Advertisement

2ಎ ಮೀಸಲಾತಿ ಕೈತಪ್ಪಿದರೆ ಅದಕ್ಕೆ ಮುತ್ತಿಗೆ ಯತ್ನವೇ ಕಾರಣ: ಶಾಸಕ ಬಂಡಿ

04:19 PM Feb 23, 2021 | Team Udayavani |

ಗದಗ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರೂ, ವಿಧಾನಸೌಧಕ್ಕೆ ಮುತ್ತಿಗೆ ಪ್ರಯತ್ನದ ಔಚಿತ್ಯವೇನಿತ್ತು? ಈ ವೇಳೆ ಅಶಾಂತಿ ಸೃಷ್ಟಿಯಾಗಿ, ಜೀವಹಾನಿ ಸಂಭವಿಸಿದ್ದರೆ ಯಾರು ಹೊಣೆ? ಈ ಬಾರಿ ಮೀಸಲಾತಿ ಬೇಡಿಕೆ ಈಡೇರದಿದ್ದರೆ, ಅದಕ್ಕೆ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದವರಿಂದಲೇ ತಪ್ಪಿದಂತಾಗುತ್ತದೆ ಎಂದು ರೋಣ ಶಾಸಕ ಕಳಕಪ್ಪ ಜಿ.ಬಂಡಿ ನೇರವಾಗಿ ಎಚ್ಚರಿಸಿದರು.

Advertisement

ಈ ಕುರಿತು ‘ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, 2ಎ ಮೀಸಲಾತಿಗಾಗಿ ಬೆಂಗಳೂರಿನಲ್ಲಿ ಸಮಾವೇಶ ನಡೆಸಿ, ಸರಕಾರಕ್ಕೆ ಮನವಿ ಪತ್ರ ಸಲ್ಲಿಸುವ ಬಗ್ಗೆ ತೀರ್ಮಾನವಾಗಿತ್ತು. ಸಮಾವೇಶದ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕುವಂತೆ ಯಾರು ಹೇಳಿದರು? ಅದರ ಅಗತ್ಯವೇನಿತ್ತು? ವಿಧಾನಸೌಧ ಸುತ್ತಲಿನ ಕೆಲ ಕಿ.ಮೀ. ವರೆಗೆ ನಿರ್ಬಂಧಿತ ಪ್ರದೇಶವನ್ನಾಗಿಸಿದ್ದು, ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಇದೆಲ್ಲವೂ ಗೊತ್ತಿದ್ದರೂ ಮೀಸಲಾತಿ ಹೋರಾಟಗಾರರನ್ನು ವಿಧಾನಸೌದತ್ತ ನುಗ್ಗಿಸಿದ್ದಾರೆ ಎಂದು ಆರೋಪಿಸಿದರು.

ದೆಹಲಿಯಲ್ಲಿ ಜ.26 ರ ರೈತ ಚಳವಳಿಯಲ್ಲಿ ಕೆಲ ದೇಶ ವಿರೋಧಿ ಶಕ್ತಿಗಳು ನುಸುಳಿದ್ದರಿಂದ ಹಿಂಸೆಗೆ ಕಾರಣವಾಯಿತು. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬ್ಯಾರಿಕೇಡ್ ಕಿತ್ತಿದ್ದಾರೆ. ಆದರೂ, ಪೊಲೀಸರು ತಾಳ್ಮೆ ಕಳೆದುಕೊಂಡಿಲ್ಲ. ಒಂದು ವೇಳೆ ಹೋರಾಟದಲ್ಲಿ ಗಲಾಟೆಗಳಾಗಿ, ಈ ಭಾಗದಿಂದ ತೆರಳಿದ್ದ ಅಮಾಯಕರ ಜೀವಕ್ಕೆ ಹಾನಿ ಸಂಭವಿಸಿದ್ದರೆ ಯಾರು ಜವಾಬ್ದಾರಿ ಎಂದು ತರಾಟೆಗೆ ತೆಗೆದುಕೊಂಡರು.

ಅದೃಷ್ಟವಶಾತ್ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ವಿಧಾನಸೌದತ್ತ ತೆರಳುತ್ತಿದ್ದ ಹೋರಾಟವನ್ನು ಸ್ವತಂತ್ರ್ಯ ಉದ್ಯಾನದತ್ತ ತಿರುಗಿಸಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ಪ್ರವರ್ಗ-2 ಮೀಸಲಾತಿ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದಷ್ಟು ಬೇಗ ಬೇಡಿಕೆಯನ್ನು ಈಡೇರಿಸಲು ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದರು. ಈ ನಡುವೆ ಇಷ್ಟೊಂದು ರಾದ್ಧಾಂತ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು, ಹೋರಾಟಗಳು ಶಾಂತಿಯುತವಾಗಿ ನಡೆಯಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next