Advertisement
ಏಕಾಣು ಜೀವಿಯಾಗಿ ಉದ್ಭವಿಸಿ, ಮಂಗನಂತಹ ಸಸ್ತನಿಯಾಗಿ, ಎದೆ ಸೆಟೆದು ಕೈಕಾಲು ಬೀಸಾಡುತ್ತಾ ನಡೆವ ದೈತ್ಯ ಪ್ರಾಣಿಯಾಗಿ ಮೆದುಳು ವಿಕಸಿಸುವವರೆಗೆ, ಮಾನವನ ಯಾವೊಂದು ವಿಕಾಸಕ್ಕೂ ಏಳಿಗೆಗೂ ಯಾವುದೇ ಕಾಲ್ಪನಿಕ ದೇವರು ದಿಂಡರುಗಳ, ಮತ ಧರ್ಮ ಪಂಥ ಅಥವಾ ಧಾರ್ಮಿಕ ಶಾಸ್ತ್ರಗಳ ಸಹಾಯವಿತ್ತೇ? ಮುಂದೆ ಅದೇ ಮಾನವನ ಬುದ್ಧಿಶಕ್ತಿ ಬೆಳೆದಂತೆಲ್ಲ ಸಮಾಜ ನಿರ್ಮಾಣವಾಯಿತು. ಮತ ಧರ್ಮಗಳು ಹುಟ್ಟಿಕೊಂಡವು. ಜತೆ ಜತೆಗೇ ಅನೇಕ ದೇವಾರಾಧನೆಗಳೂ ಧಾರ್ಮಿಕ ಶಾಸ್ತ್ರಗಳೂ ಸೃಷ್ಟಿಯಾಗಿ, ಆತನ ಬದುಕು ರೂಪಿಸುವಲ್ಲಿ ಹಾಗೂ ಸನ್ಮಾರ್ಗದಲ್ಲಿ ಸಾಗುವಲ್ಲಿ ಅವು ಅವನಿಗೆ ಬೆನ್ನೆಲುಬಾಗಿ ನಿಂತವು. ಆದರೆ ಅದೇ ವಿಕಾಸ ಪ್ರಕ್ರಿಯೆ ಇನ್ನೂ ಒಂದಷ್ಟು ಮುಂದುವರೆದಂತೆಲ್ಲ ಆತನೊಳು ಅದೆಲ್ಲಿಂದ ಹುಟ್ಟಿತೋ; ಎಲ್ಲವನ್ನೂ ಗೆಲ್ಲಬೇಕು, ಪಡೆಯಬೇಕು, ಅನುಭವಿಸಲೇಬೇಕೆಂಬ ಮಹತ್ವಾಕಾಂಕ್ಷೆ! ಹಾಗಾಗಿಯೇ ಇರಬೇಕು, ಬಗೆಬಗೆಯ ಭಯದ ಭೂತಗಳೂ ಅವನನ್ನು ಆವರಿಸಿಕೊಂಡವು. ಅವಕ್ಕೆ ಕೊರಳೊಡ್ಡಿಕೊಂಡು, ಪೂರ್ವಜರ ಧರ್ಮಶಾಸ್ತ್ರ, ಧಾರ್ಮಿಕ ವಿಧಿವಿಧಾನ ಮತ್ತು ಜ್ಯೋತಿಷ್ಯದಂತಹ ವಿಶೇಷ ವಿಜ್ಞಾನವನ್ನೂ ತನಗೆ ಬೇಕಾದಂತೆ ಅರ್ಥೈಸಿಕೊಂಡು, ತಿರುಚಿ ಬಳಸುತ್ತಾ ಸಾಗುತ್ತಿದ್ದಾನೆ ಎಂಬುದು ಬುದ್ಧಿಗ್ರಾಹ್ಯ ಸತ್ಯ. ಜ್ಯೋತಿಶ್ಯಾಸ್ತ್ರವನ್ನೇ ತೆಗೆದುಕೊಂಡು ಅದರ ಈಗಿನ ಅವತಾರವನ್ನು ಗಮನಿಸಿದರೆ ಅನೇಕ ವೈಲಕ್ಷಣ್ಯಗಳು ಕಣ್ಣೆದುರಿಗೇ ತಾಂಡವವಾಡುತ್ತವೆ. ಲಾಲಸೆ ತುಂಬಿದ ಮನಸ್ಸುಗಳು