Advertisement
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ಸಂಸ್ಥೆಯ OG-117 ಸಂಖ್ಯೆಯ 50 ಸೀಟರ್ ವಾಣಿಜ್ಯ ವಿಮಾನದಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲ್ಯಾಣ ಕರ್ನಾಟಕದ ಮೊದಲ ನಾಗರಿಕ ವಿಮಾನಯಾನ ಸೇವೆಗೆ ಚಾಲನೆ ನೀಡಿದರು.
Related Articles
Advertisement
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಸುಸಂಗೋಪನಾ ಸಚಿವ ಪ್ರಬು ಚವ್ಹಾಣ, ಸಂಸದ ಡಾ.ಉಮೇಶ ಜಾಧವ,ಬೀದರ ಸಂಸದ ಭಗವಂತ ಖೂಬಾ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ವಿಧಾನಸಭೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಎಂ.ವೈ.ಪಾಟೀಲ, ಸುಭಾಷ ಗುತ್ತೆದಾರ, ಅವಿನಾಶ ಜಾಧವ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ತಿಪ್ಪಣಪ್ಪ ಕಮಕನುರ, ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೆದಾರ, ಬಾಬುರಾವ ಚಿಂಚನಸೂರು, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಎಂ.ಎಲ್.ಸಿ. ಶಶೀಲ ಜಿ.ನಮೋಶಿ, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ ಸಿಂಗ್ ಖರೀಲಾ, ಏಎಐ ಪ್ರಾಧಿಕಾರ ಅಧ್ಯಕ್ಷ ಅರವಿಂದ ಸಿಂಗ್, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ ಮೋಹನ, ಕೆ.ಎಸ್.ಎಸ್.ಐ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ಗಂಗಾರಮ ಬಡೇರಿಯಾ, ಆರ್.ಸಿ. ಸುಬೋಧ ಯಾದವ, ಐಜಿಪಿ ಮನೀಷ್ ಖರ್ಬಿಕರ್, ಡಿಸಿ ಬಿ.ಶರತ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಬಿ.ಎನ್.ನಾಗರಾಜ, ಎಸ್.ಪಿ. ವಿನಾಯಕ ಪಾಟೀಲ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು.
ನಂತರ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಕಲಬುರಗಿ ವಿನಾನ ನಿಲ್ದಾಣ ಹೊಸ ಅಯಾಮ ನೀಡಲಿದೆ ಎಂದರು.
ರಾಜ್ಯದ ಈಶಾನ್ಯ ಭಾಗಕ್ಕೆ ವಿಮಾನಯಾನ ಸಂಪರ್ಕ ಹೊಂದಿರುವುದರಿಂದ ದೇಶ, ವಿದೇಶದಿಂದ ಉದ್ಯಮಿಗಳು ಇಲ್ಲಿ ಹಣ ಹೂಡಿಕೆ ಮಾಡಲಿದ್ದಾರೆ.
2008 ರಲ್ಲಿ ನನ್ನಿಂದಲೆ ಅಡಿಗಲ್ಲು ಹಾಕಿದ ವಿಮಾನ ನಿಲ್ದಾಣ ಇಂದು ಲೋಕಾರ್ಪಣೆ ಮಾಡುತ್ತಿದ್ದು, ಯಾವುದೋ ಜನ್ಮದ ಪುಣ್ಯದ ಫಲ ಎಂದು ಭಾವಿಸುತ್ತೇನೆ ಎಂದರು.
ಕಲ್ಯಾಣ ಕರ್ನಾಟಕದ ಘೋಷಣೆ ನಂತರ ಇಂದು ಸಿಮೆಂಟ್ ನಗರಿಯಲ್ಲಿ ವಿಮಾನ ನಿಲ್ದಾಣ ಸೇವೆ ಲಭ್ಯವಾಗುತ್ತಿದ್ದು, ಇಲ್ಲಿನ ಜನರ ಹರ್ಷಕ್ಕೆ ಪಾರವೆ ಇಲ್ಲದಂತಾಗಿದೆ. ಈ ಭಾಗಕ್ಕೆ ಮುಂದಿನ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡಿ ಕಲ್ಬುರ್ಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಸಮಗ್ರ ಅಭಿವೃದ್ದಿಗೊಳಿಸಿ ಕಲ್ಯಾಣ ಪದದ ನಿಜ ಅರ್ಥದಲ್ಲಿ ಅಭಿವೃದ್ಧಿ ಮಾಡಲಾಗುವುದು.
3.175 ಕಿ.ಮಿ. ಉದ್ದದ ರನ್ವೆ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣ ರಾಜ್ಯದ 2ನೇ ಹಾಗೂ ದೇಶದ 10ನೇ ಅತಿ ಉದ್ದದ ರನ್ವೆ ಇದಾಗಿದೆ. ದೇಶಕ್ಕೆ ಶೇ.30 ರಷ್ಟು ತೊಗರಿ ಉತ್ಪಾದಿಸುವ ಮತ್ತು ಸಿಮೆಂಟ್ ರಫ್ತಿನಿಂದ ಕಲಬುರ್ಗಿ ಜಿಲ್ಲೆ ವಿಶ್ವದಾದ್ಯಂತ ಗಮನ ಸೆಳೆದಿದೆ. ಹೀಗಾಗಿ ಇಲ್ಲಿನ ವಿಮಾನ ನಿಲ್ದಾಣವನ್ನು ಭವಿಷ್ಯದಲ್ಲಿ ಸರಕು ಸಾಗಣೆಗೂ ಬಳಸಿಕೊಳ್ಳುವಂತೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಕಲಬುರಗಿ ಜನರ ಪ್ರೀತಿ ನನ್ನ ಮೇಲೆ ತುಸು ಹೆಚ್ಚಿದೆ. ನಿಮ್ಮ ಪ್ರೀತಿಗೆ ಚಿರರುಣಿಯಾಗಿದ್ದು, ನೀವಿಟ್ಟ ಭರವಸೆಗೆ ಯಾವುದೇ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುವೆ ಎಂದು ಸಿಎಂ ಹೇಳಿದರು.