Advertisement

ಮತದಾರರ ಪಟ್ಟಿಯಲ್ಲಿ ಹೆಸರು ಡಬಲ್ ಎಂಟ್ರಿ ಮಾಡಿದಲ್ಲಿ ಜೈಲು ಶಿಕ್ಷೆ: ಡಿಸಿ ಎಚ್ಚರಿಕೆ

07:20 PM Dec 29, 2022 | Team Udayavani |

ಕಲಬುರಗಿ: ಈಗಾಗಲೇ ಚುನಾವಣಾ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಸಹ ಉದ್ದೇಶ ಪೂರಕವಾಗಿ ಮತದಾರರ ಪಟ್ಟಿಯ ಇನ್ನೊಂದು ಭಾಗ ಅಥವಾ ವಿಧಾನಸಭಾ ಕ್ಷೇತ್ರದ ಪಟ್ಟಿಯಲ್ಲಿ ಹೆಸರು ಸೇರಿಸಿದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ-1951 ಸೆಕ್ಷನ್ 31ರ ಪ್ರಕಾರ ಒಂದು ವರ್ಷ ಜೈಲು ಶಿಕ್ಷೆಗೆ ಒಳಪಡಿಸುವುದಲ್ಲದೆ ಮತದಾನದಿಂದಲೂ ಡಿಬಾರ್ ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಎಚ್ಚರಿಕೆ ನೀಡಿದ್ದಾರೆ.

Advertisement

ಗುರುವಾರ ಸಂಜೆ ತಮ್ಮ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಇತ್ತೀಚಿನ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೆ ಸಲ್ಲಿಸಲಾದ ಅರ್ಜಿಗಳ ಪರಿಶೀಲನಾ ಸಂದರ್ಭದಲ್ಲಿ ಮತಪಟ್ಟಿಯಲ್ಲಿ ಹೆಸರಿದ್ದರೂ ಮತ್ತೇ ಮತ ಪಟ್ಟಿಗೆ ಹೆಸರು ಸೇರಿಸಲು ಸುಮಾರು 12 ಸಾವಿರ ಅರ್ಜಿಗಳು ಸಲ್ಲಿಕೆಯಾಗಿರುವುದು ಫೋಟೋ ಸಿಮಿಲರ್ ಎಂಟ್ರಿ ತಂತ್ರಜ್ಞಾನದಿಂದ ಪತ್ತೆಯಾಗಿದ್ದು, ಚುನಾವಣಾ ಆಯೋಗದ ಗಮನಕ್ಕೂ ತರಲಾಗಿದೆ ಎಂದರು.

ಕಳೆದ ಜುಲೈ-ಆಗಸ್ಟ್ ಮಾಹೆಯಲ್ಲಿ ಭಾರತ ಚುನಾವಣಾ ಆಯೋಗವು ಹೊಸದಾಗಿ ಅಭಿವೃದ್ಧಿಪಡಿಸಿದ ಫೋಟೋ ಸಿಮಿಲರ್ ಎಂಟ್ರಿ ತಂತ್ರಜ್ಞಾನ ಸಹಾಯದಿಂದ ಕಲಬುರಗಿ ಜಿಲ್ಲೆಯಲ್ಲಿ 90 ಸಾವಿರಕ್ಕೂ ಹೆಚ್ಚು ಹೆಸರನ್ನು ಡಿಲಿಟ್ ಮಾಡಲಾಗಿದ್ದರು ಸಹ, ಪ್ರಸಕ್ತ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಭಾವಚಿತ್ರ ಬದಲಾಯಿಸಿ, ವಿಳಾಸ ಬದಲಾಯಿಸಿ ಸುಮಾರು 12 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ವಿಶೇಷವಾಗಿ ಕಲಬುರಗಿ ಉತ್ತರ ಮತ್ತು ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಇಂತಹ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗಿವೆ ಎಂದರು.