ಆ ಶಾಸ್ತ್ರವನ್ನು ಎಂತಹ ಕೆಳಮಟ್ಟಕ್ಕೆ ಕೊಂಡೊಯ್ಯುತ್ತಿವೆ ಎಂಬುದನ್ನು ತಿಳಿಯಲು ಸಾವಿರಾರು ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ಕೆಲವನ್ನು ನೋಡುವುದಾದರೆ, ದಿನಾ ಬೆಳಗಾಗುತ್ತಲೇ ಯಾವುದೇ ಟಿವಿ ಚಾನೆಲ್ ಆನ್ ಮಾಡಿದರೂ, ಜ್ಯೋತಿಷ್ಯವಿಜ್ಞಾನದ ಅವಸಾನವನ್ನು ನಾನಾ ರೂಪದಲ್ಲಿ ಕಾಣಬಹುದು. ಬದುಕಿನ ದುರ್ಬಲ ಸನ್ನಿವೇಶಗಳಿಗೆ ಸಿಲುಕಿ ಮನಸಿನ ಸ್ವಾಸ್ಥ್ಯ ಕಳೆದುಕೊಂಡೋ ಅಜ್ಞಾನದಿಂದಲೋ ಆಧುನಿಕ ಜ್ಯೋತಿಷ್ಯಕ್ಕೆ ಮೊರೆ ಹೋಗಿ ನರಳಾಡುವಂತಹ ಅದೆಷ್ಟು ಮುಗ್ಧರಿರಬಹುದು! ಅಂಥವರಲ್ಲೊಂದು ಕುಟುಂಬದ ನೈಜ ಕತೆಯನ್ನಿಲ್ಲಿ ಹೇಳಬೇಕು.
Related Articles
Advertisement
ಮೊದಲೇ ನಾಗದೋಷ ಎಂಬ ಅರ್ಥವಿಲ್ಲದ ವಿಚಿತ್ರ ನಂಬಿಕೆಯೊಂದಕ್ಕೆ ಕುಖ್ಯಾತಿ ಪಡೆದಿರುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯೊಳಗೆ ಈಗ ಕಾಳಸರ್ಪ ದೋಷ ಎಂಬ ಹೊಸ ಪಿಡುಗೊಂದೂ ಜ್ಯೋತಿಷ್ಯ ನಂಬುವವರನ್ನು ಕಂಗಾಲಾಗಿಸುತ್ತಿದೆ. ಜೋಯಿಸರುಗಳು ತಿಳಿಸಿದ ಎಲ್ಲ ವಿಧಿಗಳನ್ನು ಮಾಡಿಸಿದರೂ ಮಗನಿಗೆ ಕಂಕಣಬಲ ಕೂಡಿ ಬರಲಿಲ್ಲವಲ್ಲ ಎಂಬ ನೋವು ಹೆತ್ತವರೊಂದಿಗೆ ನನ್ನನ್ನೂ ಭಾದಿಸುತ್ತಿದ್ದ ಸಮಯಕ್ಕೇ ಸರಿಯಾಗಿ, ಜ್ಯೋತಿಶ್ಯಾಸ್ತ್ರಜ್ಞರಾದ ಬಿ. ರಾಮಚಂದ್ರ ಆಚಾರ್ಯ ಎಂಬ ಹಿರಿಯರೊಬ್ಬರ ಪರಿಚಯವಾಯಿತು. ಕೂಡಲೇ ಅವರೊಡನೆ ಕಾಳಸರ್ಪ ದೋಷದ ಬಗ್ಗೆ ಚರ್ಚಿಸಿದಾಗ ಅವರು, ತಾವು ಬರೆದ “ಅತೀತದ ವಿಸ್ಮಯಗಳು’ ಎಂಬ ವಿಶೇಷ ಕೃತಿಯೊಂದನ್ನು ಕೈಗಿತ್ತರು.
