ಕಲಕೇರಿ: ಬಿಸಿಲಿನ ತಾಪದಿಂದ ಬೇಸತ್ತು ಮಾಳಿಗೆ ಮೇಲೆ ಮಲಗಿರುವುದನ್ನು ಅರಿತ ಕಳ್ಳರ ತಂಡವೊಂದು 7-8 ಮನೆಗಳಿಗೆ ಕನ್ನ ಹಾಕಿ ಸಾಕಷ್ಟು ಪ್ರಮಾಣದ ಚಿನ್ನಾಭರಣ, ನಗದು ದೋಚಿ ಪರಾರಿಯಾದ ಘಟನೆ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಕಲಕೇರಿ ಠಾಣಾ ವ್ಯಾಪ್ತಿಯಲ್ಲಿ ಬರುವ ಗೊಲಗೇರಿ ಗ್ರಾಮದಲ್ಲಿ ಸೋಮವಾರ ನಡೆದ ಸರಣಿ ಕಳ್ಳತನ ಘಟನೆ ಮಾಸುವ ಮುನ್ನವೇ ಮರುದಿನವೇ ಇಲ್ಲಿ ಸರಣಿ ಕಳ್ಳತನ ನಡೆದಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ.
ಗ್ರಾಮದ ಅಸ್ಕಿ ರಸ್ತೆಗೆ ಹೊಂದಿಕೊಂಡ ಶಿಕ್ಷಕ ಕಾಶಿನಾಥ ಸಂಗಪ್ಪ ಹೆಗ್ಗಣದೊಡ್ಡಿ ಅವರ ಮನೆಯ ಬೀಗ ಮುರಿದು ಅಂದಾಜು 18 ತೊಲೆ ಬಂಗಾರ, 20 ತೊಲೆ ಬೆಳ್ಳಿ, 1,77 ಲಕ್ಷ ರೂ, ಸಮುದಾಯ ಆರೋಗ್ಯ ಕೇಂದ್ರದ ಹತ್ತಿರವಿರುವ ಶಿವಾನಂದ ಮಡಿವಾಳಪ್ಪ ವಂದಾಲ ಅವರ ಮನೆಯಲ್ಲಿ 11.5 ತೊಲೆ ಬಂಗಾರ, 22 ತೊಲೆ ಬೆಳ್ಳಿ, 2 ಲಕ್ಷ ರೂ, ಸೂಗಪ್ಪ ಮಹಾದೇವಪ್ಪ ಖಾದಿ ಅವರ ಮನೆಯಲ್ಲಿ 2 ತೊಲೆ ಬಂಗಾರ, 1.23 ಲಕ್ಷ ರೂ. ಹಾಗೂ ಇನ್ನಿತರ ವಸ್ತುಗಳು, ಅಯ್ಯಪ್ಪ ಕಾಡಯ್ಯ ಹಿರೇಮಠರ ಮನೆಯಲ್ಲಿ 1 ತೊಲಿ ಬಂಗಾರ 31 ಸಾ.ರೂ., ಶ್ರೀಕಾಂತ ನಾಗಪ್ಪ ಪಾಟೀಲ ಅವರ ಮನೆಯಲ್ಲಿ 1 ತೊಲೆ ಬಂಗಾರ, ಕುಂಟಪ್ಪ ಮಡಿವಾಳಪ್ಪ ದೇಸಾಯಿ ಅವರ ಮನೆಯಲ್ಲಿ 1 ತೊಲೆ ಬಂಗಾರ, 6 ತೊಲೆ ಬೆಳ್ಳಿ, 45 ಸಾ.ರೂ. ದೋಚಿ ಪರಾರಿಯಾಗಿದ್ದಾರೆ. ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಇಂಡಿ ಡಿವಾಯ್‌ಎಸ್‌ಪಿ ಎಂ.ಬಿ. ಸಂಕದ್, ಸಿಂದಗಿ ಸಿಪಿಐ ಮಹಾಂತೇಶ ದ್ಯಾಮಣ್ಣವರ್, ಕಲಕೇರಿ ಪಿಎಸ್‌ಐ ನಾಗರಾಜ್ ಖೀಲಾರೆ, ಶ್ವಾನದಳ ತಂಡ, ಬೆರಳಚ್ಚು ತಜ್ಞರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.