ಕಲಬುರಗಿ: ಕೋವಿಡ್ ಮಹಾಮಾರಿ ಹಾಟ್ ಸ್ಪಾಟ್ ಆಗಿರುವ ಕಲಬುರಗಿಯಲ್ಲಿ ಮತ್ತೋರ್ವ ಖಾಸಗಿ ವೈದ್ಯನಿಗೆ ಸೋಂಕು ಪತ್ತೆಯಾಗಿದೆ. ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಮೂಲಕ 45 ವರ್ಷದ ವೈದ್ಯ (ಪಿ-926)ನಿಗೆ ಸೋಂಕು ಹರಡಿದೆ.
ನಗರದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯನ ಬಳಿ 35 ವರ್ಷದ ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಚಿಕಿತ್ಸೆ ಪಡೆದಿದ್ದರು. ಗಂಟಲು ನೋವಿನ ಬಗ್ಗೆ ಮೆಡಿಕಲ್ ರೆಪ್ ಚಿಕಿತ್ಸೆಗೆ ಒಳಗಾಗಿದ್ದರು. ನಂತರ ಮೇ 10ರಂದು ಮೆಡಿಕಲ್ ರೆಪ್ (ಪಿ-848)ಗೆ ಕೋವಿಡ್ ಸೋಂಕು ದೃಢಪಟ್ಟಿತ್ತು.
ಈತನ ಸಂಪರ್ಕಕ್ಕೆ ಬಂದಿದ್ದರಿಂದ ವೈದ್ಯನ ಗಂಟಲು ದ್ರಾವಣ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಬುಧವಾರ ಪ್ರಯೋಗಾಲಯದ ವರದಿಯಿಂದ ವೈದ್ಯನಿಗೂ ಸೋಂಕು ಹರಡಿರುವುದು ಖಚಿತವಾಗಿದೆ.
ವೈದ್ಯನಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಆತನ ಕ್ಲಿನಿಕ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ವೈದ್ಯನ ಬಳಿ ಯಾರೆಲ್ಲ ಚಿಕಿತ್ಸೆ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಗೆ ಮೊದಲು ಬಲಿಯಾದ 78 ವರ್ಷದ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ವೈದ್ಯ (ಪಿ-07) ಹಾಗೂ ಜಿಮ್ಸ್ ಆಸ್ಪತ್ರೆಯಲ್ಲಿ ಒಂದು ವರ್ಷದ ಮಗುವಿಗೆ ಚಿಕಿತ್ಸೆ ನೀಡಿದ್ದ ಟ್ರೈನಿ ವೈದ್ಯೆ (ಪಿ-302)ಗೆ ಹೆಮ್ಮಾರಿ ಸೋಂಕು ಕಾಣಿಸಿಕೊಂಡಿತ್ತು. ಈಗಾಗಲೇ ಈ ಇಬ್ಬರೂ ವೈದ್ಯರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸೋಂಕಿತರ ಸಂಖ್ಯೆ 75ಕ್ಕೇರಿಕೆ: ಬುಧವಾರ ವೈದ್ಯ ಸೇರಿ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ 60 ವರ್ಷದ ವೃದ್ಧನಿಗೂ ಕೋವಿಡ್ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.
75 ಜನ ಸೋಂಕಿತರ ಪೈಕಿ 7 ಜನರು ಮಹಾಮಾರಿಗೆ ಬಲಿಯಾಗಿದ್ದು, 44 ಜನರು ಗುಣಮುಖರಾಗಿದ್ದಾರೆ. ಉಳಿದಂತೆ 24 ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.