ಹಿಡಿದರು.
ಕೊನೆಗೆ ಜಿಲ್ಲಾಧಿಕಾರಿಗಳೊಂದಿಗೆ ಕೆಲ ರೈತ ಮುಖಂಡರನ್ನು ಮಾತ್ರ ಭೇಟಿ ಮಾಡಿಸುವುದಾಗಿ ಅಪರ ಜಿಲ್ಲಾಧಿಕಾರಿ ಭರವಸೆ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ, ಅಫಜಲಪುರ ಅಧ್ಯಕ್ಷ ರಮೇಶ ಹೂಗಾರ, ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಶ್ರೀಮಂತ ಬಿರಾದಾರ, ಅರ್ಜುನ ಕುಂಬಾರ, ಸಿದ್ಧಾರ್ಥ ಬಸರಿಗಿಡ ಅವರನ್ನು ಕರೆಸಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತುಕತೆ ನಡೆಸಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ಇದಕ್ಕೂ ಮುನ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ರೈತರು ಜಿಲ್ಲಾಧಿ ಕಾರಿ ಕಚೇರಿ ಆವರಣಕ್ಕೆ ಆಗಮಿಸಿದರು. ರೈತರಾದ ಮಲ್ಲು ಬಳ್ಳೂರ್ಗಿ, ಮಹಾದೇವ ಶೇರಿ, ಬಸವರಾಜ ಹೇರೂರ, ಬಾಗಣ್ಣ ಕಂಬಾರ, ರಾಜು ಹುಂಡಿ, ಸಿದ್ದು ದಣ್ಣೂರ, ದರ್ಶನ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.