Advertisement

ಸಿಎಂ ಸ್ವಾಗತಕ್ಕೆ ಕಲಬುರಗಿ ಜಿಲ್ಲೆ ಸಜ್ಜು

10:13 AM Dec 16, 2017 | |

ಜೇವರ್ಗಿ: ಸಂವಿಧಾನಶಿಲ್ಪಿ ಡಾ|ಬಾಬಾಸಾಹೇಬ ಅಂಬೇಡ್ಕರ್‌ ಅವರ ಮೂರ್ತಿ ಅನಾವರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲು ಡಿ. 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಯಡ್ರಾಮಿ ಪಟ್ಟಣ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ.

Advertisement

ಯಡ್ರಾಮಿ ತಾಲೂಕು ಕೇಂದ್ರ ಎಂದು ಘೋಷಣೆಯಾದ ಬಳಿಕ ಪ್ರಥಮ ಬಾರಿಗೆ ಸಿಎಂ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಡ್ರಾಮಿ ಪಟ್ಟಣದ ರಸ್ತೆಯನ್ನು ಧೂಳು ಮುಕ್ತಗೊಳಿಸಲಾಗಿದೆ. ಪ್ರಮುಖ ರಸ್ತೆಗಳ ಡಾಂಬರೀಕಣ ಹಾಗೂ ರಿಪೇರಿ ಮಾಡಲಾಗಿದೆ. ಕಳೆದ ಒಂದು ವಾರ ದಿಂದ ಜೇವರ್ಗಿ ಪುರಸಭೆ ಸಿಬ್ಬಂದಿಯಿಂದ ಸ್ವಚ್ಚತಾ ಕಾರ್ಯ ಭರದಿಂದ ಸಾಗಿದೆ. ಪಟ್ಟಣದ ನೂತನ ಬಸ್‌ ನಿಲ್ದಾಣದಿಂದ ಪೊಲೀಸ್‌ ಠಾಣೆವರೆಗೆ ನಿರ್ಮಿಸಲಾದ ಸಿಸಿ ರಸ್ತೆ ಮಧ್ಯಭಾಗದಲ್ಲಿ ವಿದ್ಯುತ್‌ ಕಂಬ ಹಾಗೂ ಆಕರ್ಷಕವಾದ ಗಿಡಗಳನ್ನು ನೆಡಲಾಗಿದೆ. 

ಪಟ್ಟಣದ ಹೃದಯಭಾಗದಲ್ಲಿ ಭವ್ಯವಾದ ಅಂಬೇಡ್ಕರ್‌ ಪುತ್ಥಳಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಮುಖ್ಯಮಂತ್ರಿ ಕಾರ್ಯಕ್ರಮದ ನಿಮಿತ್ತ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರಿರುವ ಫ್ಲೆಕ್ಸ್‌ಗಳು, ಬ್ಯಾನರ್‌, ಬಂಟಿಂಗ್ಸ್‌, ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ. ಬಸ್‌ ನಿಲ್ದಾಣದಿಂದ ಅಂಬೇಡ್ಕರ್‌ ಸರ್ಕಲ್‌, ಸರ್ದಾರ್‌ ಶರಣಗೌಡ ವೃತ್ತದಿಂದ ಕಡಕೋಳ ರಸ್ತೆ ವರೆಗೆ ಹಾಗೂ ಕಾರ್ಯಕ್ರಮದ ವೇದಿಕೆ ಬಳಿ ಪಕ್ಷದ ಧ್ವಜಗಳನ್ನು ಕಟ್ಟಿ ಅಲಂಕರಿಸಲಾಗಿದೆ. ವ್ಯವಸ್ಥಿತವಾಗಿ ಕಾರ್ಯಕ್ರಮ ಮಾಡುವ ನಿಟ್ಟಿನಲ್ಲಿ ನೂರಕ್ಕೂ ಅಧಿಕ ಗಣ್ಯರು ಕುಳಿತುಕೊಳ್ಳಲು ವೇದಿಕೆ ಸಜ್ಜುಗೊಂಡಿದೆ.

ವೇದಿಕೆ ಮುಂಭಾಗದಲ್ಲಿ ಜನರು ಕುಳಿತುಕೊಳ್ಳಲು 30 ಸಾವಿರ ಕುರ್ಚಿ ಹಾಗೂ ಶಾಮಿಯಾನ ಹಾಕಲಾಗಿದೆ. ಅರಳಗುಂಡಗಿಗೆ ತೆರಳುವ ರಸ್ತೆ ಬದಿಯಲ್ಲಿ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಾಧನಾ ಸಮಾವೇಶಕ್ಕೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ಪಕ್ಷದ ಮುಖಂಡರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅವಘಡ ಸಂಭವಿಸದಂತೆ ಸಿಪಿಐ ಡಿ.ಬಿ. ಪಾಟೀಲ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಳೆದ ಎರಡು ದಿನಗಳ ಹಿಂದೆ ವಿವಿಧ ಜಿಲ್ಲೆಗಳಿಂದ ಪೊಲೀಸ್‌ ಸಿಬ್ಬಂದಿ ಆಗಮಿಸಿದ್ದಾರೆ. ಕಾರ್ಯಕ್ರಮ ನಡೆಯುತ್ತಿರುವ ವಿವಿಧ ಸ್ಥಳಗಳಿಗೆ ಪೊಲೀಸರನ್ನು ನಿಯೋಜಿಸಲಾಗಿದೆ.

ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ, ಮಹಿಳಾ ಪೊಲೀಸ್‌ ಸಿಬ್ಬಂದಿ, ಗೃಹರಕ್ಷಕದಳ ಸೇರಿದಂತೆ 700ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಕಾರ್ಯಕ್ರಮದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹಾಗೂ ಶಾಸಕ ಡಾ| ಅಜಯಸಿಂಗ್‌ ಶುಕ್ರವಾರ ಭೇಟಿ ನೀಡಿ ಮುಖ್ಯ ವೇದಿಕೆ ಮತ್ತು ಊಟದ ಪೆಂಡಾಲ್‌ ಪರಿಶೀಲಿಸಿದರು.

Advertisement

ಜಿಲ್ಲಾಧಿಕಾರಿ ವೆಂಕಟೇಶಕುಮಾರ, ಸಹಾಯಕ ಆಯುಕ್ತ ರಾಜಪ್ಪ, ತಹಶೀಲ್ದಾರ ಯಲ್ಲಪ್ಪ ಸುಬೇದಾರ, ಯಡ್ರಾಮಿ
ತಹಶೀಲ್ದಾರ ರಾಜಕುಮಾರ ಜಾಧವ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಅಂಬೇಡ್ಕರ ಪುತ್ಥಳಿ ಅನಾವರಣ ಸಮಿತಿ ಅಧ್ಯಕ್ಷ ಹಯ್ನಾಳಪ್ಪ ಗಂಗಾಕರ, ಎಪಿಎಂಸಿ ಅಧ್ಯಕ್ಷ ಮಡಿವಾಳಪ್ಪಗೌಡ ಮಾಗಣಗೇರಿ, ಮುಖಂಡರಾದ ರಾಜಶೇಖರ ಸೀರಿ, ಚಂದ್ರಶೇಖರ ಪುರಾಣಿಕ, ಮಲ್ಲಿಕಾರ್ಜುನ ಹಲಕರ್ಟಿ, ನಾಗಣ್ಣ ಹಾಗರಗುಂಡಗಿ, ನೀಲಕಂಠ ಅವುಂಟಿ, ಮರೆಪ್ಪ ಸರಡಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು

ಮುಖ್ಯಮಂತ್ರಿಗಳ ಕಾರ್ಯಕ್ರಮ
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.16ರಂದು ಬೆಳಗ್ಗೆ 10ಕ್ಕೆ ರಾಯಚೂರಿನ ಯರಮರಸ್‌ನಿಂದ ಹೆಲಿಕ್ಯಾಪ್ಟರ್‌ ಮೂಲಕ ಹೊರಟು, ಬೆಳಗ್ಗೆ 10:45ಕ್ಕೆ ಅಫಜಲಪುರಕ್ಕೆ ಆಗಮಿಸುವರು. ಅಫಜಲಪುರ ನ್ಯಾಶನಲ್‌ ಫಂಕ್ಷನ್‌ ಹಾಲ್‌ನಲ್ಲಿ ತಾಲೂಕಿನ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಿಲಾನ್ಯಾಸ ನೇರವೇರಿಸಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು.

ಮುಖ್ಯಮಂತ್ರಿಗಳು ಮಧ್ಯಾಹ್ನ 12:30ಕ್ಕೆ ಅಫಜಲಪುರನಿಂದ ಹೆಲಿಕ್ಯಾಪ್ಟರ್‌ ಮೂಲಕ ಮಧ್ಯಾಹ್ನ 1:10ಕ್ಕೆ ಸೇಡಂ ವಾಸವದತ್ತ ಸಿಮೆಂಟ್‌ ಕಾರ್ಖಾನೆ ಹೆಲಿಪ್ಯಾಡಿಗೆ ಆಗಮಿಸಿ, ಸೇಡಂ ತಾಲೂಕಾ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೇರವೇರಿಸಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು.

ಮುಖ್ಯಮಂತ್ರಿಗಳು ಮಧ್ಯಾಹ್ನ 3:45ಕ್ಕೆ ಸೇಡಂನಿಂದ ಹೊರಟು ಸಂಜೆ 4:15 ಕ್ಕೆ ಜೇವರ್ಗಿ ತಾಲೂಕಿನ ಯಡ್ರಾಮಿಗೆ ಆಗಮಿಸಿ ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 6ಕ್ಕೆ ಯಡ್ರಾಮಿಯಿಂದ ಕಲಬುರಗಿಗೆ ಆಗಮಿಸಿ ನಗರದ ಐವಾನ್‌ ಶಾಹಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು.

 ಡಿ.17ರಂದು ಬೆಳಗ್ಗೆ 9:30ಕ್ಕೆ ನಗರದ ಐವಾನ್‌ಶಾಹಿ ಅತಿಥಿಗೃಹದಲ್ಲಿ ವುಮೆನ್ಸ್‌ ಪಾರ್ಕ ಕಾಮಗಾರಿಗೆ ಶಿಲಾನ್ಯಾಸ ನೇರವೇರಿಸುವರು. ಬೆಳಗ್ಗೆ 10ಕ್ಕೆ ಹೈ.ಕ.ಶಿಕ್ಷಣ ಸಂಸ್ಥೆಯ ನೂತನ ಸಭಾಂಗಣ ಉದ್ಘಾಟಿಸುವರು. ಬೆಳಗ್ಗೆ 10:30ಕ್ಕೆ ನಗರದ ಡಿಎಆರ್‌ ಪೊಲೀಸ್‌ ಮೈದಾನದ ಹೆಲಿಕ್ಯಾಪ್ಟರ್‌ ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿಗೆ ತೆರಳುವರು.

Advertisement

Udayavani is now on Telegram. Click here to join our channel and stay updated with the latest news.

Next