ಕರಡು ಮತದಾರರ ಪಟ್ಟಿ ಪ್ರಕಟಣೆ ನಂತರ ಪರಿಷ್ಕರಣೆ ಭಾಗವಾಗಿ ಅರ್ಜಿ ಸಲ್ಲಿಸಲು ಕೊನೆ ದಿನವಾದ ಡಿಸೆಂಬರ್ 8ರ ವರೆಗೆ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಹೆಸರು ಸೇರ್ಪಡೆಗೆ ನಮೂನೆ-6 ರಲ್ಲಿ ಸಲ್ಲಿಕೆಯಾದ 57,057 ಅರ್ಜಿ ಪೈಕಿ 50,891, ಹೆಸರು ತೆಗೆದು ಹಾಕಲು (ಡಿಲಿಟ್) ನಮೂನೆ-7ರಲ್ಲಿ ಸಲ್ಲಿಕೆಯಾದ 43,033 ಅರ್ಜಿ ಪೈಕಿ 36,319 ಹಾಗೂ ವರ್ಗಾವಣೆ ಮತ್ತು ತಿದ್ದುಪಡಿಗೆ ನಮೂನೆ-8 ರಲ್ಲಿ ಸಲ್ಲಿಕೆಯಾದ 10,772 ಅರ್ಜಿ ಪೈಕಿ 9,863 ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ನಿಧನ ಮತ್ತು ಡಬಲ್ ಎಂಟ್ರಿ ಪ್ರಕರಣದಲ್ಲಿ ಒಟ್ಟಾರೆ ಜಿಲ್ಲೆಯಾದ್ಯಂತ 36,319 ಹೆಸರನ್ನು ಡಿಲಿಟ್ ಮಾಡಲಾಗಿದೆ ಎಂದು ಡಿ.ಸಿ. ಮಾಹಿತಿ ನೀಡಿದರು.

ಶುದ್ಧ ಮತಪಟ್ಟಿ ಸಿದ್ಧಪಡಿಸಲು ಸಹಕರಿಸಿ: ಜಿಲ್ಲೆಯಲ್ಲಿ ವಾಸಿಸುವ ಮತದಾರರು ವಾಸ ಸ್ಥಳ ಬದಲಾಯಿಸಿದಲ್ಲಿ, ನಮೂನೆ 8ರಲ್ಲಿ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಎರಡು ಕಡೆ ಪ್ರತ್ಯೇಕ ಮತಪಟ್ಟಿಯಲ್ಲಿ ಹೆಸರು ಸೇರಿಸಬಾರದು. ಹಳ್ಳಿ ಮತ್ತು ಪಟ್ಟಣದಲ್ಲಿಯೂ ಮತ ಚಲಾಯಿಸುವೆ ಎಂದರೇ ಸಾಧ್ಯವಿಲ್ಲ, ಅದು ದುರ್ನಡತೆಯಾಗುತ್ತದೆ. ದೇಶದಲ್ಲಿ ಎಲ್ಲಾದರೂ ಒಂದು ಕಡೆ ಮಾತ್ರ ಮತಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ. ಹೀಗಾಗಿ ಜಿಲ್ಲೆಯ ಸಾರ್ವಜನಿಕರು ತುಂಬಾ ಜಾಗ್ರತೆ ವಹಿಸಬೇಕು. ಮನೆಗೆ ಬರುವ ಬಿ.ಎಲ್.ಓ.ಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕಾರ ನೀಡುವ ಮೂಲಕ ಪಾರದರ್ಶಕವಾಗಿ, ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಸಹಕರಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಮನವಿ ಮಾಡಿದ್ದಾರೆ.

Advertisement

ನೆಟೆರೋಗದಿಂದ 70 ಸಾವಿರ ಹೆಕ್ಟೇರ್ ನಾಶ: ನೆಟೆರೋಗ ದಿಂದ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್ ತೊಗರಿ ಬೆಳೆ ನಾಶವಾಗಿರುವ ಕುರಿತು ಸರ್ಕಾರ ಕ್ಕೆ ವರದಿ ಕಳುಹಿಸಲಾಹಿದೆ ಎಂದು ಡಿಸಿ ಇದೇ ಸಂದರ್ಭದಲ್ಲಿ ತಿಳಿಸಿದರಲ್ಲದೇ ಕೊರೊನಾ ಮೇಲೂ ನಿಗಾ ವಹಿಸಲಾಗಿದೆ. ‌ಕೇಬಲ ಎಂಟು ಪ್ರಕರಣಗಳು ಚಾಲ್ತಿ ಯಲ್ಲಿವೆ ಎಂದು ವಿವರಣೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next