ಆ ಕೃತಿಯ ಐದನೆಯ ಲೇಖನವನ್ನು ಓದಿ ಮುಗಿಸುವ ಹೊತ್ತಿಗೆ ಆಶ್ಚರ್ಯ, ಖೇದ ಒಟ್ಟೊಟ್ಟಿಗೇ ಮೂಡಿದವು ನನ್ನಲ್ಲಿ! ಆ ಹೊತ್ತಗೆಯಲ್ಲಿ ಆಚಾರ್ಯರು “”ಈಗ ಮೂರು ನಾಲ್ಕು ವರ್ಷಗಳಿಂದ (2015ರಲ್ಲಿ ಬರೆದ ಕೃತಿಯಿದು) ಜ್ಯೋತಿಷಿಗಳು ಕಾಳಸರ್ಪ ಯೋಗಕ್ಕೆ ಕಾಳಹಸ್ತಿಗೆ ಹೋದರೆ ಮಾತ್ರ ಪರಿಹಾರ ಅಂತ ಹೇಳಲು ಶುರು ಮಾಡಿದ್ದಾರೆ. ಈ ಸುವರ್ಣ ಸಂದರ್ಭವನ್ನೂ ಆ ಕ್ಷೇತ್ರದವರೂ ಬಿಟ್ಟಾರೆಯೇ? ಅಲ್ಲೂ ಈಗ ವಿಶೇಷವಾದ ಪೂಜೆ ಪುನಸ್ಕಾರಗಳು ಆರಂಭವಾಗಿವೆ. ಆ ಯೋಗಕ್ಕೂ ಈ ಕ್ಷೇತ್ರಕ್ಕೂ ಸಂಬಂಧ ಕಲ್ಪಿಸಿದವರ ಚಾಲಾಕಿತನವನ್ನು ಮೆಚ್ಚಲೇಬೇಕು. ಕಾಳಸರ್ಪಕ್ಕೂ ಕಾಳಹಸ್ತಿಗೂ ಏನು ಸಂಬಂಧ? ಹಸ್ತಿ ಅಂದರೆ ಆನೆ. ಆ ದೇವಸ್ಥಾನದಲ್ಲೊಂದು ಆನೆಯ ಕಪ್ಪು ಶಿಲ್ಪವಿದೆ. ಅಲ್ಲಿ ಕಾಳಸರ್ಪ ಯೋಗಕ್ಕೆ ಪರಿಹಾರ ದೊರಕುವುದು ಹೇಗೆ? ಕಾಳಹಸ್ತಿಗೆ ಹೋದರೆ ಕಾಳಸರ್ಪ ಯೋಗ ಪರಿಹಾರ ಎಂದು ಬರೆದಿರುವ ಯಾವ ಗ್ರಂಥವನ್ನೂ ನಾವು (ಜ್ಯೋತಿಷ್ಯರು) ಯಾರೂ ನೋಡಿಲ್ಲ. ತಮಾಷೆಯೆಂದರೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಈ ಕ್ಷೇತ್ರಕ್ಕೂ ಕಾಳಸರ್ಪ ಯೋಗದ ಕುರಿತು ತಿಳಿದಿರಲಿಲ್ಲವಂತೆ! ಹಾಗಾಗಿ ಬರುವ ಭಕ್ತಾದಿಗಳ ಮನಶ್ಯಾಂತಿಗಾಗಿ ಇನ್ನಾವುದೋ ಆಚರಣೆಯನ್ನು ಮಾಡಿಸಿ ಕಳುಹಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಅಲ್ಲೂ ಈ ಸಂಬಂಧ ಒಂದು ಬೋರ್ಡು ನೇತಾಡುತ್ತಿದೆ! ಕಾಳಸರ್ಪ ಯೋಗ ಅಂದರೆ, ಜಾತಕದಲ್ಲಿ ರಾಹು ಕೇತುಗಳ ನಡುವೆ ಎಲ್ಲ ಗ್ರಹಗಳು ಸ್ಥಿರವಾಗಿರುವುದು. ಹೀಗೆ ಇದ್ದರೆ ಅಂಥ ಜಾತಕದವರ ಬದುಕು ಕೆಲವೊಮ್ಮೆ ಅತೀ ಎತ್ತರಕ್ಕೆ ಏರಿಸಿ, ಅಲ್ಲಿಂದ ಅಧಃಪತನಕ್ಕೆ ಎಸೆಯಲ್ಪಡುತ್ತದೆ- ಎಂದು ಹೇಳಲಾಗುತ್ತದೆ” ಎಂದು ಹೇಳುತ್ತಾರೆ. ಜ್ಯೋತಿಶ್ಯಾಸ್ತ್ರದ ಕುರಿತು ಆಳವಾಗಿ ಅಧ್ಯಾಯನ ಮಾಡಿರುವ ಇನ್ನೋರ್ವ ಶಾಸ್ತ್ರಜ್ಞ ಡಾ| ಎಸ್. ಶ್ರೀನಿವಾಸಯ್ಯ ಅವರು “”ಕಾಳಸರ್ಪ ಯೋಗ, ಸಾಡೇಸಾತಿ ಶನಿ-ಭಾಧಕಾದಿಪತಿ ದೆಶೆ ನಿಮಗೆಷ್ಟು ಗೊತ್ತು?” ಎಂಬ ಕಿರು ಹೊತ್ತಗೆಯಲ್ಲೂ “ಕಾಳಸರ್ಪಯೋಗಕ್ಕೂ ಕಾಳಹಸ್ತಿಗೂ ಸಂಬಂಧವಿಲ್ಲ. ಆದ್ದರಿಂದ ನೊಂದವರನ್ನು ಈ ರೀತಿಯಲ್ಲಿ ಶೋಷಿಸುವುದು ಸರಿಯಲ್ಲ’ ಎಂದೂ ಹೇಳುತ್ತಾರೆ.
ಆಶ್ಚರ್ಯವಲ್ಲವೇ! ಹಾಗಾದರೆ ನನ್ನ ಸ್ನೇಹಿತನ ಹೆತ್ತವರು ಕಾಳಹಸ್ತಿಗೂ ಕುಕ್ಕೆ ಸುಬ್ರಮಣ್ಯಕ್ಕೂ ಜತೆಗೆ ಮಂಗಳೂರಿನ ಕುಡುಪುವಿಗೂ ಅನೇಕ ಬಾರಿ ಹೋಗಿ, ಜೋಯಿಸರುಗಳು ಹೇಳಿದ ವಿಧಿಗಳನ್ನೆಲ್ಲ ಸಾವಿರಾರು ರೂಪಾಯಿ ಸುರಿದು ನೆರವೇರಿಸಿದ್ದೆಲ್ಲ ನೀರಲ್ಲಿಟ್ಟ ಹೋಮದಂತಾಯಿತೇ! ಇಂಥ ಅಮಾಯಕರು, ಅದೆಷ್ಟು ಸಂಖ್ಯೆಯಲ್ಲಿ ಈ ರೀತಿ ಮೋಸ ಹೋಗಿರಬಹುದು? ಹಾಗಿದ್ದರೆ ಇಂತಹ ಅಚಾತುರ್ಯಕ್ಕೆ ಯಾರನ್ನು ಹೊಣೆಯಾಗಿಸುವುದು? ಜ್ಯೋತಿಷ್ಯಕ್ಕೆ ಮೊರೆ ಹೋಗುವವರನ್ನೋ ಅಥವಾ ಅಂಥ ವಿಶೇಷ ವಿಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುವವರನ್ನೋ ಎಂಬುದನ್ನು ಜ್ಯೋತಿಷ್ಯ ನಂಬುವವರೇ ನಿರ್ಧರಿಸಬೇಕಾದ ಅಗತ್ಯವಿದೆ.
ಗುರುರಾಜ್ ಸನಿಲ್, ಉರಗತಜ್ಞ