ಕಲಘಟಗಿ: ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಬೃಹತ್ ಪ್ರಮಾಣದ ವಾಹನಗಳಿಗೆ ನರಕದ ಬಾಗಿಲು ತೆರೆದಂತಾಗಿದೆ. ಸಂಚಾರದಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಸಾರ್ವಜನಿಕರಲ್ಲಿ ಹೆದ್ದಾರಿ ಕಾರ್ಯ ವಿಳಂಬದಿಂದ ಅಸಮಾಧಾನ ಭುಗಿಲೇಳುತ್ತಿದೆ.
ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಡಸ್ ಕ್ರಾಸ್‌ದಿಂದ ಆರಂಭವಾಗಿ 4 ಕಿಮೀ ವ್ಯಾಪ್ತಿ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಕೇಂದ್ರದ ಸಾರಿಗೆ ಮತ್ತು ಹೆದ್ದಾರಿ ಇಲಾಖೆಗಳು 36 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸುಮಾರು 2 ವರ್ಷ ಗತಿಸಿದರೂ ಕಾಮಗಾರಿ ಇನ್ನೂ ಮುಗಿದಿಲ್ಲ.
ಕಳೆದ ಬೇಸಿಗೆಯಲ್ಲಿ ಧೂಳಿನಿಂದ ಬೇಸತ್ತ ಜನತೆ ಸರಿಯಾಗಿ ನೀರನ್ನು ಸಿಂಪಡಿಸುತ್ತಿಲ್ಲ ಎಂದು ದೂರುತ್ತಿದ್ದರು. ಆದರೆ ಈಗ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತಷ್ಟು ಹದಗೆಡುತ್ತಿದೆ. ವಾಹನ ಸಂಚಾರಕ್ಕೆ ಅಸ್ತವ್ಯಸ್ತ ಉಂಟಾಗುತ್ತಿದೆ. ಸಾರ್ವಜನಿಕರು ಪಡಬಾರದ ಪಡಿಪಾಟಲು ಪಡುತ್ತಿದ್ದಾರೆ. ಅಲ್ಲಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತಿದ್ದು, ಯಾವ ಮಾರ್ಗ ಪೂರ್ತಿಯಾಗಿದೆ ಎಂಬುದೇ ಕಂಡುಬರುತ್ತಿಲ್ಲ. ಕೆಲವು ಕಡೆ ನಾಮಫಲಕಗಳು ಕಂಡುಬರದೆ ವಾಹನ ಚಾಲಕರು ರಾತ್ರಿ ಹೊತ್ತಲ್ಲಿ ಸಂಚರಿಸುವಾಗ ಅಪಘಾತ ಸಂಭವಿಸುವ ಪರಿಸ್ಥಿತಿ ಉಂಟಾಗುತ್ತಿದೆ. ಒಟ್ಟಿನಲ್ಲಿ ಚತುಷ್ಪಥ ರಸ್ತೆ ಮುಗಿದರೆ ಸಾಕಪ್ಪ ಎಂದು ಜನರು ಗೋಗರೆಯುತ್ತಿದ್ದಾರೆ.
ಪಟ್ಟಣದ ಮಧ್ಯವರ್ತಿ ಹೃದಯ ಭಾಗದಲ್ಲಿನ ಕಾಮಗಾರಿಯಿಂದಾಗಿ ಅಲ್ಲಲ್ಲಿ ಬಿಎಸ್‌ಎನ್‌ಎಲ್ನ ಕೇಬಲ್ಗಳು ಕಡಿತಗೊಂಡು ಇಂಟರ್‌ನೆಟ್ ಸೌಲಭ್ಯದಿಂದ ವಂಚಿತಗೊಳ್ಳಬೇಕಾಗಿದೆ. ಸರ್ಕಾರದ ಎಲ್ಲ ಸೌಲಭ್ಯಗಳು ಅಂತರ್ಜಾಲದಲ್ಲಿಯೇ ಜರುಗಬೇಕಿದ್ದು, ಬ್ಯಾಂಕ್ ಸೌಲಭ್ಯ, ಪಡಿತರ ಚೀಟಿ, ಉತಾರ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಸರ್ಟಿಪಿಕೇಟ್‌ಗಳನ್ನು ಪಡೆಯಲು ಪರದಾಡುವಂತಾಗಿದೆ. ಆದಷ್ಟು ಬೇಗ ಗುಣಮಟ್ಟದ ಕಾಮಗಾರಿ ಮುಗಿಸಿ ಸಂಬಂಧಿಸಿದ ಅಧಿಕಾರಿ ವರ್ಗ, ಗುತ್ತಿಗೆದಾರರು ಜನರ ಸಂಕಷ್ಟ ಪರಿಹರಿಸಲು ಮುಂದಾಗಬೇಕಿದೆ.
•ಪ್ರಭಾಕರ ನಾಯಕ್