ಭೀಮರಾಯ ಕುಡ್ಡಳ್ಳಿ ಕಾಳಗಿ
ಕಾಳಗಿ: ಪಟ್ಟಣದ ಪ್ರತಿಯೊಂದು ಬೀದಿಗಳ ಚರಂಡಿಯ ಗಲೀಜು ನೀರು, ಮಳೆ ನೀರು ಹರಿದು ಹೋಗಲು ಸ್ಥಳಾವಕಾಶವಿಲ್ಲ. ನಿಂತಲ್ಲೇ ನೀರು ನಿಂತು ಸೊಳ್ಳೆಗಳು ತಮ್ಮ ಆವಾಸಸ್ಥಾನ ಮಾಡಿಕೊಂಡು ಇಡೀ ಊರಿಗೆ ರೋಗ ಹಬ್ಬಿಸುತ್ತಿವೆ.
ಡಾ| ಉಮೇಶ ಜಾಧವ ಶಾಸಕರಾಗಿದ್ದಾಗಿನ ಅವಧಿಯಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಒಂದು ಕೊಟಿ ರೂ. ಅನುದಾನ ನೀಡಿ, ಕೆಲವು ಕಡೆ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಮಾಡಲಾಗಿತ್ತು. ಇನ್ನು ಕೆಲವು ಕಡೆಗಳಲ್ಲಿ ಈ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇದರಿಂದ ಮನೆಗಳ ಚರಂಡಿ ನೀರು ರಸ್ತೆಯ ಮೇಲೆ ಹರಿದರೇ, ಇನ್ನು ಕೆಲವು ಚರಂಡಿಗಳಲ್ಲಿ ನೀರು ಮುಂದಕ್ಕೆ ಹರಿದು ಹೋಗಲು ಸ್ಥಳವಿಲ್ಲದಂತಾಗಿದೆ.
ಪಟ್ಟಣದ ಕೆಲವು ಬೀದಿಗಳು ಈ ಅವೈಜ್ಞಾನಿಕ ಚರಂಡಿಗಳಿಂದ ರಸ್ತೆ ಸಂಪರ್ಕವನ್ನೇ ಕಳೆದುಕೊಂಡಿವೆ. ಪಟ್ಟಣದ ಬಹುತೇಕ ಕಡೆಯಲ್ಲಿ ಚರಂಡಿ ನಿರ್ಮಾಣ ಅರ್ಧಕ್ಕೆ ನಿಂತಿದ್ದು, ಒಂದಕ್ಕೊಂದು ಸಂಪರ್ಕಗಳಿಲ್ಲದಂತೆ ಆಗಿದೆ. ಇದರಿಂದ ಕೊಳಚೆ ನೀರು ಮುಂದಕ್ಕೆ ಹರಿದು ಹೊಗಲು ಸ್ಥಳವಿಲ್ಲದೇ ತುಂಬಿಕೊಂಡು ರಸ್ತೆ ಮೇಲೆಲ್ಲ ಹರಿಯುತ್ತಿದೆ. ಹಂದಿಗಳು ಚರಂಡಿ ನೀರಿನಲ್ಲಿ ಮಿಂದೆದ್ದು, ಸುತ್ತಮುತ್ತಲಿನ ಪರಿಸರವೆಲ್ಲ ಹೊಲಸು ಮಾಡುತ್ತಿವೆ. ಇದರಿಂದ ದುರ್ನಾತವೂ ಹೆಚ್ಚಿದೆ.
ಹಲವರಿಗೆ ಜ್ವರಬಾಧೆ: ಸೊಳ್ಳೆಗಳಿಂದ ಕಚ್ಚಿಸಿಕೊಂಡು ಜ್ವರಬಾಧೆಯಿಂದ ಬಳಲುತ್ತಿರುವ ಗ್ರಾಮದ ಮೂರ್‍ನಾಲ್ಕು ಮಕ್ಕಳು, ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದಾಗ ಡೆಂಘೀ ಶಂಕೆಯಿದೆ ಎಂದು ತಿಳಿಸಿದ್ದಾರೆ.