Advertisement

ಜಿಲ್ಲಾದ್ಯಂತ ಯೋಗ ದಿನ ಸಂಭ್ರಮ

09:39 AM Jun 22, 2019 | Team Udayavani |

ಕಲಬುರಗಿ: ಜಿಲ್ಲಾದ್ಯಂತ ಶುಕ್ರವಾರ 5ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಡಗರದಿಂದ ಆಚರಿಸಲಾಯಿತು. ವಿವಿಧ ಶಾಲಾ-ಕಾಲೇಜುಗಳು, ಆಧ್ಯಾತ್ಮಿಕತೆ ಸಂಸ್ಥೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಲಾಯಿತು.

Advertisement

ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಆಯುಷ್‌ ಇಲಾಖೆ ಸಂಯುಕ್ತಾಶ್ರಯದಲ್ಲಿ ಯೋಜಿಸಲಾಗಿದ್ದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕತೆಯ ಭಾರತೀಯ ಯೋಗ ಪದ್ಧತಿಯು ಸುಮಾರು 5,000 ವರ್ಷಗಳ ಇತಿಹಾಸ ಹೊಂದಿದೆ ಎಂದು ಹೇಳಿದರು.

ಯೋಗ ಕೇವಲ ದಿನಾಚರಣೆಗೆ ಸೀಮಿತವಾಗದೇ ಪ್ರತಿ ದಿನ ಯೋಗ ಮಾಡುವುದರ ಮೂಲಕ ರೋಗದಿಂದ ಮುಕ್ತಿ ಪಡೆಯಬಹುದಾಗಿದೆ. ಯೋಗದ ಮಹತ್ವ ಅರಿತು ವಿಶ್ವದ 100ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ ಎಂದರು.

ಜಿಪಂ ಸಿಇಒ ಡಾ| ಪಿ. ರಾಜಾ ಮಾತನಾಡಿ, ಆಧ್ಯಾತ್ಮಿಕತೆಯಲ್ಲಿ ಭಾರತವು ವಿಶ್ವಕ್ಕೆ ನೀಡಿರುವ ಬಹುದೊಡ್ಡ ಕೊಡುಗೆ ಯೋಗ. ಭಾರತೀಯ ಯೋಗ ಪರಂಪರೆ ಒಪ್ಪಿಕೊಂಡು ಇಡೀ ವಿಶ್ವ ಯೋಗ ದಿನಾಚರಣೆ ಸಂಭ್ರಮದಲ್ಲಿ ಭಾಗವಹಿಸಿದೆ. ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

Advertisement

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ. ಶಿವಲೀಲಾ ಮಾತನಾಡಿ, ಆಧ್ಯಾತ್ಮಿಕತೆಯಲ್ಲಿ ಭಾರತವು ಇಂದು ವಿಶ್ವ ಗುರುವಿನ ಸ್ಥಾನದಲ್ಲಿದೆ. ಮನಸಿಲ್ಲಿನಲ್ಲಿರುವ ಕಲ್ಮಶಗಳನ್ನು ಶುದ್ಧಗೊಳಿಸಲು ಯೋಗ ಮತ್ತು ಧ್ಯಾನದಿಂದ ಮಾತ್ರ ಸಾಧ್ಯ ಅಭಿಪ್ರಾಯಪಟ್ಟರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ನಾಗರತ್ನ ಚಿಮ್ಮಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಉದ್ಘಾಟಿಸಿದರು.

ಜಿಪಂ ಸದಸ್ಯ ರೇವಣಸಿದ್ದಪ್ಪ ಸಂಕಾಲೆ, ಅಪರ ಜಿಲ್ಲಾಧಿಕಾರಿ ಬಿ.ಶರಣಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಮಾಧವರಾವ ಕೆ. ಪಾಟೀಲ, ಡಿಡಿಪಿಐ ಶಾಂತಗೌಡ ಪಾಟೀಲ, ಡಾ| ಅಂಬಾರಾಯ ರುದ್ರವಾಡಿ, ರವಿಂದ್ರ, ಕೆಎಸ್‌ಆರ್‌ಪಿ 6ನೇ ಪಡೆ ಕಮಾಂಡೆಂಟ್ ಬಸವರಾಜ ಜಿರಳೆ, ಕಮಾಂಡೆಂಟ್ ಸಿ.ಗುರುನಾಥ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಇದಕ್ಕೂ ಮುನ್ನ ಭೂಮಿ ಯೋಗ ಫೌಂಡೇಷನ್‌ ಸಂಸ್ಥೆಯ ಯೋಗ ಪಟು ನಾಗರಾಜ ಸಾಲೊಳ್ಳಿ ಮತ್ತವರು ಯೋಗಾಸನ ಪ್ರದರ್ಶನ ನಡೆಸಿಕೊಟ್ಟರು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಲಯನ್ಸ್‌ ಕ್ಲಬ್‌ ಸದಸ್ಯರು, ಸಾರ್ವಜನಿಕರು ಸೇರಿದಂತೆ ಸಾವಿರಕ್ಕಿಂತ ಹೆಚ್ಚಿನ ಜನರು ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next